Karnataka Traffic Rules: ರಾಜ್ಯದ ಸಾರಿಗೆ ವ್ಯವಸ್ಥೆಯನ್ನ ಮತ್ತಷ್ಟು ಶಿಸ್ತುಬದ್ಧಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಲವು ಮಹತ್ವದ ಸಂಚಾರ ನಿಯಮಗಳನ್ನ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಹೊಸ ವರ್ಷದಿಂದಲೇ ಓಲಾ, ಉಬರ್, ನಮ್ಮ ಯಾತ್ರಿ ಸೇರಿದಂತೆ ಎಲ್ಲಾ ಅಗ್ರಿಗೇಟರ್ ಕ್ಯಾಬ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವ ಪ್ರಸ್ತಾವನೆ ಇದೆ. ಇದರ ಜೊತೆಗೆ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರಿಗೆ ವಿಧಿಸುವ ದಂಡವನ್ನ ಹೆಚ್ಚಿಸಲು ಹಾಗೂ ರಾಜ್ಯದಾದ್ಯಂತ ಹಾಫ್ ಹೆಲ್ಮೆಟ್ ಬಳಕೆಯನ್ನ ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಮುಂದಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಆಟೋ ರಿಕ್ಷಾಗಳ ಮಾದರಿಯಲ್ಲೇ ಅಗ್ರಿಗೇಟರ್ ಕ್ಯಾಬ್‌ಗಳಿಗೂ ಮೀಟರ್ ವ್ಯವಸ್ಥೆ ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ. ಓಲಾ, ಉಬರ್ ಮತ್ತು ನಮ್ಮ ಯಾತ್ರಿ ಸೇರಿದಂತೆ ವಿವಿಧ ಕಂಪನಿಗಳ ಕ್ಯಾಬ್‌ಗಳು ಈ ನಿಯಮದ ವ್ಯಾಪ್ತಿಗೆ ಬರಲಿವೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್‌ಗಳು ಹಾಗೂ ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ ಕಂಪನಿಯ ಕ್ಯಾಬ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರಿಂದ ಮನಬಂದಂತೆ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ಯಾಬ್‌ಗಳಿಗೆ ಮೀಟರ್ ಅಳವಡಿಸುವ ಸಂಬಂಧ ಕರಡು ನಿಯಮ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಯಮ ಜಾರಿಯಾದ ಬಳಿಕ ಮೀಟರ್ ಅಳವಡಿಸದೆ ಸಂಚರಿಸುವ ಆಟೋ ಮತ್ತು ಕ್ಯಾಬ್‌ಗಳ ವಿರುದ್ಧ ಭಾರಿ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ₹5,000 ದಂಡ
ಪಾದಚಾರಿಗಳ ಸುರಕ್ಷತೆ ಮತ್ತು ಫುಟ್‌ಪಾತ್‌ಗಳ ಬಳಕೆಯನ್ನ ಖಚಿತಪಡಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ನಗರ ಪ್ರದೇಶಗಳಲ್ಲಿ ಬೈಕ್ ಸೇರಿದಂತೆ ಇತರ ವಾಹನಗಳನ್ನ ಫುಟ್‌ಪಾತ್ ಮೇಲೆ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಪ್ರಸ್ತುತ ಇಂತಹ ಸಂಚಾರ ನಿಯಮ ಉಲ್ಲಂಘನೆಗೆ ₹1,000 ದಂಡ ವಿಧಿಸಲಾಗುತ್ತಿದೆ. ಆದರೆ ಹೊಸ ವರ್ಷದಿಂದ ಈ ಮೊತ್ತವನ್ನ ₹5,000ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.
ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ ₹5,000 ದಂಡ ವಿಧಿಸಿದರೆ, ಎರಡನೇ ಬಾರಿಯೂ ಇದೇ ತಪ್ಪು ಮಾಡಿದರೆ ₹10,000 ದಂಡ ಪಾವತಿಸಬೇಕಾಗುತ್ತದೆ. ಇಷ್ಟಕ್ಕೆ ಮಾತ್ರ ಕ್ರಮ ಸೀಮಿತವಾಗುವುದಿಲ್ಲ. ಮೂರನೇ ಅಥವಾ ನಾಲ್ಕನೇ ಬಾರಿಯೂ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದರೆ ಅಂತಹ ವಾಹನಗಳನ್ನ ಜಪ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಫುಟ್‌ಪಾತ್‌ಗಳಲ್ಲಿ ವಾಹನ ಸಂಚಾರವನ್ನ ತಡೆಯಲು ಕಠಿಣ ನಿಯಮ ಜಾರಿಗೆ ತರಲು ಸಿದ್ಧತೆ ನಡೆದಿದೆ.
ರಾಜ್ಯದಾದ್ಯಂತ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ
ದ್ವಿಚಕ್ರ ವಾಹನ ಸವಾರರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯದಾದ್ಯಂತ ಹಾಫ್ ಹೆಲ್ಮೆಟ್ ಬಳಕೆಯನ್ನ ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಐಎಸ್‌ಐ ಮಾರ್ಕ್ ಹೊಂದಿರುವ ಪೂರ್ಣ ಪ್ರಮಾಣದ ಹೆಲ್ಮೆಟ್‌ಗಳನ್ನೇ ಧರಿಸಬೇಕಾಗುತ್ತದೆ. ಹಾಫ್ ಹೆಲ್ಮೆಟ್ ಬಳಕೆಯನ್ನ ತಡೆಯುವುದರ ಜೊತೆಗೆ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್‌ಗಳನ್ನ ತಯಾರಿಸುವ ಘಟಕಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅಂತಹ ತಯಾರಿಕಾ ಕೇಂದ್ರಗಳನ್ನ ಬಂದ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
ಹೊಸ ವರ್ಷದಿಂದಲೇ ನಿಯಮಗಳ ಜಾರಿಗೆ ಸಿದ್ಧತೆ
ಈ ಎಲ್ಲಾ ಹೊಸ ನಿಯಮಗಳನ್ನ ಜಾರಿಗೆ ತರಲು ಅಗತ್ಯವಿರುವ ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದೆ ಎಂದು ಸಚಿವ ಭೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಮುಂಬರುವ ಹೊಸ ವರ್ಷದಿಂದಲೇ ಈ ನಿಯಮಗಳನ್ನ ಕಾಯ್ದೆಯ ರೂಪದಲ್ಲಿ ರಾಜ್ಯದಾದ್ಯಂತ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ.
ಒಟ್ನಲ್ಲಿ ಅಗ್ರಿಗೇಟರ್ ಕ್ಯಾಬ್‌ಗಳಿಗೆ ಮೀಟರ್ ಕಡ್ಡಾಯ, ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸುವವರಿಗೆ ಹೆಚ್ಚುವರಿ ದಂಡ ಹಾಗೂ ಹಾಫ್ ಹೆಲ್ಮೆಟ್ ಬಳಕೆಗೆ ಸಂಪೂರ್ಣ ನಿಷೇಧ ಸೇರಿದಂತೆ ಹಲವು ಬದಲಾವಣೆಗಳನ್ನ ತರಲು ಸರ್ಕಾರ ಮುಂದಾಗಿದೆ. ಈ ನಿಯಮಗಳು ಜಾರಿಗೆ ಬಂದರೆ ಕ್ಯಾಬ್ ಸೇವೆಗಳು ಮತ್ತು ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ವಾಹನ ಸವಾರರು ಹೊಸ ನಿಯಮಗಳನ್ನ ಪಾಲಿಸಬೇಕಾಗುತ್ತದೆ.