ಕತ್ತು ಸೀಳಿ, ಕೈ ತೊಳೆದುಕೊಂಡು ಎಸ್ಕೇಪ್ ಆಗುತ್ತಿದ್ದ ಕೊ*ಲೆಗಾರ..! ಬೆನ್ನಟ್ಟಿ ಹಿಡಿದ ಜನ ಮಾಡಿದ್ದೇನು ಗೊತ್ತೆ?
ಇಂದು ಬೆಳ್ಳಂಬೆಳಗ್ಗೆ ದಾವಣಗೆರೆ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಕ್ರೂರಿಯೋರ್ವ ಒಂಟಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಕತ್ತು ಸೀಳಿಬಿಟ್ಟಿದ್ದ. ಮಹಿಳೆಯ ಕತ್ತು ಸೀಳಿ ಎಸ್ಕೇಪ್ ಆಗ್ತಿದ್ದವನನ್ನು ಸ್ಥಳೀಯರು ಹಿಡಿದು ತೆಂಗಿನಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಒಪ್ಪಿಸಿದ್ರು. ಅಷ್ಟಕ್ಕೂ ಯಾರು ಆ ಮಹಿಳೆ, ಅ ಪಾಪಿ ಮಹಿಳೆಯ ಕತ್ತು ಸೀಳಿದ್ದೇಕೆ? ಸಂಪೂರ್ಣ ಸ್ಟೋರಿ ಇಲ್ಲಿದೆ..
ದಾವಣಗೆರೆ : ಮೆಟ್ಟಿಲುಗಳ ಮೇಲೆಯೇ ಬಿದ್ದಿರುವ ಮಹಿಳೆಯ ಮೃತದೇಹ... ಆತಂಕದಿಂದ ಮನೆ ಬಳಿ ಜಮಾವಣೆಗೊಂಡು ನೋಡುತ್ತಿರುವ ನೂರಾರು ಜನ... ಆರೋಪಿಯನ್ನು ತೆಂಗಿನಮರಕ್ಕೆ ಕಟ್ಟಿಹಾಕಿ ಪೊಲೀಸರ ಕರೆಯಿಸಿರುವ ಸ್ಥಳೀಯರು.. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರೋ ಹಿರಿಯ ಪೊಲೀಸ್ ಅಧಿಕಾರಿಗಳು... ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ದಾವಣಗೆರೆಯ ಶೇಖರಪ್ಪ ನಗರದಲ್ಲಿ..
ಹೌದು... ಹೀಗೆ ಮನೆ ಎದುರೇ ಹೆಣವಾಗಿರೋ ಮಹಿಳೆಯ ಹೆಸರು ನಾಗರತ್ನಮ್ಮ ಅಂತಾ 50 ವರ್ಷ ವಯಸ್ಸು. ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನವರಾಗಿದ್ದ ನಾಗರತ್ನಮ್ಮ ಹಲವು ವರ್ಷಗಳ ಹಿಂದೆ ಪತಿಯಿಂದ ದೂರವಾಗಿ ಮೂವರು ಗಂಡು ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸವಿದ್ದರು. ಮೊದಲು ಹೂವಿನ ವ್ಯಾಪಾರ ಮಾಡುತ್ತಿದ್ದ ನಾಗರತ್ನಮ್ಮ ಬಳಿಕ ಸಣ್ಣಪುಟ್ಟ ಮನೆಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಳು. ಹೀಗಿದ್ದ ಆಕೆಗೆ ನಾಗರಾಜ್ ನಾಯ್ಕ್ ಎಂಬ ವ್ಯಕ್ತಿ ಪರಿಚಯವಾಗಿ ಸ್ನೇಹಕ್ಕೆ ತಿರುಗಿತ್ತು. ಮಕ್ಕಳು ದೊಡ್ಡವರಾದ ಮೇಲೆ ಕೆಲಸಕ್ಕೆ ಎಂದು ಇಬ್ಬರು ಬೆಂಗಳೂರಿಗೆ ತೆರಳಿದ್ರೆ ಓರ್ವ ಸಂಬಂಧಿ ಮನೆಯಲ್ಲಿ ವಾಸವಿದ್ದು ಆಗಾಗ ತಾಯಿ ಭೇಟಿಗೆ ಬರ್ತಿದ್ದ.
ತಾಯಿ ನಾಗರಾಜ ನಾಯ್ಕ್‌ನ ಜೊತೆ ಸಲುಗೆಯಿಂದ ಇರೋದಕ್ಕೆ ಮಕ್ಕಳು ವಿರೋಧ ವ್ಯಕ್ತಪಡಿಸಿದ್ರು ಈ ಸಂಬಂಧ ನಾಗರಾಜ್ ನಾಯ್ಕ್ ಜೊತೆ ಹಲವು ಬಾರಿ ಗಲಾಟೆಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ದಾವಣಗೆರೆಯ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದೂರು ಪ್ರತಿದೂರು ಅಂತಾ ಐದು ಪ್ರಕರಣಗಳು ದಾಖಲಾಗಿದ್ದವು. ಆದರೂ ನಾಗರಾಜ್ ನಾಯ್ಕ್ ಪದೇಪದೇ ನಾಗರತ್ನಮ್ಮ ನಿವಾಸಕ್ಕೆ ಬಂದು ಪದೇಪದೇ ಕಾಟ ಕೊಡುತ್ತಿದ್ದ. ಕೊಲೆಯಾದ ನಾಗರತ್ನಮ್ಮಳೇ ಈ ನಾಗರಾಜ್ ನಾಯ್ಕ್ ವಿರುದ್ಧ ಕಳ್ಳತನದ ದೂರು ನೀಡಿದ್ದರು.
ಹೀಗಿದ್ದಾಗ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಕಂಠಪೂರ್ತಿ ಕುಡಿದು ನಾಗರತ್ನಮ್ಮ ನಿವಾಸಕ್ಕೆ ಆಗಮಿಸಿದ್ದ ನಾಗರಾಜ್ ನಾಯ್ಕ್ ಆಕೆಯನ್ನು ಪುಟ್ಟ ಮನೆಯೊಳಗೆಯೇ ಅಟ್ಟಾಡಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ನಾಗರತ್ನಮ್ಮ ಮನೆಯ ಮೇಲ್ಮಹಡಿಗೆ ತೆರಳಿದ ವೇಳೆ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
ಇನ್ನು ಬೆಳಗ್ಗೆ ನಾಗರತ್ನಮ್ಮ ಕತ್ತು ಸೀಳಿ ರಕ್ತಸಿಕ್ತ ವಾದ ತನ್ನ ಕೈಗಳನ್ನು ಮನೆಯ ಎದುರು ಬಕೆಟ್ ನಲ್ಲಿ ಇಟ್ಟಿದ್ದ ನೀರಿನಿಂದ ಕೈ ತೊಳೆದುಕೊಂಡು ನಡೆದುಕೊಂಡು ಎಸ್ಕೇಪ್ ಆಗುತ್ತಿದ್ದ. ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ಜಮಾವಣೆಗೊಂಡ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಗರತ್ನಮ್ಮ ರನ್ನು ಆಸ್ಪತ್ರೆಗೆ ಸಾಗಿಸಬೇಕೆಂದು ಹೋದ ವೇಳೆಯೇ ಬಾಗಿಲು ಬಳಿಯೇ ಜೀವ ಹೋಗಿದೆ. ನಡೆದುಕೊಂಡು ಹೋಗುತ್ತಿದ್ದ ಆರೋಪಿ ನಾಗರಾಜ್ ನಾಯ್ಕ್‌ನನ್ನು ಸ್ಥಳೀಯ ಯುವಕರು ಹಿಡಿದು ಅಲ್ಲಿಯೇ ಇದ್ದ ತೆಂಗಿನ ಮರಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರ್ ಎಂಸಿ ಯಾರ್ಡ್ ಠಾಣೆ ಪೊಲೀಸರು ಆರೋಪಿ ನಾಗರಾಜ್ ನಾಯ್ಕ್‌ನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಾಗರತ್ನಮ್ಮ ಮಗ ಹಾಗೂ ಕುಟುಂಬಸ್ಥರು ನಿರಾಕರಿಸಿದ್ದಾರೆ. ಅದೇನೇ ಜಗಳ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದ್ರೆ ಈ ರೀತಿ ಒಂಟಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಆರೋಪಿ ವಿರುದ್ಧ ಕಠಿಣ ಶಿಕ್ಷೆ ಆಗಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.