ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆ ಮತ್ತು ಶಾಸಕ ಪ್ರದೀಪ್ ಈಶ್ವರ ಸೇರಿದಂತೆ ಕಾಂಗ್ರೆಸ್ ನಾಯಕರ ಆರ್‌ಎಸ್‌ಎಸ್ ಕುರಿತ ಮಾತುಗಳಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ತಿರುಗೇಟು ನೀಡಿದ್ದಾರೆ.
"ಹುಚ್ಚರನ್ನ ಯಾರಾದರೂ ಜೈಲಿಗೆ ಹಾಕ್ತಾರಾ?"
ನಟ ಪ್ರಕಾಶ್ ರಾಜ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಇಬ್ಬರೂ ಹುಚ್ಚರು, ಇವರನ್ನು ಸಮಾಜವೇ ದೂರ ಇಟ್ಟಿದೆ ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. "ಮೋದಿ 13 ವರ್ಷದಿಂದ ನನ್ನನ್ನು ಬಂಧಿಸಲಿಲ್ಲ ಎಂದು ಪ್ರಕಾಶ್ ರಾಜ್ ಹೇಳುತ್ತಾರೆ. ಹುಚ್ಚರನ್ನ ಯಾರಾದರೂ ಬಂಧಿಸಿ ಜೈಲಿಗೆ ಹಾಕುತ್ತಾರಾ?" ಎಂದು ಪ್ರಶ್ನಿಸಿದರು.
ಮುಂದುವರಿದು ಮಾತನಾಡಿದ ಅವರು, "ಒಬ್ಬ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾನೆ. ಇನ್ನೊಬ್ಬ ಗ್ಯಾರಂಟಿ ಶಿಶು, ಮಿಸ್ಸಾಗಿ ಐದು ವರ್ಷಕ್ಕೆ ಶಾಸಕನಾಗಿ ಆಯ್ಕೆಯಾಗಿದ್ದಾನೆ. ನಾನು ಆನ್ ರೆಕಾರ್ಡ್ ಹೇಳುತ್ತಿದ್ದೇನೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ಕೊಡುವುದಿಲ್ಲ. ಅಲ್ಲಿಗೆ ಈಗಾಗಲೇ ಬೇರೆಯವರನ್ನು ಆಯ್ಕೆ ಮಾಡಿ ಇಡಲಾಗಿದೆ. ಐದು ವರ್ಷ ಏನು ಬೇಕಾದರೂ ಮಾತನಾಡಿಕೊಳ್ಳಲಿ ಎಂದು ಸುಮ್ಮನೆ ಬಿಟ್ಟಿದ್ದಾರೆ" ಎಂದು ತಿರುಗೇಟು ನೀಡಿದರು.
ಡಿ.ಕೆ. ಶಿವಕುಮಾರ್‌ಗೆ ನಿಜವಾದ ಕಂಟಕ 'ಬಿಕೆ-ಪಿಕೆ'
ಆರ್‌ಎಸ್‌ಎಸ್ ಚಡ್ಡಿ ಹಾಗೂ ಲಾಠಿ ಕುರಿತು ಬಿ.ಕೆ. ಹರಿಪ್ರಸಾತ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ಡಿ.ಕೆ. ಶಿವಕುಮಾರ್‌ಗೆ ದೊಡ್ಡ ಕಂಟಕ ಇರುವುದೇ ಬಿ.ಕೆ. ಹರಿಪ್ರಸಾದ್ ಹಾಗೂ ಪ್ರಿಯಾಂಕ್ ಖರ್ಗೆ (ಪಿಕೆ) ಅವರಿಂದ. ಇವರಿಬ್ಬರೂ ಹೀಗೆಯೇ ಮಾತನಾಡುತ್ತಿದ್ದರೆ ರಾಜ್ಯದಲ್ಲಿ ಜನ ಕಾಂಗ್ರೆಸ್ ಅನ್ನು ದೂಳಿಪಟ ಮಾಡುತ್ತಾರೆ" ಎಂದು ಕಿಡಿಕಾರಿದರು.
SIR ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಬೆಂಬಲ
ರಾಜ್ಯದಲ್ಲಿ 'ವಿಶೇಷ ಸಾಂಸ್ಥಿಕ ಪರಿಷ್ಕರಣೆ' (SIR) ಕುರಿತು ವಿಶೇಷ ಅಧಿವೇಶನ ಕರೆಯಬೇಕು ಎಂಬ ಪ್ರಕಾಶ್ ರಾಜ್ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ, "ಈ ವಿಚಾರವಾಗಿ ಡಿ.ಕೆ. ಶಿವಕುಮಾರ್ ಮೊದಲೇ ಯಾಕೆ ಆಸಕ್ತಿ ವಹಿಸಿದ್ದರು? 2002ರ ನಂತರ ಮತದಾರರ ಪಟ್ಟಿ ಸರಿಯಾಗಿ ಪರಿಷ್ಕರಣೆಯಾಗಿಲ್ಲ. ಒಬ್ಬನೇ ಮತದಾರ ನಾಲ್ಕೈದು ಕಡೆ ವೋಟ್ ಇಟ್ಟುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಒಟ್ಟು ಜನಸಂಖ್ಯೆಗಿಂತ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದಾಗಿ ಪ್ರತಿ ಚುನಾವಣೆಯಲ್ಲೂ ಕೇವಲ 40-50% ಮತದಾನವಾಗುತ್ತಿದೆ. SIR ಜಾರಿಯಾದರೆ 80%ಕ್ಕೂ ಅಧಿಕ ಮತದಾನವಾಗಲಿದೆ" ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್‌ನ 'ಸಿಂಪತಿ' ರಾಜಕಾರಣಕ್ಕೆ ಪ್ರತಾಪ್ ಸಿಂಹ ಟೀಕೆ
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಪ್ರತಾಪ್ ಸಿಂಹ, "ಪೆರಂಬೂರಿನಲ್ಲಿ ರಾಜೀವ್ ಗಾಂಧಿ ಹತ್ಯೆಯಾದಾಗ ಅಂದಿನ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು 21 ದಿನ ಚುನಾವಣೆ ಮುಂದೂಡಿದ್ದರು. ಅದಾಗಲೇ 200 ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿತ್ತು. ಉಳಿದ ಕ್ಷೇತ್ರಗಳಲ್ಲಿ ರಾಜೀವ್ ಗಾಂಧಿಯವರ ಅಸ್ಥಿಯನ್ನು ಮುಂದಿಟ್ಟು ಕಾಂಗ್ರೆಸ್ ಸಿಂಪತಿ ಗಿಟ್ಟಿಸಿಕೊಂಡು ಪಿ.ವಿ. ನರಸಿಂಹರಾವ್ ಸರ್ಕಾರ ಅಧಿಕಾರಕ್ಕೆ ಬಂತು. ಅದನ್ನು ನಾವು ಫ್ರಾಡ್ ಎಂದು ಹೇಳಿದ್ದೇವಾ?" ಎಂದು ಪ್ರಶ್ನಿಸಿದರು.
"ರಾಹುಲ್ ಗಾಂಧಿಯವರು ಸ್ಟ್ಯಾಂಡ್-ಅಪ್ ಕಾಮೆಡಿಯನ್ ಇಟ್ಟುಕೊಂಡು ಕ್ಷುಲ್ಲಕ ವ್ಯಕ್ತಿತ್ವದ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ. ಯಾವುದೇ ತಾಯಿಯನ್ನು ಈ ರೀತಿ ಈಯಾಳಿಸಬಾರದು. ಇದನ್ನೆಲ್ಲ ಗಮನಿಸುತ್ತಿರುವ ಜನ ಮುಂಬರುವ ಚುನಾವಣೆಯಲ್ಲಿ ನಿಮಗ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ಎಚ್ಚರಿಸಿದರು.