Karnataka PUC Exams 2027: ಕರ್ನಾಟಕದ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ 2027ರಿಂದ ಮಹತ್ವದ ಬದಲಾವಣೆಯಾಗಲಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಪದ್ಧತಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದ್ದು, ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೂ ಒಂದೇ ಪ್ರಶ್ನೆಪತ್ರಿಕೆಯನ್ನ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಪ್ರಥಮ ಪಿಯುಸಿ ಹಂತದಿಂದಲೇ ರಾಜ್ಯದ ಎಲ್ಲಾ ಕಾಲೇಜುಗಳ ಶಿಕ್ಷಣದ ಗುಣಮಟ್ಟವನ್ನ ಒಂದೇ ಮಾನದಂಡದಲ್ಲಿ ಪರಿಶೀಲಿಸಲು ಶಿಕ್ಷಣ ಇಲಾಖೆಗೆ ಅವಕಾಶ ದೊರೆಯಲಿದೆ.
ಇದುವರೆಗೆ ಕಾಲೇಜುಗಳ ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸುವ ವ್ಯವಸ್ಥೆ ಇದ್ದರೆ, ಹೊಸ ನಿಯಮದ ಪ್ರಕಾರ ರಾಜ್ಯಮಟ್ಟದಲ್ಲೇ ಸಾಮಾನ್ಯ ಪ್ರಶ್ನೆಪತ್ರಿಕೆ ರೂಪಿಸಲಾಗುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಈ ಪ್ರಶ್ನೆಪತ್ರಿಕೆಗಳನ್ನ ಸಿದ್ಧಪಡಿಸಲಿದೆ. 2027ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ರಾಜ್ಯದ ಎಲ್ಲಾ ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಒಂದೇ ಮಾದರಿಯ ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾಗುತ್ತದೆ.
ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧತೆ
ಹೊಸ ಪರೀಕ್ಷಾ ವ್ಯವಸ್ಥೆಯಡಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸಾಮಾನ್ಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ವಹಿಸಲಾಗಿದೆ. ಮಂಡಳಿಯು ಪ್ರಶ್ನೆಪತ್ರಿಕೆಗಳನ್ನ ಸಿದ್ಧಪಡಿಸಿದ ಬಳಿಕ ಅವುಗಳನ್ನ ಡಿಜಿಟಲ್ ರೂಪದಲ್ಲಿ ಸಂಬಂಧಪಟ್ಟ ಕಾಲೇಜುಗಳಿಗೆ ರವಾನಿಸಲಾಗುತ್ತದೆ.
ಪರೀಕ್ಷೆಗಳನ್ನ ಮಾತ್ರ ಆಯಾ ಕಾಲೇಜುಗಳಲ್ಲಿಯೇ ನಡೆಸಲಾಗುತ್ತದೆ. ಅಂದರೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆ ರಾಜ್ಯಮಟ್ಟದಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲೇ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಈ ವ್ಯವಸ್ಥೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿರುವ ಕಾಲೇಜುಗಳ ವಿದ್ಯಾರ್ಥಿಗಳು ಒಂದೇ ಪ್ರಶ್ನೆಪತ್ರಿಕೆಯನ್ನ ಎದುರಿಸಲಿದ್ದಾರೆ.
ಪರೀಕ್ಷೆ ನಡೆಸುವ ಜವಾಬ್ದಾರಿ ಯಾರಿಗೆ?
ರಾಜ್ಯಮಟ್ಟದ ಪ್ರಶ್ನೆಪತ್ರಿಕೆ ವ್ಯವಸ್ಥೆ ಜಾರಿಗೆ ಬಂದರೂ, ಪರೀಕ್ಷೆಗಳನ್ನ ನಡೆಸುವ ಸಂಪೂರ್ಣ ಜವಾಬ್ದಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯದ್ದಾಗಿರುವುದಿಲ್ಲ. ಶಾಲಾ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿಯೇ ಪರೀಕ್ಷಾ ಪ್ರಕ್ರಿಯೆ ನಡೆಯಲಿದೆ. ಪ್ರಶ್ನೆಪತ್ರಿಕೆಗಳನ್ನ ಮಂಡಳಿ ಸಿದ್ಧಪಡಿಸಿ ಡಿಜಿಟಲ್ ರೂಪದಲ್ಲಿ ಕಾಲೇಜುಗಳಿಗೆ ಕಳುಹಿಸಲಿದೆ. ಆದರೆ ಪರೀಕ್ಷೆಯ ಆಯೋಜನೆ ಮತ್ತು ನಿರ್ವಹಣೆಯ ಜವಾಬ್ದಾರಿ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರಲಿದೆ. ಹೀಗಾಗಿ ಪ್ರಶ್ನೆಪತ್ರಿಕೆ ಸಿದ್ಧತೆ ಮತ್ತು ಪರೀಕ್ಷೆ ನಡೆಸುವ ಕಾರ್ಯಗಳನ್ನ ಪ್ರತ್ಯೇಕವಾಗಿ ನಿರ್ವಹಿಸುವ ವ್ಯವಸ್ಥೆ ರೂಪುಗೊಳ್ಳಲಿದೆ.
ಪ್ರಾಯೋಗಿಕ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ
ಹೊಸ ನಿಯಮ ಜಾರಿಯಾದರೂ ಪ್ರಾಯೋಗಿಕ ಪರೀಕ್ಷೆಗಳ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಿಂದಿನ ಪದ್ಧತಿಯಂತೆಯೇ ಜಿಲ್ಲಾಮಟ್ಟದಲ್ಲಿ ಸಿದ್ಧಪಡಿಸುವ ವೇಳಾಪಟ್ಟಿಯ ಪ್ರಕಾರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂದರೆ ಲಿಖಿತ ಪರೀಕ್ಷೆಗಳಿಗೆ ರಾಜ್ಯಮಟ್ಟದ ಸಾಮಾನ್ಯ ಪ್ರಶ್ನೆಪತ್ರಿಕೆ ಅನ್ವಯವಾಗಲಿದ್ದು, ಪ್ರಾಯೋಗಿಕ ಪರೀಕ್ಷೆಗಳು ಮಾತ್ರ ಹಿಂದಿನಂತೆಯೇ ಜಿಲ್ಲಾಮಟ್ಟದ ವೇಳಾಪಟ್ಟಿಯನ್ನ ಅನುಸರಿಸಲಿವೆ. ಈ ಮೂಲಕ ಪ್ರಾಯೋಗಿಕ ಪರೀಕ್ಷೆಗಳ ಪ್ರಸ್ತುತ ವ್ಯವಸ್ಥೆಯನ್ನ ಮುಂದುವರಿಸಲಾಗುತ್ತದೆ.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲೇಜುಗಳಲ್ಲೇ
ರಾಜ್ಯದಾದ್ಯಂತ ಒಂದೇ ಪ್ರಶ್ನೆಪತ್ರಿಕೆ ಜಾರಿಯಾಗುತ್ತಿದ್ದರೂ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನ ಕಾಲೇಜು ಹಂತದಲ್ಲಿಯೇ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಅವರ ಉತ್ತರ ಪತ್ರಿಕೆಗಳನ್ನ ಆಯಾ ಕಾಲೇಜುಗಳಲ್ಲೇ ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಬಳಿಕ ಫಲಿತಾಂಶ ಪ್ರಕಟಿಸುವ ಮೊದಲು ಮತ್ತೊಂದು ಹಂತದ ಪರಿಶೀಲನೆ ನಡೆಯಲಿದೆ.
ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಮೌಲ್ಯಮಾಪನ ಪ್ರಕ್ರಿಯೆ ಮತ್ತು ಫಲಿತಾಂಶಗಳನ್ನು ಪರಿಶೀಲಿಸಲಿದ್ದಾರೆ. ಜಿಲ್ಲಾ ಉಪನಿರ್ದೇಶಕರಿಂದ ಅನುಮೋದನೆ ದೊರೆತ ನಂತರವೇ ಫಲಿತಾಂಶ ಪ್ರಕಟಿಸಲಾಗುತ್ತದೆ. ಹೀಗಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ರಾಜ್ಯಮಟ್ಟದಲ್ಲಿ ನಡೆದರೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾಲೇಜುಗಳಲ್ಲಿ ನಡೆಯಲಿದೆ. ಫಲಿತಾಂಶ ಪ್ರಕಟಿಸುವ ಮೊದಲು ಜಿಲ್ಲಾ ಉಪನಿರ್ದೇಶಕರ ಪರಿಶೀಲನೆ ಮತ್ತು ಅನುಮೋದನೆ ಕಡ್ಡಾಯವಾಗಿರಲಿದೆ.
ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಿಗೂ ಅನ್ವಯ
2027ರಿಂದ ಜಾರಿಗೆ ಬರಲಿರುವ ಈ ಹೊಸ ಪರೀಕ್ಷಾ ವ್ಯವಸ್ಥೆಯು ಕೆಲವೇ ಕಾಲೇಜುಗಳಿಗೆ ಸೀಮಿತವಾಗಿರುವುದಿಲ್ಲ. ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳನ್ನ ಇದರ ವ್ಯಾಪ್ತಿಗೆ ತರಲಾಗುತ್ತದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಅನುದಾನಿತ ಕಾಲೇಜುಗಳು ಮತ್ತು ಅನುದಾನರಹಿತ ಖಾಸಗಿ ಕಾಲೇಜುಗಳು ಈ ವ್ಯವಸ್ಥೆಯನ್ನ ಪಾಲಿಸಬೇಕಾಗುತ್ತದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಇತರ ಇಲಾಖೆಗಳ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಪದವಿ ಪೂರ್ವ ಕಾಲೇಜುಗಳಿಗೂ ಹೊಸ ನಿಯಮ ಅನ್ವಯವಾಗಲಿದೆ.
ಪ್ರಥಮ ಪಿಯುಸಿಯಿಂದಲೇ ಶಿಕ್ಷಣದ ಗುಣಮಟ್ಟದ ಮೇಲೆ ನಿಗಾ
ರಾಜ್ಯದ ಎಲ್ಲಾ ಕಾಲೇಜುಗಳಿಗೂ ಒಂದೇ ಪ್ರಶ್ನೆಪತ್ರಿಕೆ ಜಾರಿಗೆ ತರುವುದರ ಪ್ರಮುಖ ಉದ್ದೇಶ ಪ್ರಥಮ ಪಿಯುಸಿ ಹಂತದಿಂದಲೇ ಶಿಕ್ಷಣದ ಗುಣಮಟ್ಟವನ್ನ ಪರಿಶೀಲಿಸುವುದಾಗಿದೆ. ಒಂದೇ ಪ್ರಶ್ನೆಪತ್ರಿಕೆಯ ಮೂಲಕ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಶೈಕ್ಷಣಿಕ ಸಿದ್ಧತೆಯನ್ನ ಒಂದೇ ಮಾದರಿಯಲ್ಲಿ ಮೌಲ್ಯಮಾಪನ ಮಾಡಲು ಅವಕಾಶ ದೊರೆಯಲಿದೆ.
ಒಟ್ನಲ್ಲಿ 2027ರಿಂದ ಕರ್ನಾಟಕದ ಪ್ರಥಮ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಜಾರಿಗೆ ಬರಲಿದೆ. ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧತೆ, ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಮಾಪನ, ಜಿಲ್ಲಾ ಉಪನಿರ್ದೇಶಕರ ಪರಿಶೀಲನೆಯ ನಂತರ ಫಲಿತಾಂಶ ಪ್ರಕಟಿಸುವ ವ್ಯವಸ್ಥೆ ರೂಪುಗೊಳ್ಳಲಿದೆ. ಈ ನಿಯಮವು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿದಂತೆ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಿಗೆ ಅನ್ವಯವಾಗಲಿದೆ.