ಅಂತರಜಾತಿ ವಿವಾಹ, ಕೌಟುಂಬಿಕ ಪ್ರತಿಷ್ಠೆ ಹಾಗೂ ದ್ವೇಷದ ಕಿಡಿ ಕೊನೆಗೂ ಒಬ್ಬ ಯುವಕನ ಬಲಿ ಪಡೆದುಕೊಂಡಿದೆ. ಪ್ರೀತಿಸಿದ ಹುಡುಗಿಯನ್ನು ರಿಜಿಸ್ಟರ್ ಮದುವೆಯಾಗಿದ್ದಕ್ಕೆ ಅಕ್ಕನ ಗಂಡನನ್ನೇ ಭಾಮೈಂದಂದಿರು ಅತಿ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾಲಿಬಾಲ್ ಆಟದ ಮೈದಾನದಲ್ಲಿ ಶುರುವಾದ ಕ್ಷುಲ್ಲಕ ಜಗಳ, ಕೊನೆಗೆ ನದಿ ದಡದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಕಳೆದ 13 ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ತುಂಗಭದ್ರಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ಪ್ರಕರಣದ ಬೆಚ್ಚಿಬೀಳಿಸುವ ಸತ್ಯಗಳನ್ನು ಪೊಲೀಸರು ಹೊರಗೆಳೆದಿದ್ದಾರೆ.
ಪ್ರೀತಿ, ವಿವಾಹ ಮತ್ತು ಕೌಟುಂಬಿಕ ವೈಷಮ್ಯ
ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ 27 ವರ್ಷದ ಪುನೀತ್ ಕುಮಾರ್ ಎಂಬ ಯುವಕ, 2024ರಲ್ಲಿ ಅಕ್ಷತಾ ಎಂಬುವವರನ್ನು ಪ್ರೀತಿಸಿ, ಕುಟುಂಬಸ್ಥರಿಗೆ ತಿಳಿಸದೆ ರಿಜಿಸ್ಟರ್ ಮದುವೆಯಾಗಿದ್ದ. ಸುಮಾರು ಒಂದು ವರ್ಷದ ನಂತರ ಈ ವಿಷಯ ಯುವತಿಯ ಕುಟುಂಬಸ್ಥರಿಗೆ ಗೊತ್ತಾಗಿದೆ. ಮದುವೆ ವಿಷಯ ತಿಳಿಯುತ್ತಿದ್ದಂತೆಯೇ ಅಕ್ಷತಾ ಕುಟುಂಬಸ್ಥರಲ್ಲಿ ಆಕ್ರೋಶದ ಜ್ವಾಲೆ ಎದ್ದಿತ್ತು. ಪುನೀತ್ ಬೇರೆ ಜಾತಿಯವನು ಹಾಗೂ ಆತನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬ ಕಾರಣಕ್ಕೆ ಈ ಮದುವೆಯನ್ನು ಅವರು ತೀವ್ರವಾಗಿ ವಿರೋಧಿಸಿದ್ದರು.
ಎರಡೂ ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಾದ ಕಾರಣ, ದಂಪತಿ ವಿಚ್ಛೇದನಕ್ಕೆ (ಡಿವೋರ್ಸ್) ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ ಕಾನೂನುಬದ್ಧವಾಗಿ ವಿಚ್ಛೇದನ ಸಿಗುವಷ್ಟರಲ್ಲೇ ಪುನೀತ್ ನನ್ನು ಆತನ ಹೆಂಡತಿಯ ಕಡೆಯವರೇ ಹೊಂಚು ಹಾಕಿ ಮುಗಿಸಿಬಿಟ್ಟಿದ್ದಾರೆ.
ಘಟನೆ ನಡೆದ ದಿನ ಪುನೀತ್ ತನ್ನ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ. ಈ ವೇಳೆಗೆ ಅಕ್ಷತಾಳ ಸಹೋದರರಾದ ಅಭಿಷೇಕ್ ಮತ್ತು ಅಭಿರೆಡ್ಡಿ ಅಲ್ಲಿಗೆ ಬಂದಿದ್ದು, ಮೂವರ ನಡುವೆ ಉಗ್ರ ಜಗಳ ನಡೆದಿದೆ. ಅದೇ ದಿನ ರಾತ್ರಿ ಪುನೀತ್ ಮನೆಯಿಂದ ಹೊರಗೆ ತೆರಳಿದ್ದವನು ಮತ್ತೆ ವಾಪಸ್ ಬರಲೇ ಇಲ್ಲ. ಮಗ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ದಿನಗಳು ಕಳೆದರೂ ಪುನೀತ್ ಸುಳಿವು ಸಿಗಲಿಲ್ಲ. ಕಡೆಗೆ ಪೊಲೀಸರಿಗೂ ದೂರು ನೀಡಲಾಗಿತ್ತು.
ನಾಪತ್ತೆಯಾದ 13 ದಿನಗಳ ಬಳಿಕ, ಗುತ್ತೂರು–ಹರ್ಲಾಪುರ ವ್ಯಾಪ್ತಿಯ ತುಂಗಭದ್ರಾ ನದಿ ತೀರದಲ್ಲಿ ಯುವಕನ ಶವ ಪತ್ತೆಯಾಗಿದೆ. ಹಲವು ದಿನಗಳು ನೀರಿನಲ್ಲೇ ಇದ್ದಿದ್ದರಿಂದ ಮೃತದೇಹ ಕೊಳೆತು ಹೋಗಿತ್ತು ಮತ್ತು ಜಲಚರ ಪ್ರಾಣಿಗಳು ದೇಹದ ಕೆಲ ಭಾಗಗಳನ್ನು ತಿಂದಿದ್ದವು. ಆದರೆ, ಶವದ ಬಳಿ ಸಿಕ್ಕ ಕೆಂಪು-ನೀಲಿ ಚೆಕ್ಸ್ ಶರ್ಟ್ ಹಾಗೂ ಕೂಗಳತೆ ದೂರದಲ್ಲಿದ್ದ ಕಪ್ಪು ಬಣ್ಣದ ಬರ್ಮುಡಾವನ್ನು ನೋಡಿ ಕುಟುಂಬಸ್ಥರು ಅದು ಪುನೀತ್ ಧರಿಸಿದ್ದ ಬಟ್ಟೆಗಳೇ ಎಂದು ಖಚಿತಪಡಿಸಿದರು. ಇದರಿಂದಾಗಿ ನಾಪತ್ತೆ ಪ್ರಕರಣವು ಕೊಲೆ ಪ್ರಕರಣವಾಗಿ ತಿರುವು ಪಡೆಯಿತು.
ಪೋಲಿಸರ ತನಿಖೆಯ ವೇಳೆ ಕೃತ್ಯದ ಕರಾಳ ಮುಖ ಅನಾವರಣಗೊಂಡಿದೆ. ಆ ರಾತ್ರಿ ಅಭಿಷೇಕ್ ಮತ್ತು ಅಭಿರೆಡ್ಡಿ ಸೇರಿ ಪುನೀತ್ ನನ್ನು ಪುಸಲಾಯಿಸಿ ತುಂಗಭದ್ರಾ ನದಿ ತೀರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕುಡಿತದ ನೆಪದಲ್ಲಿ ಆತನ ಮೇಲೆ ಬಿಯರ್ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಪುನೀತ್ ನನ್ನು ನದಿ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಆ ಬಳಿಕ ಶವವನ್ನು ನದಿಯ ಆಳಕ್ಕೆ ಎಸೆದು ಏನೂ ತಿಳಿಯದವರಂತೆ ಪರಾರಿಯಾಗಿದ್ದಾರೆ.
ಈ ಇಡೀ ಕೃತ್ಯದ ಹಿಂದೆ ಪುನೀತ್ ಪತ್ನಿ ಅಕ್ಷತಾಳ ಕುಮ್ಮಕ್ಕೂ ಇದೆಯಾ ಎಂಬ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ನೀಡಲಾದ ದೂರಿನ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಅಭಿಷೇಕ್ ಮತ್ತು ಅಭಿರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟು 7 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.