SOCIAL MEDIA

Newsletter

PARTNER SITES
Select Language Select State

ನಾಲ್ಕು ವರ್ಷಗಳ ಬಳಿಕ ಹಳ್ಳಿ ರಾಜಕಾರಣಕ್ಕೆ ಮತ್ತೆ ಕಳೆ! 2027ರ ಜನವರಿಯಲ್ಲಿ ಜಿಪಂ, ತಾಪಂ ಚುನಾವಣೆ?

ನಾಲ್ಕು ವರ್ಷಗಳ ಬಳಿಕ ಕರ್ನಾಟಕದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಚುರುಕುಗೊಂಡಿದೆ. 2027ರ ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರಗಳು ಹಾಗೂ 234 ತಾಲೂಕು ಪಂಚಾಯಿತಿಗಳ 3,580 ಸ್ಥಾನಗಳು ಸೇರಿದಂತೆ ಒಟ್ಟು 4,681 ಸ್ಥಾನಗಳಿಗೆ ಮೀಸಲಾತಿ ಅಂತಿಮಗೊಳಿಸಲಾಗಿದೆ. ಈ ಬಾರಿ ಇವಿಎಂಗಳ ಬದಲಿಗೆ ಮತಪತ್ರ ಬಳಸಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ.

Written By Puttaraj K Alur
Published: Nov 25, 2026, 14:58 IST | Updated: Nov 25, 2026, 15:17 IST
Image Credit: Karnataka ZP Elections
Join

Karnataka ZP & TP Elections: ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಾಗಿ ಕಾಯುತ್ತಿದ್ದ ಗ್ರಾಮೀಣ ಭಾಗದ ರಾಜಕೀಯ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಸುದ್ದಿ ಸಿಕ್ಕಿದೆ. 2027ರ ಜನವರಿ ತಿಂಗಳಲ್ಲೇ ಜಿಲ್ಲಾ ಪಂಚಾಯಿತಿ (Zilla Panchayat) ಮತ್ತು ತಾಲೂಕು ಪಂಚಾಯಿತಿ (Taluk Panchayat) ಚುನಾವಣೆಗಳು ನಡೆಯಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇದರೊಂದಿಗೆ ಬಹುದಿನಗಳಿಂದ ಮುಂದೂಡಲ್ಪಟ್ಟಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗೆ ಮತ್ತೆ ವೇಗ ಸಿಕ್ಕಿದೆ.

ಚುನಾವಣೆಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನವೆಂಬರ್ 24ರಂದು ಅಂತಿಮ ಮೀಸಲಾತಿ ಪಟ್ಟಿಯ ಗೆಜೆಟ್ ಅಧಿಸೂಚನೆಯನ್ನ ಪ್ರಕಟಿಸಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ ಕ್ಷೇತ್ರದಲ್ಲಿ ಯಾವ ವರ್ಗಕ್ಕೆ ಮೀಸಲಾತಿ ಸಿಕ್ಕಿದೆ ಎಂಬ ಕುತೂಹಲ ರಾಜಕೀಯ ಆಕಾಂಕ್ಷಿಗಳಲ್ಲಿ ಹೆಚ್ಚಾಗಿದೆ. ಹಲವು ಕ್ಷೇತ್ರಗಳಲ್ಲಿ ಈಗಿನಿಂದಲೇ ಚುನಾವಣಾ ಲೆಕ್ಕಾಚಾರ ಆರಂಭವಾಗಿದೆ.

ಒಟ್ಟು 4,681 ಸ್ಥಾನಗಳಿಗೆ ಚುನಾವಣೆ

ಸರ್ಕಾರ ಪ್ರಕಟಿಸಿರುವ ಅಂತಿಮ ಮೀಸಲಾತಿ ಪಟ್ಟಿಯ ಪ್ರಕಾರ, ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ ಒಟ್ಟು 1,101 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇದರ ಜೊತೆಗೆ 234 ತಾಲೂಕು ಪಂಚಾಯಿತಿಗಳ 3,580 ಸದಸ್ಯ ಸ್ಥಾನಗಳಿಗೂ ಮತದಾನ ನಡೆಯಬೇಕಿದೆ. ಹೀಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳನ್ನ ಸೇರಿಸಿ ಒಟ್ಟು 4,681 ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸ್ಪರ್ಧಿಸಲು ಅವಕಾಶ ದೊರೆಯಲಿದೆ. ಗ್ರಾಮೀಣ ರಾಜಕೀಯದಲ್ಲಿ ಮಹಿಳಾ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ಹೆಚ್ಚಾಗುವ ನಿರೀಕ್ಷೆಯೂ ಇದೆ.

ನಾಲ್ಕು ವರ್ಷಗಳಿಂದ ಮುಂದೂಡಿಕೆಯಾಗಿದ್ದ ಚುನಾವಣೆ

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಹಿಂದಿನ ಸದಸ್ಯರ ಅಧಿಕಾರಾವಧಿ 2022ರಲ್ಲೇ ಮುಕ್ತಾಯಗೊಂಡಿತ್ತು. ಆದರೆ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಸಂಬಂಧಿಸಿದ ಗೊಂದಲಗಳಿಂದ ಚುನಾವಣೆ ನಿರಂತರವಾಗಿ ಮುಂದೂಡಲ್ಪಡುತ್ತಿತ್ತು. ಇದರಿಂದ ಗ್ರಾಮೀಣ ಭಾಗದ ರಾಜಕೀಯ ಚಟುವಟಿಕೆಗಳಿಗೆ ವಿರಾಮ ಬಿದ್ದಿತ್ತು. ಕಳೆದ ತಿಂಗಳು ಸರ್ಕಾರ ಕರಡು ಮೀಸಲಾತಿ ಪಟ್ಟಿಯನ್ನ ಪ್ರಕಟಿಸಿತ್ತು. ಈ ಪಟ್ಟಿಗೆ ಸಾರ್ವಜನಿಕರಿಂದ 2,000ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಅವುಗಳನ್ನ ಪರಿಶೀಲಿಸಿದ ಬಳಿಕ ಇದೀಗ ಅಂತಿಮ ಮೀಸಲಾತಿ ಪಟ್ಟಿಯನ್ನ ಪ್ರಕಟಿಸಲಾಗಿದೆ. ಈ ಮೂಲಕ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಪ್ರಕ್ರಿಯೆಯೊಂದು ಪೂರ್ಣಗೊಂಡಿದೆ.

ಈ ಬಾರಿ ಇವಿಎಂ ಬದಲು ಮತಪತ್ರ ಬಳಕೆ

ಈ ಬಾರಿಯ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲೂ ಬದಲಾವಣೆ ಇರಲಿದೆ. ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಬದಲಿಗೆ ಮತಪತ್ರಗಳ ಮೂಲಕ ಮತದಾನ ನಡೆಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಮತಪತ್ರಗಳ ಬಳಕೆಗೆ ಅಗತ್ಯ ಸಿದ್ಧತೆಗಳನ್ನ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸುಮಾರು ₹151 ಕೋಟಿ ವೆಚ್ಚದಲ್ಲಿ 1.20 ಲಕ್ಷ ಮತಪೆಟ್ಟಿಗೆಗಳನ್ನ ಖರೀದಿಸಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಈ ಬಾರಿ ಗ್ರಾಮ ಪಂಚಾಯಿತಿ ಮಟ್ಟದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ಮತಪತ್ರದ ಮೂಲಕ ತಮ್ಮ ಅಭ್ಯರ್ಥಿಯನ್ನ ಆಯ್ಕೆ ಮಾಡಲಿದ್ದಾರೆ.

ಚುನಾವಣಾ ಆಯೋಗದ ಮುಂದಿನ ಕ್ರಮದತ್ತ ಗಮನ

ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಮುಂದಿನ ಪ್ರಕ್ರಿಯೆ ರಾಜ್ಯ ಚುನಾವಣಾ ಆಯೋಗದ ವ್ಯಾಪ್ತಿಗೆ ಬರಲಿದೆ. ಚುನಾವಣೆಯ ಅಧಿಕೃತ ವೇಳಾಪಟ್ಟಿ ಮತ್ತು ಮತದಾನದ ದಿನಾಂಕಗಳನ್ನ ಆಯೋಗ ಪ್ರಕಟಿಸಬೇಕಿದೆ. ಜನವರಿ 2027ರ ಮೊದಲ ಅಥವಾ ಎರಡನೇ ವಾರದಲ್ಲಿ ಮತದಾನ ನಡೆಯುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಮೀಸಲಾತಿ ಲೆಕ್ಕಾಚಾರದಲ್ಲಿ ರಾಜಕೀಯ ಆಕಾಂಕ್ಷಿಗಳು

ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳ ಮೀಸಲಾತಿ ವಿವರಗಳನ್ನ ಪರಿಶೀಲಿಸುತ್ತಿದ್ದಾರೆ. ತಮ್ಮ ಕ್ಷೇತ್ರ ಯಾವ ವರ್ಗಕ್ಕೆ ಮೀಸಲಾಗಿದೆ ಎಂಬುದನ್ನ ತಿಳಿದುಕೊಳ್ಳಲು ಅಭ್ಯರ್ಥಿಗಳು ಪಟ್ಟಿಯನ್ನ ಗಮನಿಸುತ್ತಿದ್ದಾರೆ. ತಮಗೆ ಅನುಕೂಲಕರವಾದ ಮೀಸಲಾತಿ ದೊರೆತಿರುವ ಕ್ಷೇತ್ರಗಳಲ್ಲಿ ಕೆಲವರು ಈಗಾಗಲೇ ಜನರನ್ನ ಭೇಟಿಯಾಗುವುದು, ಊರುಗಳಲ್ಲಿ ಓಡಾಡುವುದು ಹಾಗೂ ಪಕ್ಷದ ಟಿಕೆಟ್‌ಗಾಗಿ ನಾಯಕರನ್ನ ಸಂಪರ್ಕಿಸುವುದನ್ನ ಆರಂಭಿಸಿದ್ದಾರೆ. ಇನ್ನು ತಮ್ಮ ಕ್ಷೇತ್ರದ ಮೀಸಲಾತಿ ಬದಲಾಗಿರುವ ಅಥವಾ ತಮಗೆ ಅನುಕೂಲವಾಗದ ಮೀಸಲಾತಿ ನಿಗದಿಯಾಗಿರುವ ಆಕಾಂಕ್ಷಿಗಳು ಪರ್ಯಾಯ ಅಭ್ಯರ್ಥಿಗಳ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

ಕುಟುಂಬದ ಸದಸ್ಯರನ್ನ, ವಿಶೇಷವಾಗಿ ಪತ್ನಿಯರನ್ನ ಚುನಾವಣಾ ಕಣಕ್ಕಿಳಿಸುವ ಬಗ್ಗೆಯೂ ಕೆಲವರು ಯೋಜನೆ ರೂಪಿಸುತ್ತಿದ್ದಾರೆ. ಒಟ್ನಲ್ಲಿ ನಾಲ್ಕು ವರ್ಷಗಳ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಸಿದ್ಧತೆ ಮತ್ತೆ ಚುರುಕುಗೊಂಡಿದೆ. ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಎಲ್ಲರ ಗಮನ ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೇಳಾಪಟ್ಟಿಯತ್ತ ನೆಟ್ಟಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES