ಬಳ್ಳಾರಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ನಕಲಿ ದಾಖಲೆ ಸೃಷ್ಟಿಸಿ ₹5 ಕೋಟಿ ಮೌಲ್ಯದ ಜಮೀನು ಕಬಳಿಕೆ
ಬಳ್ಳಾರಿ ತಾಲೂಕಿನ ಕೊಳಗಲ್ ಮೂಲದ ನಾರಾಯಣಪ್ಪ ಹಾಗೂ ಅವರ ಮಗಳು ಸ್ವಪ್ನ ಅವರಿಗೆ ಸೇರಿದ 6.87 ಎಕರೆ ಜಮೀನು ಬಳ್ಳಾರಿಯಲ್ಲಿದೆ. ಇದರ ಅಂದಾಜು ಮೌಲ್ಯ ಸುಮಾರು 5 ಕೋಟಿ ರೂಪಾಯಿ.
ಬಳ್ಳಾರಿ: ಬಳ್ಳಾರಿಯ ಉಪನೊಂದಣಿ (ಸಬ್ ರಿಜಿಸ್ಟ್ರಾರ್) ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಮೂಲ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಮಾರಾಟ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣ ತಿಳಿಯುತ್ತಿದ್ದಂತೆಯೇ ಕೋಪೋದ್ರಿಕ್ತ ಸಂತ್ರಸ್ತರು ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷರು ಕಚೇರಿಗೆ ಮುತ್ತಿಗೆ ಹಾಕಿ, ಸಬ್ ರಿಜಿಸ್ಟ್ರಾರ್ ದೇವಣ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳ್ಳಾರಿ ತಾಲೂಕಿನ ಕೊಳಗಲ್ ಮೂಲದ ನಾರಾಯಣಪ್ಪ ಹಾಗೂ ಅವರ ಮಗಳು ಸ್ವಪ್ನ ಅವರಿಗೆ ಸೇರಿದ 6.87 ಎಕರೆ ಜಮೀನು ಬಳ್ಳಾರಿಯಲ್ಲಿದೆ. ಇದರ ಅಂದಾಜು ಮೌಲ್ಯ ಸುಮಾರು 5 ಕೋಟಿ ರೂಪಾಯಿ. ನಾರಾಯಣಪ್ಪ ಹಾಗೂ ಅವರ ಮಗಳು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ ಭೂಗಳ್ಳರು, ಕಚೇರಿಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಮೂಲ ಮಾಲೀಕಿ ಸ್ವಪ್ನ ಅವರ ಹೆಸರನ್ನೇ ಹೋಲುವ ಮತ್ತೊಬ್ಬ ಮಹಿಳೆಯನ್ನು ನಿಲ್ಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಕೇವಲ ಆರು ತಿಂಗಳ ಅವಧಿಯಲ್ಲಿ ಈ ಕೋಟ್ಯಂತರ ಮೌಲ್ಯದ ಜಮೀನನ್ನು ಒಬ್ಬರಿಂದ ಒಬ್ಬರಿಗೆ ಎಂಬಂತೆ ಇಬ್ಬರಿಗೆ ಮಾರಾಟ ಮಾಡಿ ಹಣ ಮಾಡಿಕೊಂಡಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಈ ವಂಚನೆಯ ವಿಷಯ ಬೆಂಗಳೂರಿನಲ್ಲಿದ್ದ ಮೂಲ ಮಾಲೀಕರಿಗೆ ತಿಳಿದುಬಂದಿದೆ. ತಕ್ಷಣವೇ ಬಳ್ಳಾರಿಯ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಪರಿಶೀಲಿಸಿದಾಗ, ಅಧಿಕಾರಿಗಳ ಶಾಮೀಲಾತಿಯಿಂದಲೇ ಈ ಬ್ರಹ್ಮಾಂಡ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ.
ಮೂಲ ಮಾಲೀಕ ನಾರಾಯಣಪ್ಪ ಹಾಗೂ ಸಂತ್ರಸ್ತ ನಾರಾಯಣಸ್ವಾಮಿ ಅವರು ಪ್ರಶ್ನೆ ಮಾಡುತ್ತಿದ್ದಂತೆಯೇ, ತಪ್ಪಿನ ಅರಿವಾದ ಸಬ್ ರಿಜಿಸ್ಟ್ರಾರ್ ದೇವಣ್ಣ "ವಿಷಯವನ್ನು ಸರಿಪಡಿಸಿಕೊಡುತ್ತೇವೆ" ಎಂದು ಹೇಳಿ ಪ್ರಕರಣವನ್ನು ಮರೆಮಾಚಲು ಮ್ಯಾನೇಜ್ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಂತ್ರಸ್ತರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆಂಜನೇಯಲು ಅವರೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಚೇರಿಯಲ್ಲಿ ಸಬ್ ರಿಜಿಸ್ಟ್ರಾರ್ ದೇವಣ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಂಜನೇಯಲು ಹಾಗೂ ಸಂತ್ರಸ್ತರು, "ಬಳ್ಳಾರಿ ನೊಂದಣಿ ಕಚೇರಿಯಲ್ಲಿ ಇದು ಒಬ್ಬರ ಸಮಸ್ಯೆಯಲ್ಲ. ಪ್ರತಿ ತಿಂಗಳೂ ಇಂತಹ ನಾಲ್ಕೈದು ಅಕ್ರಮ ಪ್ರಕರಣಗಳು ನಡೆಯುತ್ತಿವೆ. ಸಾಲು ಸಾಲು ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರ ಆಸ್ತಿಯನ್ನು ಕಬಳಿಸಲಾಗುತ್ತಿದೆ" ಎಂದು ಗಂಭೀರ ಆರೋಪ ಮಾಡಿದರು.
ಈ ಬ್ರಹ್ಮಾಂಡ ವಂಚನೆಯ ಜಾಲದ ಹಿಂದೆ ದೊಡ್ಡ ಭೂಮಾಫಿಯಾ ಹಾಗೂ ಕಚೇರಿ ಸಿಬ್ಬಂದಿ ಹಸ್ತಕ್ಷೇಪವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಮಗ್ರ ದೂರು ನೀಡಿ ಕಾನೂನು ಹೋರಾಟ ನಡೆಸಲು ಸಂತ್ರಸ್ತರು ಹಾಗೂ ಸ್ಥಳೀಯ ಮುಖಂಡರು ನಿರ್ಧರಿಸಿದ್ದಾರೆ.