SOCIAL MEDIA

Newsletter

PARTNER SITES
Select Language Select State

ಗದಗದಲ್ಲಿ ಕುಡಿಯುವ ನೀರಿಗಾಗಿ ಬೃಹತ್ ಪ್ರತಿಭಟನೆ: ಖಾಲಿ ಕೊಡ ಹಿಡಿದು ರಸ್ತೆಗಿಳಿದ ಬಿಜೆಪಿ ಕಾರ್ಯಕರ್ತರು

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಜನರ ಆಕ್ರೋಶ ಸ್ಫೋಟಗೊಂಡಿದೆ. 20ರಿಂದ 25 ದಿನಕ್ಕೊಮ್ಮೆ ನೀರು ಪೂರೈಕೆ ಮಾಡ್ತಿರೋದಕ್ಕೆ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಖಾಲಿ ಕೊಡ ಹಿಡಿದು ರಸ್ತೆಗಿಳಿದ ಕಾರ್ಯಕರ್ತರು, ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬ್ಯಾರಿಕೇಡ್ ತಳ್ಳಾಟ, ಪೊಲೀಸರ ಜೊತೆ ಮಾತಿನ ಚಕಮಕಿ ಕೂಡ ನಡೆದಿದೆ. ಇತ್ತ ಶಾಸಕ ಸಿ.ಸಿ. ಪಾಟೀಲ್, 50 ರಿಂದ 100 ಕೋಟಿ ಅನುದಾನ ನೀಡಿದ್ರೆ ಗದಗನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬಹುದು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಷ್ಟಕ್ಕೂ ಪ್ರತಿಭಟನೆಯಲ್ಲಿ ಏನಾಯ್ತು..?ನೀರಿಗಾಗಿ ಜನರ ಬೇಡಿಕೆ ಏನು..?ನೋಡಿ ಈ ವರದಿ..

Reported By Krishna NK Written By Krishna NK
Published: Sep 29, 2026, 06:10 PM IST | Updated: Sep 29, 2026, 06:11 PM IST
Image Credit: Gadag bjp
Join

ಗದಗ : ಗದಗ-ಬೆಟಗೇರಿ ಅವಳಿ ನಗರ.. ಸಾವಿರಾರು ಜನರ ದಾಹ ತಣಿಸಬೇಕಾದ ನಗರ.. ಆದ್ರೆ ಇಲ್ಲಿ ಕುಡಿಯುವ ನೀರಿಗಾಗಿ ಜನರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ.. 20ರಿಂದ 25 ದಿನಕ್ಕೊಮ್ಮೆ ನೀರು ಪೂರೈಕೆ ಆಗ್ತಿದೆ ಅನ್ನೋ ಆರೋಪ.. ಪದೇ ಪದೆ ಪೈಪ್‌ಲೈನ್, ಮೋಟಾರ್ ದುರಸ್ತಿ ಹೆಸರಿನಲ್ಲಿ ನೀರು ಪೂರೈಕೆ ವ್ಯತ್ಯಯವಾಗ್ತಿದೆ ಅನ್ನೋ ಆಕ್ರೋಶ.. ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಇಂದು ಬೀದಿಗಿಳಿದಿದ್ದಾರೆ..

ಹೌದು.. ಗದಗ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಿಂದ ನಗರಸಭೆವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ಕೈಯಲ್ಲಿ ಖಾಲಿ ಕೊಡ ಹಿಡಿದು, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಕೊಡಿ, ಇಲ್ಲವೇ ಕುರ್ಚಿ ಬಿಡಿ. ಭಾಷಣದಿಂದ ನೀರಿನ ದಾಹ ತೀರಲ್ಲ. ಅವಳಿ ನಗರಕ್ಕೆ 24/7 ನೀರು ಕೊಡಿ ಅಂತ ನೇರವಾಗಿ ಶಾಸಕ ಎಚ್ ಕೆ ಪಾಟೀಲರಿಗೆ ಟಾಂಗ್ ನೀಡಿದ್ದಾರೆ.

