SOCIAL MEDIA

Newsletter

PARTNER SITES
Select Language Select State

ಕಾಲ್ ರಿಸೀವ್ ಮಾಡದ್ದಕ್ಕೆ ಪತ್ನಿಯ ಹೆಣ ಬೀಳಿಸಿದ ಪತಿ : ತಾಯಿ ಮಸಣಕ್ಕೆ, ತಂದೆ ಜೈಲಿಗೆ, ಮಕ್ಕಳು ಅನಾಥ

ರಂಜಿತ್ ಕುಮಾರ್ ಗುಪ್ತಾ ಎಂಬಾತ, ತನ್ನ ಪತ್ನಿ ಗುಂಜಾ ಮದೇಷಿಯಾಳನ್ನು ಸೀರೆಯಿಂದ ಕತ್ತು ಬಿಗಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆಕೆಯ ದೇಹದ ಮೇಲೆ ಬಿಸಿ ಎಣ್ಣೆ ಸುರಿದು ವಿರೂಪಗೊಳಿಸಲು ಯತ್ನಿಸಿದ್ದಲ್ಲದೆ, ಇದೊಂದು ಆಕಸ್ಮಿಕ ಸಾವು ಅಥವಾ ಆತ್ಮಹತ್ಯೆ ಎಂದು ನಾಟಕವಾಡಿದ್ದ. ಆದರೆ ಮುಂದಾಗಿದ್ದು ರೋಚಕ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 18, 2026, 06:39 PM IST | Updated: Sep 18, 2026, 06:48 PM IST
Image Credit: Bengaluru Crime News
Join

ಬೆಂಗಳೂರು: ಕೇವಲ ಫೋನ್ ಕಾಲ್ ಸ್ವೀಕರಿಸಲಿಲ್ಲ ಎನ್ನುವ ತೀರಾ ಸಣ್ಣ ಕಾರಣಕ್ಕೆ, ಹಲವು ವರ್ಷಗಳ ಕಾಲ ಜೊತೆಯಾಗಿ ಬಾಳಿದ, ಧರ್ಮ ಪತ್ನಿಯನ್ನು ಕ್ರೂರ ಪತಿಯೊಬ್ಬ ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ರಾಜಧಾನಿ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಘಟನೆಯನ್ನು ಆತ್ಮಹತ್ಯೆ ಹಾಗೂ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ ಆರೋಪಿ, ಪೊಲೀಸರ ಚಾಣಾಕ್ಷ ತನಿಖೆಯಿಂದಾಗಿ ಕೊನೆಗೂ ಕಂಬಿ ಎಣಿಸುವಂತಾಗಿದೆ.

ಬೆಚ್ಚಿಬಿದ್ದ ಬಿಳೇಕಳ್ಳಿಯ ನಿವಾಸಿಗಳು
ಸಿಲಿಕಾನ್ ಸಿಟಿಯ ಮೈಕೋ ಲೇಔಟ್ ವ್ಯಾಪ್ತಿಯ ಬಿಳೇಕಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನಿನ್ನೆ ರಾತ್ರಿ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿ ಮಹಿಳೆಯನ್ನು ಗುಂಜಾ ಮದೇಷಿಯಾ ಎಂದು ಗುರುತಿಸಲಾಗಿದ್ದು, ಈಕೆಯನ್ನೇ ಬಲಿ ಪಡೆದ ಪತಿಯನ್ನು ರಂಜಿತ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರ ರಾಜ್ಯದವರಾದ ಈ ದಂಪತಿ, ಬದುಕಿನ ಕನಸು ಹೊತ್ತು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇವರಿಗೆ ಸಂಸಾರದ ಕುರುಹಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಂಜಿತ್ ದಿನನಿತ್ಯ ಕೆಲಸಕ್ಕೆ ಹೋಗುತ್ತಿದ್ದರೆ, ಗುಂಜಾ ಗೃಹಿಣಿಯಾಗಿ ಮಕ್ಕಳನ್ನು ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು.

ಸಣ್ಣ ವಿಚಾರಕ್ಕೆ ಶುರುವಾದ ಸಂಶಯ ಮತ್ತು ಜಗಳ
ಮೊದಮೊದಲು ಚೆನ್ನಾಗಿಯೇ ಇದ್ದ ಈ ದಂಪತಿಯ ನಡುವೆ ಇತ್ತೀಚಿನ ದಿನಗಳಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದವು. ರಂಜಿತ್ ಕೆಲಸದ ನಿಮಿತ್ತ ಹೊರಗೆ ಹೋದಾಗ ಪತ್ನಿ ಗುಂಜಾಗೆ ಫೋನ್ ಮಾಡುತ್ತಿದ್ದ. ಆದರೆ ಕೆಲವೊಮ್ಮೆ ಗುಂಜಾ ಫೋನ್ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಅಥವಾ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಇದನ್ನೇ ದೊಡ್ಡ ವಿಚಾರವಾಗಿ ಮಾಡಿಕೊಂಡ ರಂಜಿತ್, ಪತ್ನಿಯ ಮೇಲೆ ಅನುಮಾನಪಟ್ಟು ಪ್ರತಿದಿನ ಕಿರುಕುಳ ನೀಡಲು ಶುರುಮಾಡಿದ್ದ. ಕಾಲ್ ರಿಸೀವ್ ಮಾಡದ ವಿಚಾರವೇ ಇಬ್ಬರ ನಡುವೆ ದೆವ್ವದಂತೆ ಹೊಕ್ಕು ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿತ್ತು.

ಕತ್ತು ಬಿಗಿದು ಕೊಲೆ ಮಾಡಿದ ರಾಕ್ಷಸ
ಘಟನೆಯ ನಡೆದ ದಿನದಂದು ಬೆಳಿಗ್ಗೆ ಇಬ್ಬರೂ ಮಕ್ಕಳು ಪ್ರತಿ ದಿನದಂತೆ ಶಾಲೆಗೆ ತೆರಳಿದ್ದರು. ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಂತೆಯೇ, ಮನೆಯಲ್ಲಿ ದಂಪತಿಗಳ ನಡುವೆ ಮತ್ತೆ ಅದೇ ಹಳೆಯ ಫೋನ್ ಕಾಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ರಂಜಿತ್, ಮೃಗದಂತೆ ವರ್ತಿಸಲು ಶುರುಮಾಡಿದ್ದಾನೆ. ರೊಚ್ಚಿಗೆದ್ದು ಪತ್ನಿ ಗುಂಜಾಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆತ, ಬಳಿಕ ಆಕೆಯ ಸೀರೆಯನ್ನು ಕತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆಕೆ ಉಸಿರು ಸಿಲ್ಲಿಸುವವರೆಗೂ ನಿರ್ದಯೆಯಿಂದ ಕತ್ತು ಹಿಸುಕಿ ಪ್ರಾಣ ತೆಗೆದಿದ್ದಾನೆ.

ಸಾಕ್ಷಿ ನಾಶಕ್ಕೆ ವಿಕೃತ ಪ್ಲಾನ್: ಮೃತದೇಹದ ಮೇಲೆ ಬಿಸಿ ಎಣ್ಣೆ!
ಪತ್ನಿ ಅಸುವಿನೀಗಿದ ಮೇಲೆಯೂ ಈ ರಾಕ್ಷಸನ ವಿಕೃತಿ ಶಮನವಾಗಿರಲಿಲ್ಲ. ಇದು ಕೊಲೆ ಎಂದು ಪೊಲೀಸರಿಗೆ ತಿಳಿದರೆ ತಾನು ಜೈಲು ಪಾಲಾಗಬೇಕಾಗುತ್ತದೆ ಎಂದು ಅರಿತ ರಂಜಿತ್, ಅತ್ಯಂತ ಖತರ್ನಾಕ್ ಪ್ಲಾನ್ ಒಂದನ್ನು ರೂಪಿಸಿದ್ದ. ಮೃತದೇಹದ ಗುರುತು ಸಿಗದಂತೆ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ, ಅಡುಗೆ ಮನೆಯಲ್ಲಿದ್ದ ಬಿಸಿ ಎಣ್ಣೆಯನ್ನು ತಂದು ಹೆಂಡತಿಯ ಮೃತದೇಹದ ಮೇಲೆ ಸುರಿದಿದ್ದಾನೆ. ಆಕೆಯ ಚರ್ಮವನ್ನು ಸುಲಿದು, ಇದೊಂದು ಆಕಸ್ಮಿಕ ಬೆಂಕಿ ದುರಂತ ಅಥವಾ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಬಳಿಕ ಶವವನ್ನು ಮನೆಯಲ್ಲೇ ಬಿಟ್ಟು, ಏನೂ ತಿಳಿಯದವನಂತೆ ಹೊರಗೆ ಹೋಗಿ ಕೆಲ ಕಾಲ ಓಡಾಡಿಕೊಂಡು ಬಂದಿದ್ದಾನೆ.

ಖಾಕಿ ಬಲೆಗೆ ಬಿದ್ದ ಆರೋಪಿ
ಮನೆಯಿಂದ ಹೊರಹೋಗಿ ವಾಪಸ್ ಬಂದ ರಂಜಿತ್, ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಕ್ಕಪಕ್ಕದವರ ಮುಂದೆ ಜೋರಾಗಿ ಅಳುತ್ತಾ ನಾಟಕವಾಡಲು ಶುರುಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೈಕೋ ಲೇಔಟ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ, ಮನೆಯ ಮಾಲೀಕರು ದಂಪತಿಯ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು ಹಾಗೂ ಬೆಳಿಗ್ಗೆಯೂ ಗಲಾಟೆ ಸದ್ದು ಕೇಳಿಸಿತ್ತು ಎಂಬ ಪ್ರಮುಖ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಮನೆ ಮಾಲೀಕರ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ರಂಜಿತ್‌ ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆತನ ಮುಖವಾಡ ಕಳಚಿಬಿದ್ದಿದೆ. ತಾನೇ ಪತ್ನಿಯನ್ನು ಕೊಲೆ ಮಾಡಿ, ಬಿಸಿ ಎಣ್ಣೆ ಸುರಿದು ನಾಟಕವಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಅನಾಥವಾದವು ಮುದ್ದಾದ ಕಂದಮ್ಮಗಳು
ಸದ್ಯ ಮೈಕೋ ಲೇಔಟ್ ಠಾಣೆ ಪೊಲೀಸರು ಆರೋಪಿ ರಂಜಿತ್ ಕುಮಾರ್ ಗುಪ್ತಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಕುರಿತು ಹೆಚ್ವುವರ ಸಾಕ್ಷ್ಯಗಳನ್ನು ಕಲೆಹಾಕುತ್ತಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಕೋಪ ಮತ್ತು ಅನುಮಾನದ ಭರದಲ್ಲಿ ಕಾಲ್ ರಿಸೀವ್ ಮಾಡಲಿಲ್ಲ ಎನ್ನುವ ತೀರಾ ಸಣ್ಣ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿದ ಪತಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಆದರೆ ಹೆತ್ತ ತಾಯಿ ಸ್ಮಶಾನ ಸೇರಿ, ತಂದೆ ಜೈಲು ಪಾಲಾದ ಪರಿಣಾಮ, ಏನೂ ಅರಿಯದ ಆ ಇಬ್ಬರು ಮುಗ್ಧ ಮಕ್ಕಳು ಇಂದು ಬೀದಿಗೆ ಬಿದ್ದು ಅನಾಥವಾಗಿದ್ದಾರೆ. ಈ ಕೃತ್ಯ ಇಡೀ ಬಿಳೇಕಳ್ಳಿ ಭಾಗದ ಜನರನ್ನು ತೀವ್ರ ದಿಗ್ಭ್ರಮೆಗೊಳಿಸಿದೆ.

ಈ ಕರುಣಾಜನಕ ಘಟನೆಯು ಸಮಾಜಕ್ಕೆ ಅತ್ಯಂತ ಕಟು ಹಾಗೂ ಎಚ್ಚರಿಕೆಯ ಸಂದೇಶವನ್ನು ನೀಡುತ್ತದೆ. ದಾಂಪತ್ಯದಲ್ಲಿ ಅತಿಯಾದ ಅನುಮಾನ, ಅನಗತ್ಯ ಕ್ಷುಲ್ಲಕ ಗಲಾಟೆಗಳು ಹಾಗೂ ಕ್ಷಣಿಕ ಆವೇಶಗಳು ಹೇಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಬಲ್ಲವು ಎಂಬುದಕ್ಕೆ ಈ ದುರಂತವೇ ಸಾಕ್ಷಿ. ಕೇವಲ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಸಣ್ಣ ಕಾರಣಕ್ಕೆ ಉಂಟಾದ ರೋಷ, ಒಬ್ಬ ತಾಯಿಯ ಪ್ರಾಣವನ್ನು ತೆಗೆದು, ತಂದೆಯನ್ನು ಜೈಲು ಪಾಲು ಮಾಡಿದೆ.

ಇಡೀ ದುರಂತದಲ್ಲಿ ಅತ್ಯಂತ ನೋವಿನ ಸಂಗತಿಯೆಂದರೆ, ಹೆತ್ತ ತಾಯಿಯನ್ನು ಕಳೆದುಕೊಂಡು, ತಂದೆಯೂ ದೂರವಾಗಿ, ಯಾವುದೇ ತಪ್ಪನ್ನೂ ಮಾಡದ ಆ ಇಬ್ಬರು ಮುಗ್ಧ ಮಕ್ಕಳು ಅನಾಥರಾಗಿರುವುದು. ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ರೋಷ ಹಾಗೂ ಅನುಮಾನಗಳನ್ನು ಹತೋಟಿಯಲ್ಲಿಟ್ಟುಕೊಳ್ಳದಿದ್ದರೆ, ಅದರ ಭೀಕರ ಪರಿಣಾಮವನ್ನು ಅಮಾಯಕ ಮಕ್ಕಳು ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಘಟನೆ ಎತ್ತಿಹಿಡಿಯುತ್ತದೆ. ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ತಾಳ್ಮೆ ಎಷ್ಟು ಮುಖ್ಯ ಎಂಬುದಕ್ಕೆ ಇದೊಂದು ಕಣ್ಣು ತೆರೆಸುವ ಘಟನೆಯಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES