SOCIAL MEDIA

Newsletter

PARTNER SITES
Select Language Select State

ಮಂಡ್ಯದಲ್ಲಿ ತಪ್ಪಿದ ಭೀಕರ ದುರಂತ: ವಿಸಿ ನಾಲೆಗೆ ಉರುಳಿದ ಗೂಡ್ಸ್ ಆಟೋ; 24 ಗಾರ್ಮೆಂಟ್ಸ್ ಕಾರ್ಮಿಕರಿಗೆ ಗಾಯ!

ಗೆಜ್ಜಲಗೆರೆ ಗಾರ್ಮೆಂಟ್ಸ್‌ನಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ನೌಕರರನ್ನು ಈ ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು. ಸರಕು ಸಾಗಣೆ ವಾಹನದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕನಿಷ್ಠ ಸುರಕ್ಷತೆಯೂ ಇಲ್ಲದೆ ಮಹಿಳೆಯರನ್ನು ತುಂಬಲಾಗಿತ್ತು

Reported By Manjunath Naragund Written By Manjunath Naragund
Published: Sep 22, 2026, 09:01 AM IST | Updated: Sep 22, 2026, 09:14 AM IST
Image Credit: Mandya
Join

ಮಂಡ್ಯ: ಸಣ್ಣ ಗೂಡ್ಸ್ ಆಟೋದಲ್ಲಿ ಕುರಿಗಳನ್ನು ತುಂಬಿದಂತೆ ಬರೋಬ್ಬರಿ 24 ಜನ ಗಾರ್ಮೆಂಟ್ಸ್ ಮಹಿಳಾ ನೌಕರರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ವಿ.ಸಿ (ವಿಶ್ವೇಶ್ವರಯ್ಯ) ನಾಲೆಗೆ ಉರುಳಿಬಿದ್ದ ಭೀಕರ ಅಪಘಾತ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಸಮೀಪ ನಿನ್ನೆ ಸಂಜೆ ನಡೆದಿದೆ. ಅದೃಷ್ಟವಶಾತ್ ನಾಲೆಯಲ್ಲಿ ನೀರಿಲ್ಲದಿದ್ದ ಕಾರಣ ಪವಾಡಸದೃಶವಾಗಿ ಜಲಸಮಾಧಿಯಾಗುವ ದೊಡ್ಡ ಅನಾಹುತ ತಪ್ಪಿದೆ. ಆದರೆ, ವಾಹನದಲ್ಲಿದ್ದ ಎಲ್ಲ 24 ಮಹಿಳೆಯರು ಗಾಯಗೊಂಡಿದ್ದು, ಒಂಬತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ.

ಗೆಜ್ಜಲಗೆರೆ ಗಾರ್ಮೆಂಟ್ಸ್‌ನಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ನೌಕರರನ್ನು ಈ ಆಟೋದಲ್ಲಿ ಕರೆದೊಯ್ಯಲಾಗುತ್ತಿತ್ತು. ಸರಕು ಸಾಗಣೆ ವಾಹನದಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಕನಿಷ್ಠ ಸುರಕ್ಷತೆಯೂ ಇಲ್ಲದೆ ಮಹಿಳೆಯರನ್ನು ತುಂಬಲಾಗಿತ್ತು. ಚಾಲಕನ ಅತಿಯಾದ ವೇಗ ಹಾಗೂ ಬೇಜವಾಬ್ದಾರಿತನದಿಂದಾಗಿ ಹನಕೆರೆ ಬಳಿ ವಾಹನವು ದಿಢೀರ್ ಹತೋಟಿ ತಪ್ಪಿ ರಸ್ತೆ ಪಕ್ಕದ ಖಾಲಿ ನಾಲೆಗೆ ಪಲ್ಟಿಯಾಗಿದೆ.

ಪಲ್ಟಿಯಾದ ರಭಸಕ್ಕೆ ಆಟೋದಲ್ಲಿದ್ದ ಮಹಿಳೆಯರು ಒಬ್ಬರ ಮೇಲೊಬ್ಬರು ಬಿದ್ದು, ಹಲವರ ಕೈ-ಕಾಲುಗಳು ಮುರಿದಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ಗಾಯಾಳುಗಳನ್ನು ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ. ತಕ್ಷಣವೇ ಎಲ್ಲರನ್ನೂ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನೊಂದ ಮಹಿಳೆಯರಿಗೆ ಸಾಂತ್ವನ ಹೇಳಿದ ಶಾಸಕರು, ಉಚಿತ ಹಾಗೂ ಸೂಕ್ತ ಚಿಕಿತ್ಸೆ ಖಾತರಿಪಡಿಸುವಂತೆ ವೈದ್ಯರಿಗೆ ಸೂಚಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES