ಪ್ರತಾಪ್ ಸಿಂಹ ಜಾತಿ ನಿಂದನೆ ಪ್ರಕರಣ: ವಿಚಾರಣೆ ಸೆಪ್ಟೆಂಬರ್ 28ಕ್ಕೆ ಮುಂದೂಡಿದ ಹೈಕೋರ್ಟ್
ಪ್ರತಾಪ್ ಸಿಂಹ ಜಾತಿ ನಿಂದನೆ ಪ್ರಕರಣ: ವಿಚಾರಣೆ ಸೆಪ್ಟೆಂಬರ್ 28ಕ್ಕೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಟಿ.ನರಸೀಪುರದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ವೇಳೆ ದಾಖಲಾಗಿರುವ ಜಾತಿ ನಿಂದನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠವು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರ ಪ್ರತಾಪ್ ಸಿಂಹ ಪರ ವಕೀಲ ವೆಂಕಟೇಶ್ ದಳವಾಯಿ ಹಾಗೂ ಸರ್ಕಾರದ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ನಡುವೆ ವಾದ-ಪ್ರತಿವಾದ ನಡೆಯಿತು.
ಅರ್ಜಿದಾರರ ಪರ ವಾದವೇನು?
ಪ್ರತಾಪ್ ಸಿಂಹ ಪರ ವಾದ ಮಂಡಿಸಿದ ವಕೀಲ ವೆಂಕಟೇಶ್ ದಳವಾಯಿ, "ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆ ತೀರಾ ಶಾಂತಿಯುತವಾಗಿ ನಡೆದಿದೆ. ಬೇರೆ ಸಮುದಾಯದವರೂ ಕೂಡ ಮೆರವಣಿಗೆಯನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಈ ಘಟನೆಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ಆಧಾರರಹಿತವಾಗಿ ದೂರು ನೀಡಿದ್ದಾರೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಯಾವುದೇ ಸೆಕ್ಷನ್‌ಗಳು ಈ ಪ್ರಕರಣಕ್ಕೆ ಅನ್ವಯವಾಗುವುದಿಲ್ಲ" ಎಂದು ನ್ಯಾಯಪೀಠದ ಗಮನಕ್ಕೆ ತಂದರು.
"ಘಟನೆ ವೇಳೆ ಇನ್ಸ್‌ಪೆಕ್ಟರ್ ಧನಂಜಯ್ ಅವರು ನೀಡಿದ 4 ನಿಮಿಷಗಳ ಹೇಳಿಕೆ ತೀರಾ ಸಮಯೋಚಿತವಾಗಿತ್ತು. ಮಸೀದಿ ಮುಂದೆ ಎದ್ದೇಳುತ್ತಾ ಎಂದು ಇನ್ಸ್‌ಪೆಕ್ಟರ್ ಹೇಳಿದಾಗ, ಒಂದೇ ಒಂದು ಪದವನ್ನು ಹಿಡಿದುಕೊಂಡು ಅವರ ಮೇಲೆ ಬೆದರಿಕೆ ಹಾಕಲಾಗಿದೆ. ಪ್ರತಾಪ್ ಸಿಂಹ ಅವರು 'ಅಂಬೇಡ್ಕರ್ ಬಗ್ಗೆ ಓದಿಕೊಳ್ಳಿ' ಎಂದು ಹೇಳಿದ್ದನ್ನೇ ಕಾರಣವಾಗಿಟ್ಟುಕೊಂಡು ದೂರು ನೀಡಲಾಗಿದೆ. ಹೀಗಾಗಿ ಈ ಎಫ್‌ಐಆರ್‌ನಲ್ಲಿ ಯಾವುದೇ ಹುರುಳಿಲ್ಲ" ಎಂದು ವಕೀಲರು ಪ್ರತಿಪಾದಿಸಿದರು.
ಸರ್ಕಾರದ ಪರ ಎಸ್‌ಪಿಪಿ ವಾದ:
ಇದೇ ವೇಳೆ ಸರ್ಕಾರದ ಪರವಾಗಿ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿ, "ಒಬ್ಬರು ಪೊಲೀಸ್ ಸ್ಟೇಷನ್‌ನಲ್ಲಿ ಮಾತನಾಡಿದ್ದರೆ, ಇನ್ನೊಬ್ಬರು ಮೈಕ್‌ನಲ್ಲಿ ಮಾತನಾಡಿದ್ದಾರೆ" ಎಂದು ಘಟನೆಯ ಸ್ವರೂಪವನ್ನು ಕೋರ್ಟ್‌ಗೆ ವಿವರಿಸಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ, "ಘಟನೆಯಿಂದ ಯಾವುದೇ ಶಾಂತಿಭಂಗವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಈ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದು" ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಕಾಯ್ದಿರಿಸಿದೆ.