ಬೆಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಗರಿಷ್ಠ ಒಂದು ವಾರದೊಳಗೆ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕಳಂಕ ತೊಳೆಯುವ ಮತ್ತು ಸತ್ಯ ಹೊರತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತರು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿದೆ. FSL (ವಿಧಿವಿಜ್ಞಾನ ಪ್ರಯೋಗಾಲಯ) ವರದಿ ಬರಬೇಕಿರುವ ಕಾರಣ ಸ್ವಲ್ಪ ತಡವಾಗಿದ್ದು, ಅಚ್ಚರಿಯ ರೀತಿಯಲ್ಲಿ ಅಸಲಿ ರಹಸ್ಯ ಬಯಲಾಗಲಿದೆ ಎಂದರು.
ಒಂದು ವಾರದಲ್ಲಿ ಸತ್ಯ ಹೊರಕ್ಕೆ
ಸ್ಟಿಂಗ್ ಆಪರೇಷನ್ ಮಾಡಿದ್ದು ಯಾರು, ಎಲ್ಲಿ ಮಾಡಿದರು, ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಶೇ.70ರಿಂದ 80ರಷ್ಟು ತನಿಖೆ ಮುಗಿದಿದೆ. ವಿಡಿಯೋವನ್ನು ಯಾರು ಅಪ್‌ಲೋಡ್ ಮಾಡಿದರು, ಯಾರ ಬೆಂಬಲವಿತ್ತು ಎಂಬ ಸಂಪೂರ್ಣ ಮಾಹಿತಿ ಇನ್ನೊಂದು ವಾರದೊಳಗೆ ಸಿಗಲಿದೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಇದನ್ನು ಬಿಗ್‌ಬಾಸ್ ಶೋ ತರ 24 ಗಂಟೆ ನೇರಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ನಮ್ಮ ಟಾಲೆಸ್ಟ್ ಲೀಡರ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆಚ್.ಡಿ. ಕುಮಾರಸ್ವಾಮಿ ಅವರ ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರ ನೀತಿ-ನಿಯಮಗಳಿಂದ ರಾಜ್ಯದ ಜನತೆ ಬದುಕು ಕಟ್ಟಿಕೊಂಡಿದ್ದಾರೆ. ಅವರ ಕಾರ್ಯಕ್ರಮಗಳು ಜನರಿಗೆ ಸ್ವಾಭಿಮಾನದ ಬದುಕು ನೀಡಿವೆ. ಅವರ ಹಿಂದೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರ ಗೌರವ ಮತ್ತು ಘನತೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದರು.
ಹೆಚ್‌ಡಿಕೆ ಹಾಗೂ ಅನ್ನದಾನಿಗೆ ತಿರುಗೇಟು
ತನಿಖೆಯ ದಿಕ್ಕು ನಿರ್ಧರಿಸುವುದು ಗೃಹ ಇಲಾಖೆಯ ಅಧಿಕಾರಿಗಳು ಹೊರತು, ಕುಮಾರಸ್ವಾಮಿ ಅವರ ಹೇಳಿಕೆಗಳಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಇನ್ನು ಪ್ರಿಯಾಂಕ್ ಖರ್ಗೆ ಹುಟ್ಟುತ್ತಲೇ ಸೂಟು-ಬೂಟು ಹಾಕಿದ್ದಾರೆ ಎಂಬ ಮಾಜಿ ಶಾಸಕ ಅನ್ನದಾನಿ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಅನ್ನದಾನಿ ಅವರ ತಂದೆ ಸರಿಯಾಗಿ ದುಡಿದಿಲ್ಲ ಅಂದರೆ ನಾನೇನು ಮಾಡಲಿ? ನಾನು ಕಾನ್ವೆಂಟ್‌ನಲ್ಲಿ ಓದಿಲ್ಲ, ಅದಮಾರು ಮಠದ ಶಾಲೆ-ಕಾಲೇಜಿನಲ್ಲಿ ಓದಿರೋದು. ಅನ್ನದಾನಿಗೆ ಪ್ರತಾಪ್ ಸಿಂಹ ಗಾಳಿ ತಗುಲಿದೆ, ಹಾಗಾಗಿ ಹಾಗೆ ಮಾತಾಡ್ತಿದ್ದಾರೆ" ಎಂದು ಲೇವಡಿ ಮಾಡಿದರು.
ಇದು ಕೇವಲ ನಕಲಿ ಮತ್ತು ಕಟ್ಟುಕಥೆಯ ಪ್ರಕರಣವಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ಎಲ್ಲರ ಮುಖವಾಡ ಕಳಚಲಿದೆ ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈ ಪ್ರಕರಣ ಮುಂದಿನ ದಿನ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ..