ಅಕ್ರಮಗಳ ಆರೋಪದ ನಡುವೆ ಯಶಸ್ವಿಯಾಗಿ ನಡೆದ KAS ಪೂರ್ವಭಾವಿ ಪರೀಕ್ಷೆ.!
ಕರ್ನಾಟಕ ಲೋಕಸೇವಾ ಆಯೋಗವು (KPSC) ಇಂದು ರಾಜ್ಯಾದ್ಯಂತ ಕಟ್ಟುನಿಟ್ಟಿನ ಭದ್ರತೆ ಹಾಗೂ ನೂತನ ನಿಯಮಗಳೊಂದಿಗೆ ಕೆಎಎಸ್ (KAS) ಗೆಜೆಟೆಡ್ ಪ್ರೊಬೆಷನರಿ ಪ್ರಿಲಿಮ್ಸ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ನೀಡದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಅಭ್ಯರ್ಥಿಗಳಿಗೆ ಕಠಿಣ ವಸ್ತ್ರಸಂಹಿತೆ ಮತ್ತು ಹೊಸ ಮಾದರಿಯ ಒಎಂಆರ್ (OMR) ಶೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು : ಅಕ್ರಮಗಳ ಆರೋಪ ಹೊತ್ತ ಕೆಪಿಎಸ್‌ಸಿ ಇಂದು ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯನ್ನ ನಡೆಸಿದೆ.. ಈ ಹಿಂದೆ ಆದ ಎಡವಟ್ಟು ಮತ್ತೆ ಆಗಬಾರದು ಅಂತ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದೆ.. ಹಾಗಾದ್ರೆ ಇವತ್ತಿನ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಏನೆಲ್ಲಾ ಆಯ್ತು ಅನ್ನೋದರ ವರದಿ ಇಲ್ಲಿದೆ..
ಕೆಪಿಎಸ್‌ಸಿ ಯಾವುದೇ ಪರೀಕ್ಷೆ ಮಾಡಿದ್ರೂ ಸರಿಯಾಗಲ್ಲ.. ಸಾಕಷ್ಟು ಅಕ್ರಮಗಳಾಗುತ್ತೆ ಅಂತ ಆರೋಪ ಹೊತ್ತುಕೊಂಡಿದೆ.. ಮತ್ತೊಂದು ಕಡೆ ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಆಗಿದೆ ಅನ್ನೋ ವಿಚಾರ ಕೂಡ ತೀವ್ರವಾಗಿ ತನಿಖೆ ಆಗ್ತಾ ಇದೆ.. ಈ ನಡುವೆ ಇಂದು ಕೆಪಿಎಸ್‌ಸಿ ಕೆಎಎಸ್ ಗೆಜೆಟೆಡ್ ಪ್ರೊಬೆಷನರಿ ಪ್ರಿಲಿಮ್ಸ್ ಪರೀಕ್ಷೆಯನ್ನ ರಾಜ್ಯದಾದ್ಯಂತ ನಡೆಸಿದೆ.. 319 ಹುದ್ದೆಗೆ 1 ಲಕ್ಷದ 47 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದು, ರಾಜ್ಯದ 15 ಜಿಲ್ಲೆಗಳ 345 ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಯ್ತು..
ಪರೀಕ್ಷಾ ಕೇಂದ್ರಗಳಲ್ಲಿ ಬಹಳಷ್ಟು ಭದ್ರತೆ ವಹಿಸಲಾಗಿತ್ತು.. ಅಡಿ ಅಡಿಗೂ ಪೊಲೀಸರು ಕಣ್ಗಾವಲನ್ನ ಇರಿಸಿದ್ರು.. ಪರೀಕ್ಷಾ ಕೊಠಡಿಗಳ ಹೊರ ಹಾಗೂ ಒಳ ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು.. ಪರೀಕ್ಷೆ ಬರೆಯುವ ಅಭ್ಯರ್ಥಿ ಯಾವುದೇ ರೀತಿ ಎಲೆಕ್ಟ್ರಾನಿಕ್ ಗೆಜೆಟ್‌ಗಳನ್ನ ಕೊಂಡೊಯ್ಯುವಂತಿರಲಿಲ್ಲ.. ಜೊತೆಗೆ ವಸ್ತ್ರಸಂಹಿತೆ ಕೂಡ ಜಾರಿ ಮಾಡಲಾಗಿತ್ತು.. ಹೀಗಾಗಿ ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲೇ ಅಭ್ಯರ್ಥಿಗಳನ್ನ ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯ್ತು.. ಅಭ್ಯರ್ಥಿಗಳು ಧರಿಸಿದ ಅಂಗಿ, ಪ್ಯಾಂಟ್, ಕಿವಿ, ಬಾಯಿ ಸೇರಿದಂತೆ ಸಂಪೂರ್ಣವಾಗಿ ತಪಾಸಣೆ ನಡೆಸಲಾಯ್ತು..
ಪ್ರಮುಖವಾಗಿ ಅನೇಕರು ತುಂಬುತೋಳಿನ ಶರ್ಟ್ ಧರಿಸಿ ಬಂದಿದ್ರು.. ಬೇರೆ ವಿಧಿ ಇಲ್ಲದೇ ಅಭ್ಯರ್ಥಿಗಳು ತಮ್ಮ ಫುಲ್ ಸ್ಲೀವ್ ಅನ್ನ ಕಟ್ ಮಾಡಿ ಒಳಗೆ ತೆರಳಿದ್ರು.. ಅದರಲ್ಲೂ ಒಬ್ಬ ವಿಶೇಷ ಚೇತನ ಅಭ್ಯರ್ಥಿಯೂ ತನ್ನ ಶರ್ಟ್ ಅನ್ನ ಕತ್ತರಿಸಲು ಇಷ್ಟಪಡದೇ ಕೇವಲ ಬನಿಯನ್ ಧರಿಸಿ ಪರೀಕ್ಷೆ ಬರೆದ್ರು.. ಕಾರಣ ಅಂಗಿ ತೆಗೆದುಕೊಳ್ಳಲು ಸಹ ಕೆಲವರ ಬಳಿ ಹಣ ಇರಲ್ಲ.. ಅಂತಹ ಕಡು ಬಡತನ ಕುಟುಂಬದಲ್ಲಿ ಹುಟ್ಟಿದ ಅದೆಷ್ಟೋ ಅಭ್ಯರ್ಥಿಗಳು ಇಂದು ಪರೀಕ್ಷೆಗೆ ಬಂದಿದ್ರು.. ಕಷ್ಟಪಟ್ಟು ಪರೀಕ್ಷೆ ಬರೆದಿದ್ದೇವೆ, ಯಾವುದೇ ರೀತಿ ಅಕ್ರಮ ಆಗಬಾರದು, ನಮ್ಮಂತ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಸಿಗಬೇಕು ಅಂದ್ರು..
ಈ ಬಾರಿ ಪರೀಕ್ಷೆಯ ಒಎಂಆರ್ ಶೀಟ್‌ನಲ್ಲೂ ಕೂಡ ಬದಲಾವಣೆ ತರಲಾಗಿತ್ತು.. ಸಾಮಾನ್ಯವಾಗಿ ಒಎಂಆರ್ ಶೀಟ್‌ನಲ್ಲಿ ನಾಲ್ಕು ಕಾಲಂಗಳಲ್ಲಿ ಉತ್ತರಿಸಲು ಅವಕಾಶ ಇರ್ತಾ ಇತ್ತು.. ಆದ್ರೆ ಈ ಬಾರಿ ಹೆಚ್ಚುವರಿಯಾಗಿ ಐದನೇ ಕಾಲಂ ಕೂಡ ಸೇರಿಸಲಾಗಿದ್ದು, ಇದರಲ್ಲಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರಿಸಬೇಕು.. ಅಭ್ಯರ್ಥಿಗಳು ಯಾವುದೇ ರೀತಿ ಕಾಲಂ ಖಾಲಿ ಬಿಡುವಂತೆ ಇರಲಿಲ್ಲ.. ಕಾರಣ ಒಂದು ವೇಳೆ ಉತ್ತರ ಬರೆಯದೇ ಖಾಲಿ ಬಿಟ್ಟರೆ, ಅಕ್ರಮದ ಸಂದರ್ಭದಲ್ಲಿ ಉತ್ತರ ತುಂಬುವ ಸಾಧ್ಯತೆ ಹೆಚ್ಚಿರುತ್ತದೆ.. ಹೀಗಾಗಿ ಕಡ್ಡಾಯವಾಗಿ ಎಲ್ಲಾ ಪ್ರಶ್ನೆಗೂ ಉತ್ತರ ಬರೆಯಲೇಬೇಕಿತ್ತು.. ಇನ್ನೂ ಈ ಬಾರಿ ಮೂರು ಒಎಂಆರ್ ನೀಡಲಾಗಿದೆ.. ಒಂದು ಅಭ್ಯರ್ಥಿಗೆ, ಮತ್ತೊಂದು ಕೆಪಿಎಸ್‌ಸಿಗೆ ಹಾಗೂ ಇನ್ನೊಂದು ಜಿಲ್ಲಾಧಿಕಾರಿಗಳ ಸ್ಟ್ರಾಂಗ್ ಕೊಠಡಿಯಲ್ಲಿ ಇರಲಿದೆ.. ಹೀಗಾಗಿ ಅಕ್ರಮವಾಗಿದೆ ಎಂದು ತಿಳಿದ್ರೆ ಅದನ್ನ ಕ್ರಾಸ್ ಚೆಕ್ ಮಾಡಲು ಸಹಕಾರಿಯಾಗಲಿ ಅನ್ನೋ ಕಾರಣದಿಂದ ಮೂರು ಒಎಂಆರ್ ಶೀಟ್ ನೀಡಲಾಗಿದೆ..
ಒಟ್ನಲ್ಲಿ.. ಅಕ್ರಮದ ಆರೋಪ ಕೇಳಿ ಬಂದ ಬಳಿಕ ಕೆಪಿಎಸ್‌ಸಿ ಇಂದು ಮೊದಲ ಪರೀಕ್ಷೆ ನಡೆಸಿದೆ.. ಆದ್ರೆ ಕಾದು ನೋಡಬೇಕಿದೆ, ಇಂದು ನಡೆದ ಪರೀಕ್ಷೆಯಲ್ಲಿ ನಿಜಕ್ಕೂ ಯಾವುದಾದರೂ ಅಕ್ರಮ ನಡೆದಿದ್ಯೋ ಇಲ್ವೋ ಅನ್ನೋದು..