SOCIAL MEDIA

Newsletter

PARTNER SITES
Select Language Select State

ನಂದಿನಿ ಹಾಲಿನ ದರ ಲೀಟರ್‌ಗೆ ₹10 ಏರಿಕೆಗೆ ಪ್ರಸ್ತಾವನೆ: ಸಿಎಂ ಅಂಗಳ ತಲುಪಿದ ನಿರ್ಧಾರ!

ಪ್ರಸ್ತುತ ದಿನಗಳಲ್ಲಿ ದನಗಳ ಹಿಂಡಿ, ಬೂಸಾ ಹಾಗೂ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಉತ್ಪಾದಕರಿಗೆ ಸಿಗುತ್ತಿರುವ ಬೆಲೆ ಅತ್ಯಂತ ಕಡಿಮೆಯಾಗಿದೆ.

Reported By Manjunath Naragund Written By Manjunath Naragund
Published: Sep 27, 2026, 04:18 PM IST | Updated: Sep 27, 2026, 04:27 PM IST
Image Credit: Representation only
Join

ಬೆಂಗಳೂರು: ರಾಜ್ಯದ ರೈತರ ಹಾಗೂ ಹಾಲು ಒಕ್ಕೂಟಗಳ ದೀರ್ಘಕಾಲದ ಬೇಡಿಕೆಯಾಗಿದ್ದ ನಂದಿನಿ ಹಾಲಿನ ದರ ಏರಿಕೆ ವಿಚಾರ ಇದೀಗ ಸರ್ಕಾರದ ಅಂಗಳ ತಲುಪಿದೆ. ಪ್ರಸ್ತುತ ಪ್ರತಿ ಲೀಟರ್ ಹಾಲಿನ ದರವನ್ನು ₹10 ರಷ್ಟು ಹೆಚ್ಚಿಸಬೇಕು ಎಂದು ರಾಜ್ಯದ ವಿವಿಧ ಹಾಲು ಒಕ್ಕೂಟಗಳು ಹಾಗೂ ಹಾಲಿನ ಉತ್ಪಾದಕ ರೈತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ನೆರೆಯ ರಾಜ್ಯಗಳಲ್ಲಿ ಹಾಲಿನ ದರ ಹಾಗೂ ರೈತರಿಗೆ ನೀಡುತ್ತಿರುವ ಸಬ್ಸಿಡಿ/ಖರೀದಿ ದರವನ್ನು ಪರಿಶೀಲಿಸಿ, ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಕರ್ನಾಟಕದ ರೈತರಿಗೆ ಸಿಗುತ್ತಿದೆ ಅತ್ಯಂತ ಕಡಿಮೆ ಬೆಲೆ:

ಪ್ರಸ್ತುತ ದಿನಗಳಲ್ಲಿ ದನಗಳ ಹಿಂಡಿ, ಬೂಸಾ ಹಾಗೂ ನಿರ್ವಹಣಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ದೇಶದ ಇತರ ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಉತ್ಪಾದಕರಿಗೆ ಸಿಗುತ್ತಿರುವ ಬೆಲೆ ಅತ್ಯಂತ ಕಡಿಮೆಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ನಂದಿನಿ ಹಾಲು ಒಕ್ಕೂಟವು ರೈತರಿಗೆ ಪ್ರತಿ ಲೀಟರ್‌ಗೆ ಕೇವಲ ₹35 ನೀಡುತ್ತಿದೆ. ಆದರೆ, ನೆರೆಯ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ ₹40 ಕ್ಕಿಂತಲೂ ಹೆಚ್ಚು ನೀಡಲಾಗುತ್ತಿದೆ. ಈ ತಾರತಮ್ಯವೇ ಇದೀಗ ರಾಜ್ಯದ ರೈತರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಇತರ ರಾಜ್ಯಗಳ ಹಾಲು ಒಕ್ಕೂಟಗಳು ರೈತರಿಗೆ ನೀಡುತ್ತಿರುವ ದರ (ಪ್ರತಿ ಲೀಟರ್‌ಗೆ):

ಆವಿನ್ (ತಮಿಳುನಾಡು): ₹42.24
ಹೆರಿಟೇಜ್ (ತೆಲಂಗಾಣ): ₹42.00
ಮಿಲ್ಮಾ (ಕೇರಳ): ₹41.80
ವಿಜಯ ಬ್ರಾಂಡ್ (ತೆಲಂಗಾಣ): ₹41.05
ಆರೋಕ್ಯ (ತಮಿಳುನಾಡು): ₹41.00
ಮದರ್ ಡೈರಿ (ದೆಹಲಿ): ₹40.64
ಅಮೂಲ್ (ದೆಹಲಿ): ₹40.50
ಗೋಕೂಲ್ (ಮಹಾರಾಷ್ಟ್ರ): ₹40.05
ಅಮೂಲ್ (ಗುಜರಾತ್): ₹40.03
ಅಮೂಲ್ (ಮಹಾರಾಷ್ಟ್ರ): ₹40.00

ರೈತರ ಹಿತರಕ್ಷಣೆ ಹಾಗೂ ಸರ್ಕಾರದ ನಡೆ:

ತಮಿಳುನಾಡಿನ ಆವಿನ್ ಸಂಸ್ಥೆ ಲೀಟರ್‌ಗೆ ₹42.24 ಹಾಗೂ ಕೇರಳದ ಮಿಲ್ಮಾ ₹41.80 ರಷ್ಟು ಹೆಚ್ಚಿನ ಮೊತ್ತವನ್ನು ರೈತರಿಗೆ ನೀಡುತ್ತಿದ್ದರೆ, ಕರ್ನಾಟಕದಲ್ಲಿ ನೀಡುತ್ತಿರುವ ₹35 ತೀರಾ ಕಡಿಮೆಯಾಗಿದೆ. ರೈತರ ಹಿತದೃಷ್ಟಿಯಿಂದ ಹಾಲಿನ ದರವನ್ನು ಕನಿಷ್ಠ ₹10 ಹೆಚ್ಚಿಸಿದರೆ ಮಾತ್ರ ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗಲು ಸಾಧ್ಯ ಎಂಬುದು ಒಕ್ಕೂಟಗಳ ವಾದ.

ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಹಾಗೂ ರೈತರಿಗೆ ಸೂಕ್ತ ಬೆಲೆ ಸಿಗುವಂತೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆಯ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES