SOCIAL MEDIA

Newsletter

PARTNER SITES
Select Language Select State

ಕ್ಲಸ್ಟರ್ ಕಿಚನ್ ಸೆಂಟರ್ ಪ್ರಸ್ತಾವನೆ ಕೈ ಬಿಡುವಂತೆ ಆಗ್ರಹಿಸಿ ಬಿಸಿಯೂಟ ನೌಕರರ ಸತ್ಯಾಗ್ರಹ: ಸರ್ಕಾರಕ್ಕೆ ಛೀಮಾರಿ ಹಾಕಿದ ಆರ್.‌ ಅಶೋಕ್

ಕ್ಲಸ್ಟರ್‌ ಕಿಚನ್‌ ಸೆಂಟರ್‌ ಪ್ರಸ್ತಾವನೆಯನ್ನು ಕೈ ಬಿಡುವಂತೆ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿರುವ ಬಿಸಿಯೂಟ ನೌಕರರಿಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Written By Yashaswini V
Published: Nov 17, 2026, 10:09 IST | Updated: Nov 17, 2026, 10:12 IST
Join

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಿಕರ ಯೂನಿಯನ್‌ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕ್ಲಸ್ಟರ್‌ ಕಿಚನ್‌ ಸೆಂಟರ್‌ ಪ್ರಸ್ತಾವನೆಯನ್ನು ಈ ಕೂಡಲೇ ಕೈಬಿಡುವಂತೆ ಆಗ್ರಹಿಸಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮುಂದುವರೆಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಕ್ಕೆ ಛೀಮಾರಿ ಹಾಕಿರುವ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಕೇವಲ ₹3,700 ಮಾಸಿಕ ವೇತನಕ್ಕೆ ಕಳೆದ 25 ವರ್ಷಗಳಿಂದ ಶಾಲಾ ಮಕ್ಕಳಿಗೆ ಅನ್ನ ಬಡಿಸುತ್ತಿರುವ ಬಡ ಮಹಿಳೆಯರ ಬದುಕಿನ ಅನ್ನವನ್ನೇ ಕಸಿದುಕೊಳ್ಳಲು ಹೊರಟಿದೆಯೇ ಈ ಕಾಂಗ್ರೆಸ್ ಸರ್ಕಾರ? ಎಂದು ಖಾರವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ ಸರ್ಕಾರ, ಅಕ್ಷರ ದಾಸೋಹ ಯೋಜನೆಯಡಿ ಲಕ್ಷಾಂತರ ಮಕ್ಕಳ ಹಸಿವು ನೀಗಿಸುತ್ತಿರುವ 1.13 ಲಕ್ಷ ಬಿಸಿಯೂಟ ನೌಕರರ ಬದುಕಿಗೆ ಕೊಳ್ಳಿ ಇಡಲು ಹೊರಟಿದೆ ಎಂದು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಆರ್.‌ ಅಶೋಕ್‌, ಮುಖ್ಯಮಂತ್ರಿ @DKShivakumar ಅವರೇ, ಕನಿಷ್ಠ ವೇತನವಿಲ್ಲ, ಭವಿಷ್ಯ ನಿಧಿಯಿಲ್ಲ, ಸೇವಾ ಭದ್ರತೆಯಿಲ್ಲ. ಇಷ್ಟೆಲ್ಲಾ ಅನ್ಯಾಯಗಳ ನಡುವೆಯೂ ಕಳೆದ ಎರಡೂವರೆ ದಶಕಗಳಿಂದ ನಿಷ್ಠೆಯಿಂದ ದುಡಿಯುತ್ತಿರುವ ಈ ಮಹಿಳೆಯರಿಗೆ ಈಗ ಉಳಿದಿರುವ ಅಲ್ಪ ಉದ್ಯೋಗವನ್ನೂ ಕಸಿದುಕೊಳ್ಳುವ ಹುನ್ನಾರವೇ ಈ 'ಕ್ಲಸ್ಟರ್ ಕಿಚನ್ ಸೆಂಟರ್' ಪ್ರಸ್ತಾವನೆ? ಎಂದು ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದರೂ ಈ ಸರ್ಕಾರಕ್ಕೆ ಬಡ ಮಹಿಳೆಯರ ಕಣ್ಣೀರು ಕಾಣಿಸುತ್ತಿಲ್ಲವೇ? ತಿಂಗಳಿಗೆ ಕೇವಲ ₹3,700 ವೇತನದಲ್ಲಿ ಕುಟುಂಬ ನಿರ್ವಹಿಸುವುದು ಹೇಗೆ? ಈಗ ಆ ಅಲ್ಪ ಆದಾಯಕ್ಕೂ ಕಲ್ಲು ಹಾಕಿದರೆ ಈ ತಾಯಂದಿರು ಬದುಕುವುದು ಹೇಗೆ? ಎಂದವರು ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಬಡವರ ಬದುಕನ್ನೇ ಬೀದಿಗೆ ತಳ್ಳುತ್ತಿದೆ. ಖಾಸಗಿ ಸಂಸ್ಥೆಗಳ ಹಿತಾಸಕ್ತಿಗೆ ಮಣೆ ಹಾಕಲು 1.13 ಲಕ್ಷ ಮಹಿಳಾ ನೌಕರರ ಭವಿಷ್ಯವನ್ನೇ ಬಲಿಕೊಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಆರ್.‌ ಅಶೋಕ್‌, ಬಿಸಿಯೂಟ ನೌಕರರ ಪರವಾಗಿ ಮೂರು ಅಂಶಗಳನ್ನು ಆಗ್ರಹಿಸಿದ್ದಾರೆ.

ನಮ್ಮ ಆಗ್ರಹ ಸ್ಪಷ್ಟ:
* ಕ್ಲಸ್ಟರ್ ಕಿಚನ್ ಸೆಂಟರ್ ಪ್ರಸ್ತಾವನೆಯನ್ನು ತಕ್ಷಣ ಕೈಬಿಡಬೇಕು.
* ಬಿಸಿಯೂಟ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು.
* ಕನಿಷ್ಠ ₹18,000 ಮಾಸಿಕ ವೇತನದ ಬೇಡಿಕೆಯನ್ನು ಈಡೇರಿಸಬೇಕು.

ಮಕ್ಕಳಿಗೆ ಅನ್ನ ಬಡಿಸುವ ತಾಯಂದಿರ ಹೊಟ್ಟೆಯ ಮೇಲೆಯೇ ಹೊಡೆಯುವಷ್ಟು ನಿರ್ದಯಿಯಾಗಿದೆಯೇ ಈ ಕಾಂಗ್ರೆಸ್ ಸರ್ಕಾರ? ಈ ಮಹಿಳೆಯರ ನ್ಯಾಯಯುತ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ. ಅವರ ಬದುಕು ಮತ್ತು ಉದ್ಯೋಗದ ಭದ್ರತೆ ಖಚಿತವಾಗುವವರೆಗೂ ಅವರ ಜೊತೆ ನಿಲ್ಲಲಿದೆ ಎಂದವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES