SOCIAL MEDIA

Newsletter

PARTNER SITES
Select Language Select State

ಯಾದಗಿರಿಯಲ್ಲಿ ನೀರಿಗಾಗಿ ಬೃಹತ್ ಪ್ರತಿಭಟನೆ: ಬೀದರ್‌ - ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

ಪ್ರತಿಭಟನಾಕಾರರು ಬೀದರ್‌–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಳೆದ ಎರಡು ಗಂಟೆಗಳಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು.

Written By Chetana Devarmani
Published: Oct 24, 2026, 04:49 PM IST | Updated: Oct 24, 2026, 04:50 PM IST
Join

ಯಾದಗಿರಿ: ಬಸವಸಾಗರ ಜಲಾಶಯದಿಂದ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಾಜುಗೌಡ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಬೀದರ್‌–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಳೆದ ಎರಡು ಗಂಟೆಗಳಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು.

ಭತ್ತದ ಬೆಳೆ ಕಟಾವಿನ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಮೀನುಗಳಿಗೆ ನಿರಂತರವಾಗಿ ನೀರು ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ. ಸದ್ಯ ವಾರಬಂದಿ ಪದ್ಧತಿಯಡಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದು, ಅಕ್ಟೋಬರ್ 26ರಂದು ವಾರಬಂದಿ ಅವಧಿ ಮುಗಿದ ಬಳಿಕ ನೀರು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇದರಿಂದ ಬೆಳೆಗಳಿಗೆ ತೊಂದರೆಯಾಗಬಹುದು ಎಂಬ ಆತಂಕ ರೈತರನ್ನು ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ.

ನವೆಂಬರ್ 30ರವರೆಗೆ ನೀರು ಹರಿಸಲು ಆಗ್ರಹ

ಬಸವಸಾಗರ ಜಲಾಶಯದ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಕನಿಷ್ಠ ನವೆಂಬರ್ 30ರವರೆಗಾದರೂ ನೀರು ಬಿಡುಗಡೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಭತ್ತದ ಬೆಳೆ ಈಗಾಗಲೇ ತೆನೆ ಕಟ್ಟಿದ್ದು, ಕಟಾವಿಗೆ ಸಿದ್ಧವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಪೂರೈಕೆ ಸ್ಥಗಿತಗೊಂಡರೆ ರೈತರು ಬೆಳೆ ನಷ್ಟ ಅನುಭವಿಸಬೇಕಾಗಬಹುದು ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಾರಬಂದಿ ಪದ್ಧತಿಯಿಂದಾಗಿ ನಿಗದಿತ ಅವಧಿಯಲ್ಲಿ ಮಾತ್ರ ನೀರು ದೊರೆಯುತ್ತಿದೆ. ಆದರೆ, ಬೆಳೆಯ ನಿರ್ಣಾಯಕ ಹಂತದಲ್ಲಿ ನಿರಂತರ ನೀರಿನ ಅಗತ್ಯವಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಲಾಗಿದೆ.

ತೆಲಂಗಾಣಕ್ಕೆ ನೀರು ಬಿಡಲಾಗುತ್ತಿದೆ ಎಂಬ ಆರೋಪ

ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಲ್ಲಿ ನೀರಿದ್ದರೂ ಸ್ಥಳೀಯ ರೈತರಿಗೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಕರ್ನಾಟಕದ ರೈತರ ಬೆಳೆಗಳಿಗೆ ನೀರು ಒದಗಿಸದೆ ತೆಲಂಗಾಣಕ್ಕೆ ನೀರು ಹರಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಸ್ಥಳೀಯ ರೈತರ ಕೃಷಿ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಬೇಕು. ಬೆಳೆಗಳು ಕಟಾವಿಗೆ ಬರುವವರೆಗೆ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜಲಾಶಯಗಳಲ್ಲಿ ನೀರಿನ ಲಭ್ಯತೆ ಮತ್ತು ನೀರು ಹಂಚಿಕೆ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಹೆದ್ದಾರಿ ಬಂದ್‌ನಿಂದ ಸಂಚಾರ ಅಸ್ತವ್ಯಸ್ತ

ದೇವಾಪುರ ಕ್ರಾಸ್ ಬಳಿ ನಡೆದ ಪ್ರತಿಭಟನೆಯಲ್ಲಿ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು. ನೀರಿನ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಪ್ರತಿಭಟನೆಯಿಂದ ಬೀದರ್‌–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಕಳೆದ ಎರಡು ಗಂಟೆಗಳಿಂದ ಹೆದ್ದಾರಿ ಬಂದ್ ಆಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.

ರೈತರ ಬೆಳೆಗಳಿಗೆ ಅಗತ್ಯವಿರುವ ನೀರನ್ನು ನಿಗದಿತ ಅವಧಿಯವರೆಗೆ ನಿರಂತರವಾಗಿ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗಿದ್ದು, ಸರ್ಕಾರ ಮತ್ತು ನೀರಾವರಿ ಇಲಾಖೆಯ ಮುಂದಿನ ಕ್ರಮಗಳತ್ತ ರೈತರ ಗಮನ ನೆಟ್ಟಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES