ಹಾಲಿನ ದರ ₹8 ಹೆಚ್ಚಳ.. ಮತ್ತೆ ಬೆಲೆ ಏರಿಕೆ ಬಿಸಿ... ಜನರ ಜೇಬಿಗೆ ಕತ್ತರಿ!
ಬಮೂಲ್, ಚಮೂಲ್, ಮನ್ಮುಲ್ ಸೇರಿದಂತೆ ರಾಜ್ಯಾದ್ಯಂತ ಹಾಲು ಉತ್ಪಾದಕ ಒಕ್ಕೂಟ ಹಾಲಿನ ದರ ಏರಿಕೆಗೆ ಆಗ್ರಹಿಸಿವೆ. ಪ್ರತಿ ಲೀಟರ್ ಹಾಲಿಗೆ ಎಂಟು ರೂ.ವರೆಗೆ ದರ ಏರಿಕೆ ಮಾಡುವಂತೆ ಹಾಲು ಉತ್ಪಾದಕರ ಸಂಘ ಮನವಿ ಮಾಡಿದೆ.
ರಾಜ್ಯದಲ್ಲಿ ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಆಕಾಶಕ್ಕೆ ಮುತ್ತಿಡುತ್ತಿದ್ದು, ಬೆಲೆಯೇರಿಕೆಯ ಬಿಸಿಯಿಂದ ಜನ ಕಂಗಲಾಗಿದ್ದಾರೆ. ಏತನ್ಮಧ್ಯೆ, ಜನ ಸಾಮಾನ್ಯರಿಗೆ ಮತ್ತೊಂದು ಬಿಗ ಶಾಕ್ ಕೊಡೋದಕ್ಕೆ ಹಾಲು ಉತ್ಪಾದಕ ಸಂಘಗಳು ತಯಾರಾಗಿವೆ. ಬಮೂಲ್, ಚಮೂಲ್, ಮಂಡ್ಯ, ತುಮಕೂರು ಹಾಲು ಉತ್ಪಾದಕ ಒಕ್ಕೂಟಗಳು ಒಕ್ಕೊರಲಿನಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿ ಏರಿಕೆ ಮಾಡ್ಲೇಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡ್ಲಿಲ್ಲ ಅಂದ್ರೆ ʼವಿಧಾನಸೌಧ ಚಲೋʼ ಮಾಡ್ತೀವಿ ಅಂತ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ... ಅಸಲಿಗೆ ದರ ಏರಿಕೆಯಾಗೋಕೆ ಕಾರಣವೇನು? ಎಂಬ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹಾಲಿನ ದರ ಏರಿಗೆ ಹಾಲು ಒಕ್ಕೂಟಗಳ ಪ್ರಸ್ತಾವನೆ:
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಹಾಲು ಒಕ್ಕೂಟಗಳು ಸರ್ಕಾರದ ಮುಂದೆ ಹಾಲಿನ ದರ ಏರಿಕೆಯ ಬೃಹತ್ ಪ್ರಸ್ತಾವನೆ ಇಟ್ಟಿವೆ. ರೈತರ ಗೋಳು ಕೇಳೋರಿಲ್ಲ, ಒಕ್ಕೂಟಗಳ ನಿರ್ವಹಣೆ ಕಷ್ಟ ಆಗ್ತಿದೆ ಅನ್ನೋ ಕಾರಣ ಹೇಳಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಅಂದ್ರೂ 8 ರೂಪಾಯಿಗಳಷ್ಟು ದರ ಹೆಚ್ಚಿಸಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ದಿನನಿತ್ಯ ಬಳಕೆಯಾಗೊ ಹಾಲಿನ ಮೇಲೆಯೇ ಈ ಮಟ್ಟದಲ್ಲಿ ದರ ಏರಿಕೆಯಾದ್ರೆ ಜನರ ಜೇಬಿಗೆ ಕತ್ತರಿ ಬೀಳೋದಂತು ಪಕ್ಕಾ ಅನ್ನುವುದರಲ್ಲಿ ಎರಡು ಮಾತೇ ಇಲ್ಲ.
ದರ ಏರಿಕೆ ಮಾಡೋಕೆ ಒಕ್ಕೂಟಗಳು ಕೊಡ್ತಿರೋ ಕಾರಣಗಳೂ ಕೂಡ ತುಂಬಾ ಗಂಭೀರವಾಗಿವೆ:-
* ಮುಂಗಾರು ಮಳೆ ಕೈಕೊಟ್ಟು ಶೇ. 70ರಷ್ಟು ಮಳೆ ಕೊರತೆಯಾಗಿರೋದ್ರಿಂದ, ರಾಸುಗಳಿಗೆ ತಿನ್ನಿಸೋ ಹಸಿ ಹಾಗೂ ಒಣ ಹುಲ್ಲಿಗೆ ಈಗ ತೀವ್ರ ಬರ ಕಾಡ್ತಿದೆ.
* ಮೆಕ್ಕೆಜೋಳ, ಇಂಡಿ ಬೂಸಾ, ಕಾಕಂಬಿಯಂಥ ಪಶು ಆಹಾರ ಕಚ್ಚಾ ಸಾಮಗ್ರಿಗಳ ಬೆಲೆಯೂ ಕೂಡ ಸುಮಾರು ಶೇ. 25ರಷ್ಟು ಜಿಗಿದು ಹೋಗಿದೆ.
* ಇನ್ನು ಮಧ್ಯ ಪ್ರಾಚ್ಯ ಯುದ್ಧದ ಎಫೆಕ್ಟ್‌ಗೆ ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಗ್ಯಾಸ್ ಹಾಗೂ ಫರ್ನೇಸ್ ಆಯಿಲ್ ರೇಟ್ ಕೂಡ ಶೇ. 30ರಷ್ಟು ಏರಿಕೆಯಾಗಿದೆ.
ಸರ್ಕಾರಕ್ಕೆ ಹಾಲು ಒಕ್ಕೂಟಗಳ ಎಚ್ಚರಿಕೆ:
ಈ ರೀತಿಯಾಗಿ ಕೇವಲ ರಾಸುಗಳ ಮೇವು ಅಷ್ಟೇ ಅಲ್ಲ, ಡೈರಿ ರನ್ನಿಂಗ್ ಕಾಸ್ಟ್ ಕೂಡ ಸಿಕ್ಕಾಪಟ್ಟೆ ದುಬಾರಿ ಆಗೋಗಿದೆ. ಡೈರಿಯಲ್ಲಿ ಪಾತ್ರೆಗಳು ಹಾಗೂ ಕ್ಯಾನ್ ವಾಶ್ ಮಾಡೋಕೆ ಬಳಸುವ ವಾಷಿಂಗ್ ಸೋಡಾ ಹಾಗೂ ಡಿಟರ್ಜೆಂಟ್ ರೇಟ್ ಕೂಡ ಡಬಲ್ ಆಗ್ತಿದೆ.ಇದರ ಜೊತೆಗೆ ಡೈರಿ ನೌಕರರಿಗೆ 7ನೇ ವೇತನ ಆಯೋಗದ ಗಿಫ್ಟ್ ಕೊಟ್ಟಿದ್ದರಿಂದ, ಆಡಳಿತಾತ್ಮಕ ವೆಚ್ಚ ಒಕ್ಕೂಟಗಳ ಬೆನ್ನುಮೂಳೆ ಮುರಿಯುವಂತಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ರಾಜ್ಯ ಸರ್ಕಾರ ಮಾತ್ರ ಹಾಲಿನ ದರ ಏರಿಕೆ ಮಾಡುವ ಮನವಿಯನ್ನು ಪುರಸ್ಕರಿಸುತ್ತಿಲ್ಲ. ಈಗಲೂ ಸರ್ಕಾರ ನಮ್ಮ ಮನವಿಗೆ ಕಿವಿಗೊಡದಿದ್ದರೆ ನಾವೇ ನೇರವಾಗಿ ಬಂದು ವಿಧಾನಸೌಧ ಚಲೋ ಮಾಡ್ತೀವಿ ಅಂತ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಈಗಾಗ್ಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ, ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿ ರೇಟ್ ನೋಡಿ ಸುಸ್ತಾಗಿರೋ ನಮ್ಮ ಜನರಿಗೆ, ಈಗ ಹಾಲಿನ ದರ ಏರಿಕೆಯ ಈ ಹೊಸ ಬರೆ ತಟ್ಟುತ್ತಾ.. ಹಾಲಿನ ದರ ಏರಿಕೆಗೆ ಸರ್ಕಾರ ಒಪ್ಪುತ್ತಾ ಅನ್ನೊದನ್ನ ಕಾದು ನೋಡ್ಬೇಕಿದೆ.