ಇನ್ನು ಪ್ರತಿಭಟನೆ ಪ್ರಾರಂಭವಾದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ರು. ಸರ್ಕಾರ ಹಾಗೂ ಶಾಸಕ ಎಚ್.ಕೆ. ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಹೋಮ-ಹವನ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ನೀರಿನ ಹೆಸರಲ್ಲಿ ರಾಜಕಾರಣ ಮಾಡೋ ನಿಮಗಿದು ಕೊನೆಯ ಚುನಾವಣೆ. ಶಾಸಕರು ಕೊಟ್ಟ ಮಾತು ಹುಸಿಯಾಗಿದೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಒಂದು ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದ್ರೆ ಗದಗದಿಂದ ಹುಲಕೋಟಿಯಲ್ಲಿರುವ ಎಚ್.ಕೆ. ಪಾಟೀಲ್ ನಿವಾಸದವರೆಗೆ ಪಾದಯಾತ್ರೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇಷ್ಟಕ್ಕೆ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಲಿಲ್ಲ. ನಗರಸಭೆ ಕಚೇರಿ ಬಳಿ ಬರುತ್ತಿದ್ದಂತೆ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ನಗರಸಭೆಯ ಮುಖ್ಯ ಗೇಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ ತಳ್ಳಿದ ಕಾರ್ಯಕರ್ತರು, ಗೇಟ್ ಹತ್ತಿ ಕಚೇರಿಗೆ ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಗರಸಭೆ ಎದುರು ಕೆಲಕಾಲ ಹೈಡ್ರಾಮಾ ಸೃಷ್ಟಿಯಾಯ್ತು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕೂಡ ಆಗಮಿಸಿದ್ರು. ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನಾಕಾರರು ತಮ್ಮ ಅಸಮಾಧಾನ ಹೊರಹಾಕಿದ್ರು. ಪದೇ ಪದೆ ಪೈಪ್‌ಲೈನ್ ದುರಸ್ತಿ. ಮೋಟಾರ್ ದುರಸ್ತಿ. ಇದೇ ಹೆಸರಿನಲ್ಲಿ ನೀರಿನ ಸಮಸ್ಯೆ ಮುಂದುವರಿಯುತ್ತಿದೆ. ಅಧಿಕಾರಿಗಳಿಗೆ ಈ ದುರಸ್ತಿ ಕೆಲಸವೇ ಅಕ್ಷಯ ಪಾತ್ರೆ ಆಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ರು.

ಇನ್ನು ಶಾಸಕ ಸಿ ಸಿ ಪಾಟೀಲ್ ಮಾತನಾಡಿ, ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸರ್ಕಾರ ಅಗತ್ಯ ಅನುದಾನ ನೀಡಬೇಕು. ಎಲ್ಲೆಡೆ ಸಾವಿರಾರು ಕೋಟಿ ರೂಪಾಯಿ ಘೋಷಣೆ ಮಾಡುವ ಸರ್ಕಾರ, ಗದಗದ ಜನರ ಕುಡಿಯುವ ನೀರಿಗಾಗಿ 50ರಿಂದ 100 ಕೋಟಿ ರೂಪಾಯಿ ನೀಡಿದ್ರೆ ಶಾಶ್ವತ ಪರಿಹಾರ ಕಲ್ಪಿಸಬಹುದು ಎಂದ್ರು. ಇನ್ನು ಈ ವಿಚಾರದಲ್ಲಿ ಸಿ.ಸಿ. ಪಾಟೀಲ್ ಕೂಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಭವ ಬಳಸಿಕೊಂಡು ಅವಳಿ ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಹಿಂದೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಿದ್ರೆ, ಅವಳಿ ನಗರಕ್ಕೆ ಸಮರ್ಪಕ ನೀರು ಪೂರೈಕೆ ಸಾಧ್ಯ ಎಂದ್ರು. ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆ ಮಾಡಿಸಿ, ಶಾಶ್ವತ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ ಸಿ ಪಾಟೀಲ್ ಒತ್ತಾಯಿಸಿದ್ರು.

ಒಟ್ಟಿನಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನ ಸಮಸ್ಯೆ ಈಗ ರಾಜಕೀಯ ಹೋರಾಟಕ್ಕೂ ಕಾರಣವಾಗಿದೆ. ಒಂದೆಡೆ 20–25 ದಿನಕ್ಕೊಮ್ಮೆ ನೀರು ಬರುತ್ತಿದೆ ಅನ್ನೋ ಜನರ ಆಕ್ರೋಶ. ಮತ್ತೊಂದೆಡೆ 24/7 ನೀರು ಪೂರೈಕೆಗೆ ಶಾಶ್ವತ ಪರಿಹಾರ ಬೇಕು ಅನ್ನೋ ಬೇಡಿಕೆ. ನಗರಸಭೆ ಮುತ್ತಿಗೆ ಯತ್ನದವರೆಗೂ ಪ್ರತಿಭಟನೆ ತೀವ್ರಗೊಂಡಿದೆ. ಈಗ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಹೀಗಾಗಿ ಗದಗದ ಜನರ ದಾಹ ತಣಿಸಲು ಸರ್ಕಾರ ಯಾವಾಗ ಶಾಶ್ವತ ಪರಿಹಾರದ ಹೆಜ್ಜೆ ಇಡುತ್ತೆ ಅನ್ನೋದು ಸದ್ಯ ಗದಗನ ಜನರ ಮುಂದಿರುವ ಪ್ರಶ್ನೆ..?

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES