ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ ಒಂದಿಲ್ಲೊಂದು ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಜನರಿಗೆ ದೀಪಾವಳಿ ಶುಭಾಶಯ ಹೇಳುವ ಬದಲು ಬೆಲೆ ಏರಿಕೆಯ ಉಡುಗೊರೆ ನೀಡಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು, ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್, ನೀರು, ಮದ್ಯ ಸೇರಿದಂತೆ ವಿವಿಧ ಸೇವೆಗಳ ದರವನ್ನು ಸರ್ಕಾರ ಪದೇಪದೆ ಹೆಚ್ಚಿಸಿದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಸಂಪೂರ್ಣ ಲಾಭ ತಲುಪುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮೂರು ಬಾರಿ, ಬಸ್ ಪ್ರಯಾಣ ದರವನ್ನು ಎರಡು ಬಾರಿ ಹೆಚ್ಚಿಸಲಾಗಿದೆ. ಕಾವೇರಿ ಕುಡಿಯುವ ನೀರಿನ ದರ ಶೇ.10, ಒಳಚರಂಡಿ ಶುಲ್ಕ ಶೇ.25, ಮದ್ಯದ ಬೆಲೆ ಶೇ.20 ಹಾಗೂ ಮದ್ಯದ ಪರವಾನಗಿ ಶುಲ್ಕ ಶೇ.50ರಷ್ಟು ಹೆಚ್ಚಿಸಲಾಗಿದೆ ಎಂದು ಆರೋಪಿಸಿದರು.
ವಿದ್ಯುತ್ ದರವನ್ನು ಎರಡು ಬಾರಿ ಹೆಚ್ಚಿಸಲಾಗಿದ್ದು, ಮತ್ತೆ ಏರಿಕೆ ಮಾಡುವ ಪ್ರಸ್ತಾವನೆಯಿದೆ. ಮೆಟ್ರೋ ಪ್ರಯಾಣ ದರ, ವಾಹನ ನೋಂದಣಿ ಶುಲ್ಕ, ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ, ಕಸ ನಿರ್ವಹಣೆ ತೆರಿಗೆ, ಆಸ್ತಿ ಮಾರ್ಗಸೂಚಿ ದರ, ಮುದ್ರಾಂಕ ಶುಲ್ಕ, ಗ್ರಾಮ ಪಂಚಾಯಿತಿ ಖಾತಾ ಶುಲ್ಕ ಸೇರಿದಂತೆ ವಿವಿಧ ತೆರಿಗೆ ಮತ್ತು ಸೇವಾ ಶುಲ್ಕಗಳನ್ನೂ ಹೆಚ್ಚಿಸಲಾಗಿದೆ. ಇದರಿಂದ ಸಾಮಾನ್ಯ ಜನರು, ವ್ಯಾಪಾರಿಗಳು ಹಾಗೂ ನಿರ್ಮಾಣ ಕ್ಷೇತ್ರದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ ಎಂದರು.
ಜನರಿಂದ ₹60 ಸಾವಿರ ಕೋಟಿ ಸಂಗ್ರಹದ ಗುರಿ?
ರಾಜ್ಯ ಸರ್ಕಾರದ ವಿವಿಧ ತೆರಿಗೆ ಮತ್ತು ಶುಲ್ಕ ಹೆಚ್ಚಳಗಳಿಂದ ವಾರ್ಷಿಕ ಸುಮಾರು ₹60 ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹವಾಗುವ ಅಂದಾಜಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ₹6 ಸಾವಿರ ಕೋಟಿ, ಬಸ್ ಪ್ರಯಾಣ ದರದಿಂದ ₹1 ಸಾವಿರ ಕೋಟಿ, ವಾಹನ ನೋಂದಣಿ ಶುಲ್ಕದಿಂದ ₹3,712 ಕೋಟಿ, ಮೆಟ್ರೋ ದರ ಹೆಚ್ಚಳದಿಂದ ₹450 ಕೋಟಿ ಹಾಗೂ ಆಸ್ತಿ ಮಾರ್ಗಸೂಚಿ ದರ ಹೆಚ್ಚಳದಿಂದ ₹5 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ವಿದ್ಯುತ್ ದರ ಹೆಚ್ಚಳದಿಂದಲೂ ಹೆಚ್ಚುವರಿ ಆದಾಯ ಬರುತ್ತಿದೆ. ಇಷ್ಟೆಲ್ಲ ಸಂಗ್ರಹಿಸುವ ಸರ್ಕಾರ ಕೇಂದ್ರದ ಮೇಲೆ ಬೆಲೆ ಏರಿಕೆಯ ಆರೋಪ ಮಾಡುವುದು ಎಷ್ಟು ಸರಿ? ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ವೇತನ ಹಾಗೂ ಇತರ ವೆಚ್ಚ ಭರಿಸಲು ಸರ್ಕಾರದ ಬಳಿ ಹಣದ ಕೊರತೆಯಿದೆ ಎಂಬ ಮಾತುಗಳಿವೆ. ಇಂತಹ ವೆಚ್ಚಗಳಿಗಾಗಿ ಜನರ ಮೇಲೆ ತೆರಿಗೆ ಮತ್ತು ಶುಲ್ಕಗಳ ಹೊರೆ ಹಾಕಲಾಗುತ್ತಿದೆ ಎಂದು ಟೀಕಿಸಿದರು.
ಎಸ್‌ಐಆರ್ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಮಾತನಾಡಿದ ಅವರು, ದೇಶದಲ್ಲಿ ಹಲವು ದಶಕಗಳಿಂದ ವಿವಿಧ ಸಂದರ್ಭಗಳಲ್ಲಿ ಎಸ್‌ಐಆರ್ ನಡೆದಿದೆ. 1952ರಿಂದ 1956ರವರೆಗೆ, 1957, 1961, 1965, 1966, 1983-84, 1987-89, 1992-93, 1995, 2002-03 ಹಾಗೂ 2004ರಲ್ಲಿಯೂ ವಿವಿಧ ಹಂತಗಳಲ್ಲಿ ಪರಿಷ್ಕರಣೆ ನಡೆದಿದೆ. ಈಗ ತಂತ್ರಜ್ಞಾನ ಆಧರಿಸಿ ಪ್ರಕ್ರಿಯೆ ನಡೆಯುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬೇಕಾದವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಚುನಾವಣಾ ಆಯೋಗ ಈ ಕುರಿತು ವಿಶೇಷ ಅಭಿಯಾನವನ್ನೂ ನಡೆಸುತ್ತಿದೆ. ಆದರೂ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್‌ಗೂ ಮುನ್ನವೇ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ತಮಿಳುನಾಡಿನಲ್ಲಿ 1967ರಿಂದ, ಪಶ್ಚಿಮ ಬಂಗಾಳದಲ್ಲಿ 1977ರಿಂದ ಕಾಂಗ್ರೆಸ್ ಅಧಿಕಾರದಿಂದ ದೂರವಿದೆ. ಮಧ್ಯಪ್ರದೇಶದಲ್ಲಿ ಹಲವು ವರ್ಷಗಳಿಂದ ಅಧಿಕಾರಕ್ಕೆ ಬಂದಿಲ್ಲ. ಹೀಗಿರುವಾಗ ಚುನಾವಣಾ ಸೋಲಿಗೆಲ್ಲ ಎಸ್‌ಐಆರ್ ಅಥವಾ ಇವಿಎಂ ಕಾರಣ ಎಂದು ಹೇಳುವುದು ಸರಿಯಲ್ಲ ಎಂದರು.
ಎಥೆನಾಲ್ ಮಿಶ್ರಣದ ಬಗ್ಗೆ ಅಪಪ್ರಚಾರ
ಪೆಟ್ರೋಲ್‌ನಲ್ಲಿ ಶೇ.31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪವೂ ಆಧಾರರಹಿತವಾಗಿದೆ. ದೇಶದಲ್ಲಿ ನಿಗದಿತ ನೀತಿಯಂತೆ ಪ್ರಸ್ತುತ ಶೇ.20ರಷ್ಟು ಎಥೆನಾಲ್ ಮಿಶ್ರಣದ ಗುರಿ ಜಾರಿಯಲ್ಲಿದೆ. ಪರೀಕ್ಷೆಗೆ ಸಂಗ್ರಹಿಸಿದ 63 ಮಾದರಿಗಳ ಪೈಕಿ ಪ್ರಕಟಿಸಿರುವ 14 ಫಲಿತಾಂಶಗಳಲ್ಲಿ 11 ಮಾದರಿಗಳು ನಿಗದಿತ ಶೇ.20ರ ಮಿತಿಯೊಳಗಿವೆ. ಎಥೆನಾಲ್ ಮಿಶ್ರಣಕ್ಕೆ ಸಂಬಂಧಿಸಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಸಚಿವಾಲಯ ನಿಗದಿಪಡಿಸಿದ ಪರೀಕ್ಷಾ ಕ್ರಮಗಳಿವೆ. ಅವುಗಳನ್ನು ಅನುಸರಿಸದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಎಥೆನಾಲ್ ಬಳಕೆಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವುದರ ಜತೆಗೆ ವಿದೇಶಿ ಇಂಧನ ಆಮದು ಅವಲಂಬನೆ ಕಡಿಮೆಯಾಗಲಿದೆ. ದೇಶದ ಒಟ್ಟು ತೈಲ ಅಗತ್ಯದ ಶೇ.85ರಿಂದ 90ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಇಂಧನ ಸ್ವಾವಲಂಬನೆಗೆ ಎಥೆನಾಲ್ ಮಿಶ್ರಣ ಪ್ರಮುಖ ಹೆಜ್ಜೆಯಾಗಿದೆ. ಎಥೆನಾಲ್ ಖರೀದಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ಬರುವ ಹಣ ರೈತರಿಗೆ ತಲುಪುವಂತೆ ಆದ್ಯತೆ ನೀಡಬೇಕು ಎಂದರು.
ರಾಜ್ಯದಲ್ಲಿ ಜನರ ಮೇಲೆ ಹಾಕಿರುವ ಹೆಚ್ಚುವರಿ ತೆರಿಗೆಗಳನ್ನು ಸರಿಪಡಿಸುವುದು ಬಿಜೆಪಿಯ ಆದ್ಯತೆಯಾಗಲಿದೆ. ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ವಿರೋಧ ಪಕ್ಷ ಎಂದರೆ ಶತ್ರುವಲ್ಲ. ಆದರೆ ಕಾಂಗ್ರೆಸ್ ಉತ್ತಮ ಕೆಲಸಗಳಿಗೂ ಬೆಂಬಲ ನೀಡದೆ ರಾಜಕೀಯ ಆರೋಪಗಳಲ್ಲಿ ತೊಡಗಿದೆ ಎಂದು ಟೀಕಿಸಿದರು.