SOCIAL MEDIA

Newsletter

PARTNER SITES
Select Language Select State

ರೈಲು ಪ್ರಯಾಣದ ವೇಳೆ ಸಂಸದ ತೇಜಸ್ವಿ ಸೂರ್ಯ ಪತ್ನಿ ಕಹಿ ಅನುಭವ.! ಘಟನೆ ಬಿಚ್ಚಿಟ್ಟ ಶಿವಶ್ರೀ

ರೈಲು ಪ್ರಯಾಣದ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರಿಗೆ ಕಹಿ ಅನುಭವ ಆಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ..

Reported By Krishna NK Written By Krishna NK
Published: Sep 24, 2026, 07:29 PM IST | Updated: Sep 24, 2026, 07:33 PM IST
Image Credit: MP Tejasvi Surya wife
Join

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ, ಖ್ಯಾತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರು ಇತ್ತೀಚಿನ ರೈಲು ಪ್ರಯಾಣದ ವೇಳೆ ತಮಗಾದ ಅತ್ಯಂತ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯರಲ್ಲಿ ಸಾರ್ವಜನಿಕ 'ನಾಗರಿಕ ಪ್ರಜ್ಞೆ' (Civic sense) ತೀರಾ ಕಡಿಮೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಸುದೀರ್ಘ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ಪ್ರಯಾಣದ ದುರಂತವನ್ನು ವಿವರಿಸಿರುವ ಶಿವಶ್ರೀ, "ಇಂದು ನನಗೆ ರೈಲು ಪ್ರಯಾಣದಲ್ಲಿ ಆಘಾತಕಾರಿ ಅನುಭವವಾಯಿತು. ನಮ್ಮ ದೇಶದಲ್ಲಿ ಜನರು ಸಾರ್ವಜನಿಕ ಸ್ಥಳಗಳಿಗೆ ಕನಿಷ್ಠ ಗೌರವ ಕೊಡುವುದಿಲ್ಲ ಎಂಬುದನ್ನು ನೋಡಲು ಬೇಸರವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿದ್ದಾಗ ನಾವು ದೊಡ್ಡ ಧ್ವನಿಯಲ್ಲಿ ಕೂಗಾಡುವುದು, ಇತರರ ವೈಯಕ್ತಿಕ ಜಾಗಕ್ಕೆ ಭಂಗ ತರುವುದನ್ನು ಮಾಡಬಾರದು. ಕಲಾವಿದರಾದ ನಮಗೆ ಶಾಂತಿ ಮತ್ತು ಶಾಂತ ವಾತಾವರಣ ಅತ್ಯಗತ್ಯ," ಎಂದು ಬರೆದುಕೊಂಡಿದ್ದಾರೆ.

ಘಟನೆಯ ವಿವರ
ರೈಲಿನಲ್ಲಿದ್ದ 56 ಸೀಟುಗಳ ಬೋಗಿಯಲ್ಲಿ ಸುಮಾರು 40 ಮಧ್ಯವಯಸ್ಕರ ಗುಂಪೊಂದು ಸತತ 5 ಗಂಟೆಗಳ ಕಾಲ ಜೋರಾಗಿ ಮಾತನಾಡುತ್ತಾ ಇಡೀ ಬೋಗಿಗೆ ಕಿರಿಕಿರಿ ಉಂಟುಮಾಡಿದೆ. ಗುಂಪಿನಲ್ಲಿ ಪ್ರಯಾಣಿಸುವಾಗ ಆರಂಭದ ಉತ್ಸಾಹ ಸಹಜ, ಆದರೆ ಗಂಟೆಗಟ್ಟಲೆ ನಿರಂತರವಾಗಿ ಗದ್ದಲ ಮಾಡುವುದು ಸರಿಯಲ್ಲ. ಉಳಿದ 16 ಸಹ-ಪ್ರಯಾಣಿಕರು ಇದನ್ನು ಮೂಕಪ್ರೇಕ್ಷಕರಾಗಿ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇತ್ತು. ಯಾರೂ ಅವರನ್ನು ಪ್ರಶ್ನಿಸುವಂತಿರಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಟಿಟಿಇ ವೈಫಲ್ಯ ಮತ್ತು ವ್ಯಂಗ್ಯ
ಗಲಾಟೆಯಿಂದ ಬೇಸತ್ತು ಬೇರೆ ಬೋಗಿಯಲ್ಲಿ ಸೀಟು ಕೊಡುವಂತೆ ಅವರು ಟಿಟಿಇ (TTE) ಅವರಿಗೆ ಮನವಿ ಮಾಡಿದ್ದಾರೆ. ಆದರೆ ರೈಲು ಭರ್ತಿಯಾಗಿದ್ದರಿಂದ ಅದೇ ಬೋಗಿಯ ಮತ್ತೊಂದು ಸೀಟಿಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲಿಯೂ ಪ್ರಯಾಣಿಕರ ಗುಂಪೊಂದು ಗಟ್ಟಿಯಾಗಿ ನಗುತ್ತಾ, ಕಾರ್ಡ್ಸ್ (UNO) ಆಡಲು ಪ್ರಾರಂಭಿಸಿದೆ. ಈ ಬಗ್ಗೆ ಟಿಟಿಇ ಗಮನಕ್ಕೆ ತಂದಾಗ, ಅವರು ಆಟವನ್ನು ತಡೆದರಾದರೂ, ಕೆಲವೇ ನಿಮಿಷಗಳಲ್ಲಿ ಮತ್ತೆ ಬಂದು 'ಯಾಕೆ ಸರ್ ಗಲಾಟೆ ಮಾಡ್ತಾ ಇದ್ದೀರಾ?' ಎಂದು ವ್ಯಂಗ್ಯವಾಗಿ ಕೇಳಿದ್ದಾರೆ. ಅದಕ್ಕೆ ಆ ಪ್ರಯಾಣಿಕರು 'ಸರ್ ನೀವೂ ಬನ್ನಿ, ಆಡೋಣ' ಎಂದು ಟಿಟಿಇ ಜೊತೆ ನಕ್ಕು ಹಗುರವಾಗಿ ತಗೆದುಕೊಂಡಿದ್ದಾರೆ.

ಈ ನಡೆಯಿಂದ ತೀವ್ರ ಬೇಸರಗೊಂಡ ಶಿವಶ್ರೀ ಸ್ಕಂದಪ್ರಸಾದ್, "ಇಲ್ಲಿ ವಿಷಯ ಯಾರು ಗೆದ್ದರು ಎಂಬುದಲ್ಲ, ಅವರೊಂದಿಗೆ ನಾನೂ ಸೇರಿದಂತೆ ನಾವೆಲ್ಲಾ ಭಾರತೀಯರು 'ನಾಗರಿಕ ಪ್ರಜ್ಞೆ'ಯ ಪರೀಕ್ಷೆಯಲ್ಲಿ ಸೋತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ಸಭ್ಯತೆಯನ್ನು ನಮ್ಮ ದೇಶದ ಜನರು ಯಾವಾಗ ಮೈಗೂಡಿಸಿಕೊಳ್ಳುತ್ತಾರೋ, ದೇವರೇ ಈ ದೇಶವನ್ನು ಕಾಪಾಡಬೇಕು," ಎಂದು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES