ಲಕ್ಷ್ಮೇಶ್ವರದಲ್ಲಿ ಹಾಡುಹಗಲೇ ಯುವಕನ ಹ*ತ್ಯೆ : ಸಾ*ವಿನ ದವಡೆಯಿಂದ ಬದುಕಿ ಬಂದ ಗೊಡಚಿಕೊಂಡದ ಮಹಿಳೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆಗೆ ಇಡೀ ಪಟ್ಟಣ ಬೆಚ್ಚಿಬಿದ್ದರೆ, ಇತ್ತ ಹಾವೇರಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದ್ದ ವೃದ್ಧೆಯೊಬ್ಬರು ಮರುಜೀವ ಪಡೆದ ಪವಾಡ ಸದೃಶ ಘಟನೆ ನಡೆದಿದೆ. ಒಂದೆಡೆ ಹಳೆ ವೈಷಮ್ಯಕ್ಕೆ ಕುರುಹುಗಳು ವ್ಯಕ್ತವಾಗಿದ್ದರೆ, ಇನ್ನೊಂದೆಡೆ ವೈದ್ಯರ ಸಮಯಪ್ರಜ್ಞೆಯಿಂದ ಬಡ ಜೀವವೊಂದು ಉಳಿದುಕೊಂಡಿದೆ.. ಈ ಎರಡೂ ಪ್ರತ್ಯೇಕ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ..
ಗದಗ/ಹಾವೇರಿ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾಡುಹಗಲೇ ಭೀಕರ ಕೊಲೆಯೊಂದು ನಡೆದಿದ್ದು, ಇಡೀ ಪಟ್ಟಣ ಬೆಚ್ಚಿಬಿದ್ದಿದೆ. ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಹಾಗೂ ರೌಡಿಶೀಟರ್ ಇರ್ಫಾನ್ ತಹಶೀಲ್ದಾರ್ (36) ಎಂಬಾತನನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಆತನ ಕೈಗಳನ್ನು ಕಟ್ಟಿ, ಕೊಡಲಿಯಿಂದ ಕುತ್ತಿಗೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಹಳೆ ವೈಷಮ್ಯ ಅಥವಾ ಹಣಕಾಸಿನ ವ್ಯವಹಾರವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಪ್ರಕರಣದಲ್ಲಿ ಮಹ್ಮದ್ ಶಫಿನ್, ಆಯಾಜ್ ಮುಲ್ಲಾ ಹಾಗೂ ಮಹ್ಮದ್ ವಾಸಿಮ್ ಮುಲ್ಲಾ ಎಂಬುವರ ಹೆಸರುಗಳು ಕೇಳಿಬಂದಿದ್ದು, ಕೊಲೆಯ ನಿಖರ ಕಾರಣ ಹಾಗೂ ಆರೋಪಿಗಳ ಪಾತ್ರ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.
ವಿಷಯ ತಿಳಿಯುತ್ತಿದ್ದಂತೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಿಥುನ್ ಎನ್.ಎಚ್., ಡೆಪ್ಯೂಟಿ ಎಸ್ಪಿ (DSP) ಮುರ್ತುಜಾ ಖಾದ್ರಿ ಹಾಗೂ ಲಕ್ಷ್ಮೇಶ್ವರ ಠಾಣೆ ಪೊಲೀಸರು ಸೀನ್ ಆಫ್ ಕ್ರೈಂ (SOCO) ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಲಾಗಿದೆ.
ಅಂತ್ಯಸಂಸ್ಕಾರಕ್ಕೆ ಸಿದ್ಧತೆ: ವೈದ್ಯರ ಸಮಯಪ್ರಜ್ಞೆಯಿಂದ ಬದುಕಿದ ವೃದ್ಧೆ
ಹಾವೇರಿ : ಕುಟುಂಬಸ್ಥರು ಮಹಿಳೆ ಸಾವನ್ನಪ್ಪಿದ್ದಾಳೆಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಕೊನೆ ಕ್ಷಣದಲ್ಲಿ, ವೈದ್ಯರ ಸಮಯಪ್ರಜ್ಞೆಯಿಂದ 63 ವರ್ಷದ ವೃದ್ಧೆಯೊಬ್ಬರು ಮರುಜೀವ ಪಡೆದ ಪವಾಡ ಸದೃಶ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನಲ್ಲಿ ನಡೆದಿದೆ.
ಗೊಡಚಿಕೊಂಡ ಗ್ರಾಮದ ರೇಣುಕಮ್ಮ ಸಂಕೊಳ್ಳಿ (63) ಎಂಬುವರು ಸೋಮವಾರ ರಾತ್ರಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಿಪಿ ಮತ್ತು ಶುಗರ್ ಮಟ್ಟ ತೀವ್ರ ಕುಸಿತಗೊಂಡು ಪ್ರಜ್ಞೆ ಕಳೆದುಕೊಂಡಾಗ, ಸ್ಥಳೀಯ ವೈದ್ಯರು ಅವರು ಬದುಕುವ ಸಾಧ್ಯತೆ ಕ್ಷೀಣವಾಗಿದೆ ಎಂದಿದ್ದರು. ಮಹಿಳೆಯ ಉಸಿರಾಟ ಕ್ಷೀಣಿಸಿದ್ದರಿಂದ ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿದ ಕುಟುಂಬಸ್ಥರು, ಸಂಬಂಧಿಕರಿಗೆ ಅಂತ್ಯಸಂಸ್ಕಾರದ ಸುದ್ದಿ ತಲುಪಿಸಿದ್ದರು. ಸಂಬಂಧಿಕರು ಹಾರ-ತುರಾಯಿಗಳೊಂದಿಗೆ ಅಂತಿಮ ದರ್ಶನಕ್ಕೆ ಆಗಮಿಸಿದ್ದರು.
ಅಂತ್ಯಕ್ರಿಯೆಯ ತಯಾರಿಯ ಹಂತದಲ್ಲಿ ವೃದ್ಧೆಯ ಎದೆಯಲ್ಲಿ ಹಗುರ ಉಸಿರಾಟ ಕಂಡುಬಂದಿದೆ. ತಕ್ಷಣ ಜಾಗೃತರಾದ ಕುಟುಂಬಸ್ಥರು ಅವರನ್ನು ಹಿರೇಕೇರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ವೈದ್ಯರ ತುರ್ತು ಚಿಕಿತ್ಸೆಯಿಂದಾಗಿ ರೇಣುಕಮ್ಮ ಚೇತರಿಸಿಕೊಂಡಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸಾವಿನ ದವಡೆಯಿಂದ ವೃದ್ಧೆ ಬದುಕಿ ಬಂದಿರುವುದು ಕುಟುಂಬಸ್ಥರಲ್ಲಿ ತೀವ್ರ ಸಂತಸ ಮೂಡಿಸಿದೆ.