SOCIAL MEDIA

Newsletter

PARTNER SITES
Select Language Select State

ಡಿಕೆಶಿ ‘ಎರಡು ಮದುವೆ’ ಹೇಳಿಕೆಗೆ ಎಂ.ಟಿ. ಕೃಷ್ಣಪ್ಪ ಗರಂ: ₹2500 ಪರಿಹಾರ ನೀಡಿದ್ದಕ್ಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ!

ಬೆಳಗ್ಗೆ ತಿಂಡಿ ತಿಂದರೆ ₹2,500 ಬಿಲ್ ಆಗುತ್ತದೆ. ಸರ್ಕಾರ ಕೊಡುತ್ತಿರುವ ಈ ದುಡ್ಡು ರೈತರ ಶೇವಿಂಗ್, ಕಟಿಂಗ್‌ಗೂ ಸಾಲುವುದಿಲ್ಲ. ಕೊಟ್ಟಿರುವ ಈ ಸಣ್ಣ ಮೊತ್ತದಿಂದ ಸರ್ಕಾರ ರೈತರಿಗೆ ನೆರವು ನೀಡುತ್ತಿಲ್ಲ, ಬದಲಾಗಿ ಅವಮಾನ ಮಾಡುತ್ತಿದೆ

Reported By Manjunath Naragund Written By Manjunath Naragund
Published: Sep 26, 2026, 03:30 PM IST | Updated: Sep 26, 2026, 03:34 PM IST
Image Credit: Tumakuru
Join

ತುಮಕೂರು: ಬೆಂಗಳೂರಿಗೆ ಬಂದ ಶಾಸಕರೆಲ್ಲರೂ ಎರಡೆರಡು ಮದುವೆಯಾಗಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹಾಗೂ ಬರ ಪೀಡಿತ ರೈತರಿಗೆ ಸರ್ಕಾರ ಘೋಷಿಸಿರುವ ಕೇವಲ ₹2,500 ಪರಿಹಾರದ ವಿರುದ್ಧ ತುರುವೇಕೆರೆ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಡಳಿತ ಶೈಲಿ ಹಾಗೂ ನಡೆನುಡಿಗಳ ವಿರುದ್ಧ ಖಡಕ್ ಆಗಿ ಆಕ್ರೋಶ ಹೊರಹಾಕಿದ್ದಾರೆ.

“ಅವನೇನೋ ಮೇಲಿಂದ ಬಂದಿಲ್ಲ!” - ಡಿಕೆಶಿಗೆ ತಿರುಗೇಟು:

ಶಾಸಕರ ಮದುವೆ ವಿಚಾರವಾಗಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗೆ ತೀವ್ರ ಕಿಡಿಕಾರಿದ ಎಂ.ಟಿ. ಕೃಷ್ಣಪ್ಪ, "ಮೊದಲು ಅವರು ಎಷ್ಟು ಮದುವೆಯಾಗಿದ್ದಾರೆ ಎಂದು ಕೇಳಿ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಲಘುವಾಗಿ ಮಾತನಾಡಬಾರದು. ಎರಡು ಮದುವೆ ಮಾಡಿಕೊಳ್ಳಲು ದೇಶದಲ್ಲಿ ಕಾನೂನು ಇದೆಯಾ? ಕಾನೂನು ಮಾಡುವವರೇ ಕಾನೂನು ಬ್ರೇಕ್ ಮಾಡಿದರೆ ಅದಕ್ಕೆ ಏನು ಅರ್ಥ? *ಐ ಡೋಂಟ್ ಲೈಕ್ ಇಟ್!*" ಎಂದು ಗುಡುಗಿದರು.

ಮುಂದುವರಿದು ಮಾತನಾಡಿದ ಅವರು, "ಮುಖ್ಯಮಂತ್ರಿ ಗೌರವಯುತವಾಗಿ ನಡೆದುಕೊಳ್ಳಬೇಕು. ಡಿ.ಕೆ. ಶಿವಕುಮಾರ್ ಏನೂ ಮೇಲಿಂದ ಇಳಿದು ಬಂದಿಲ್ಲ. ಅವರು ಕೂಡ ನಮ್ಮಂತೆಯೇ ಎಂಎಲ್‌ಎ ಆಗಿ ಬಂದವರು. ಶಾಸಕನಾಗಿ ಅಧಿಕಾರ ಸಿಕ್ಕ ತಕ್ಷಣ ಬಾಯಿಗೆ ಬಂದಂತೆ ಮಾತನಾಡುವುದನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ" ಎಂದರು.

“₹2,500 ಶೇವಿಂಗ್-ಕಟಿಂಗ್‌ಗೂ ಸಾಲಲ್ಲ!” - ರೈತರ ಪರಿಹಾರಕ್ಕೆ ಆಕ್ರೋಶ:

ವಿಶೇಷ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ ನೀಡಲು ಹೊರಟಿರುವ ₹2,500 ಸಹಾಯಧನದ ಕುರಿತು ಕಟುವಾಗಿ ಮಾತನಾಡಿದ ಕೃಷ್ಣಪ್ಪ, "ಬೆಳಗ್ಗೆ ತಿಂಡಿ ತಿಂದರೆ ₹2,500 ಬಿಲ್ ಆಗುತ್ತದೆ. ಸರ್ಕಾರ ಕೊಡುತ್ತಿರುವ ಈ ದುಡ್ಡು ರೈತರ ಶೇವಿಂಗ್, ಕಟಿಂಗ್‌ಗೂ ಸಾಲುವುದಿಲ್ಲ. ಕೊಟ್ಟಿರುವ ಈ ಸಣ್ಣ ಮೊತ್ತದಿಂದ ಸರ್ಕಾರ ರೈತರಿಗೆ ನೆರವು ನೀಡುತ್ತಿಲ್ಲ, ಬದಲಾಗಿ ಅವಮಾನ ಮಾಡುತ್ತಿದೆ" ಎಂದು ಕಿಡಿಕಾರಿದರು.

ಬರಗಾಲದಿಂದ ಕಂಗಾಲಾಗಿರುವ ರೈತರಿಗೆ ಹೆಕ್ಟೇರ್‌ಗೆ ಕನಿಷ್ಠ ₹50,000 ಪರಿಹಾರ ನೀಡಬೇಕು ಹಾಗೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ನಾವು ಆಗ್ರಹಿಸಿದ್ದೆವು. ಗಂಟೆಗಟ್ಟಲೆ ಚರ್ಚೆ ಮಾಡಿ ಕೊನೆಗೆ ಕೇವಲ ₹2,500 ಕೊಡುತ್ತೇನೆ ಎಂದು ಹೇಳಿ ಹೋಗಿದ್ದಾರೆ. "ನಾವು ಗ್ಯಾರಂಟಿಗಳನ್ನು ಕೇಳಿರಲಿಲ್ಲ, ಆದರೂ ಕೊಟ್ಟಿದ್ದೀರಾ ಸಂತೋಷ. ಆದರೆ ಈಗ ಬರಗಾಲ ಬಂದು ರೈತರು ಕಣ್ಣೀರು ಹಾಕುತ್ತಿದ್ದಾರೆ, ಅವರಿಗೆ ಮೊದಲು ನೆರವಾಗಿ. ಸಿದ್ದರಾಮಯ್ಯ ತಮ್ಮನ್ನು ರೈತನ ಮಗ ಎಂದು ಹೇಳಿಕೊಳ್ಳುತ್ತಾರೆ. ಸಂಪೂರ್ಣ ಸಾಲ ಮನ್ನಾ ಮಾಡಿದರೆ ಮಾತ್ರ ನೀನು ನಿಜವಾದ ರೈತನ ಮಗ ಆಗುತ್ತೀಯಾ" ಎಂದು ಸವಾಲೆಸೆದರು.

ಕುಮಾರಸ್ವಾಮಿ ಸಾಲ ಮನ್ನಾ ಉದಾಹರಣೆ:

ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಎಂ.ಟಿ. ಕೃಷ್ಣಪ್ಪ ಎಚ್ಚರಿಸಿದರು. "ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿದ್ದರಾ? ಕೇಂದ್ರದ ಮೇಲೆ ನೆಪ ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಅರಿತು ಹೆಕ್ಟೇರ್‌ಗೆ ₹50,000 ನೀಡಿ ಸಂಪೂರ್ಣ ಸಾಲ ಮನ್ನಾ ಮಾಡಲಿ" ಎಂದು ಒತ್ತಾಯಿಸಿದರು.

ಗ್ರಾಮೀಣ ಭಾಗದಲ್ಲಿ ರೈತರ ಬೋರ್‌ವೆಲ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಕೊಡುತ್ತಿರುವ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, "ರಾತ್ರಿ ವೇಳೆ ವಿದ್ಯುತ್ ಕೊಟ್ಟರೆ ಬೋರ್‌ವೆಲ್‌ನಿಂದ ನೀರು ಹಾಯಿಸಲು ಹೇಗೆ ಸಾಧ್ಯ? ಮನುಷ್ಯರಿಗೆ, ಹಕ್ಕಿ-ಪಕ್ಷಿಗಳಿಗೆ ನೀರು ಬೇಡವೇ? ರಾತ್ರಿ ವೇಳೆ ಜಮೀನಿಗೆ ಹೋದರೆ ಚಿರತೆ, ಕರಡಿಗಳ ಕಾಟವಿರುತ್ತದೆ, ಅಂತಹ ಸಮಯದಲ್ಲಿ ಪ್ರಾಣ ಭಯದಿಂದ ಯಾರು ತಾನೆ ಹೊಲಕ್ಕೆ ಹೋಗುತ್ತಾರೆ? ರಾಜ್ಯದಲ್ಲಿ ಬರಗಾಲ ಬರಲಿದೆ ಎಂದು ಮೊದಲೇ ಮಾಹಿತಿಯಿದ್ದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ" ಎಂದು ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಕಿಡಿ ಕಾರಿದರು. 
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES