SOCIAL MEDIA

Newsletter

PARTNER SITES
Select Language Select State

ಮಂಗಳೂರು MRPLನಲ್ಲಿ ಭಾರೀ ಸ್ಫೋಟ: ಮನೆಗಳಿಗೆ ಹಾನಿ, 8 ಮಂದಿಗೆ ಗಾಯ, ಕಾರ್ಗೊ ಗೇಟ್ ಬಳಿ ಸ್ಥಳೀಯರ ತೀವ್ರ ಪ್ರತಿಭಟನೆ!

ಸಂಸ್ಥೆಯ 3ನೇ ಹಂತದ ಕೋಕರ್ ಹೈಡ್ರೋ ಟ್ರೀಟಿಂಗ್ ಯುನಿಟ್‌ (CHTU) / CST ಪ್ಲಾಂಟ್‌ನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ವಿಶೇಷವೆಂದರೆ, ಈ ಘಟಕವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.

Reported By Manjunath Naragund Written By Manjunath Naragund
Published: Sep 30, 2026, 04:50 PM IST | Updated: Sep 30, 2026, 05:04 PM IST
Image Credit: Mangalore Fire
Join

ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಘಟಕವೊಂದರಲ್ಲಿ ಇಂದು ಮಧ್ಯಾಹ್ನ ದಿಢೀರ್ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಸಂಪೂರ್ಣ ಪ್ರದೇಶವೇ ನಡುಗಿಹೋಗಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಮನೆಗಳಿಗೆ ಹಾನಿಯುಂಟಾಗಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಸಂಸ್ಥೆಯ 3ನೇ ಹಂತದ ಕೋಕರ್ ಹೈಡ್ರೋ ಟ್ರೀಟಿಂಗ್ ಯುನಿಟ್‌ (CHTU) / CST ಪ್ಲಾಂಟ್‌ನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ವಿಶೇಷವೆಂದರೆ, ಈ ಘಟಕವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ. ಮಧ್ಯಾಹ್ನ ಸಾಗುತ್ತಿದ್ದಂತೆ ಸೈರನ್‌ಗಳ ತೀವ್ರ ಶಬ್ದದೊಂದಿಗೆ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸಿಬ್ಬಂದಿ ಹಾಗೂ ಸುತ್ತಮುತ್ತಲ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತು.

10 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನ, ಕಿಟಕಿ ಗಾಜುಗಳು ಧ್ವಂಸ!

ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಹಲವು ಮನೆಗಳ ಕಿಟಕಿ ಗಾಜುಗಳು, ಹೆಂಚುಗಳು ಪುಡಿಯಾಗಿವೆ. ಇದ್ದಕ್ಕಿದ್ದಂತೆ ಸಂಭವಿಸಿದ ಈ ಘಟನೆಯಿಂದಾಗಿ ಬೆಚ್ಚಿಬಿದ್ದ ಸ್ಥಳೀಯರು ಮನೆಗಳಿಂದ ಹೊರಗೆ ಓಡಿಬಂದರು.

ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು MRPLನ ಕಾರ್ಗೊ ಗೇಟ್ ಬಳಿ ಜಮಾಯಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರ ಪ್ರತಿಭಟನೆ ನಡೆಸಿದರು. ಗೇಟ್ ಬಂದ್ ಮಾಡಿ ಕಂಪನಿಯ ವಿರುದ್ಧ ಘೋಷಣೆ ಕೂಗಿದ ಸಾರ್ವಜನಿಕರು, "ಜನರ ಪ್ರಾಣಕ್ಕಿಂತಲೂ ಕಂಪೆನಿಗೆ ತನ್ನ ಲಾಭ ಮತ್ತು ಕೆಲಸವೇ ಮುಖ್ಯವಾಗಿದೆಯೇ?" ಎಂದು ಕಡಾಖಂಡಿತವಾಗಿ ಪ್ರಶ್ನಿಸಿದರು. ಸ್ಫೋಟದಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣವೇ ಪರಿಹಾರ ನೀಡಿ, ಸೂಕ್ತ ದುರಸ್ತಿ ಮಾಡಿಸಿಕೊಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:

ಸ್ಥಳದಲ್ಲಿ ಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಬಜ್ಪೆ ಠಾಣೆ ಪೊಲೀಸರು ಹಾಗೂ ಪಣಂಬೂರು ಉಪವಿಭಾಗದ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಸ್ವತಃ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂತಿಮವಾಗಿ ಭದ್ರತೆಯ ಹಿತದೃಷ್ಟಿಯಿಂದ ಪೊಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಕಿ ನಂದಿಸುವ ಹಾಗೂ ದುರಂತಕ್ಕೆ ನಿಖರ ಕಾರಣವೇನು ಎಂಬುದನ್ನು ಕಂಡುಕೊಳ್ಳುವ ಕಾರ್ಯಾಚರಣೆ ಮುಂದುವರಿದಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES