SOCIAL MEDIA

Newsletter

PARTNER SITES
Select Language Select State

ನಾಳೆಯ ಹವಾಮಾನ ವರದಿ : ಮುಂದಿನ 3 ದಿನ 13 ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ

ರಾಜ್ಯದ ಒಂದೇ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದರೆ, ಮತ್ತೊಂದು ಕಡೆ ಸುಡುಬಿಸಿಲಿನ ಬೇಗೆ ಮುಂದುವರಿದಿದೆ. ಬೆಂಗಳೂರು, ಕರಾವಳಿ ಹಾಗೂ ಮಲೆನಾಡು ಸೇರಿದಂತೆ 13 ಜಿಲ್ಲೆಗಳಲ್ಲಿ ಮುಂದಿನ 48 ರಿಂದ 72 ಗಂಟೆಗಳ ಕಾಲ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮತ್ತೊಂದೆಡೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯೇ ಇಲ್ಲದೆ ಬಿಸಿಲು ಹಾಗೂ ಸೆಕೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಒಂದೇ ಸಮಯದಲ್ಲಿ ಎರಡು ಭಿನ್ನ ವಾತಾವರಣ ಕಂಡುಬಂದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 07, 2026, 21:50 IST | Updated: Nov 07, 2026, 21:54 IST
Image Credit: Rain News
Join

ಬೆಂಗಳೂರು : ಕರ್ನಾಟಕದಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದ್ದು, ರಾಜಧಾನಿ ಬೆಂಗಳೂರು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ 13 ಜಿಲ್ಲೆಗಳಿಗೆ ಮುಂದಿನ 48 ರಿಂದ 72 ಗಂಟೆಗಳ ಕಾಲ ಧಾರಾಕಾರ ಮಳೆಯ ಎಚ್ಚರಿಕೆ ನೀಡಲಾಗಿದೆ.. ಈಗಾಗಲೇ ಮಂಡ್ಯ, ಹಾಸನ, ಮಂಗಳೂರಿನಲ್ಲಿ ಮಳೆರಾಯ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.. ಆದರೆ ಇದೇ ಹೊತ್ತಿನಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಮಳೆಯ ಲಕ್ಷಣವೇ ಇಲ್ಲದೆ ಸುಡುಬಿಸಿಲು ಆವರಿಸಿದೆ.. ಸೆಂಪಾಕಾ ಚಂಡಮಾರುತದ ಭೀತಿ ಹಾಗೂ ರಾಜ್ಯದ ಮಳೆ ಮುನ್ಸೂಚನೆಯ ಬಗ್ಗೆ ಡಿಎನ್‌ಎ ಐದನೇ ಸುದ್ದಿಯಲ್ಲಿ ನೋಡೋಣ..

ಕರ್ನಾಟಕದ ಹವಾಮಾನದಲ್ಲೂ ಮಹತ್ವದ ಬದಲಾವಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ರಾಜ್ಯದ 13 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ವೇಳೆ ಬಿರುಗಾಳಿ ಸಹಿತ ಹಠಾತ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ವರುಣನ ಅಬ್ಬರ ಶುರುವಾಗಿದೆ. ಬೆಂಗಳೂರಿನಲ್ಲಿ ತಂಪಾದ ಗಾಳಿ ಬೀಸುತ್ತಿದ್ದು, ಸಂಜೆ ವೇಳೆ ನಗರದ ಹಲವೆಡೆ ಮಳೆಯಾಗಲಿದೆ. ಇನ್ನು ಕಳೆದ 24 ಗಂಟೆಗಳಲ್ಲಿ ಮಂಡ್ಯ ಜಿಲ್ಲೆಯ ಬೆಳ್ಳೂರಿನಲ್ಲಿ ಅತ್ಯಧಿಕ 7 ಸೆಂ.ಮೀ ಮಳೆಯಾಗಿದ್ದರೆ, ಹಾಸನದ ಅರಕಲಗೂಡಿನಲ್ಲಿ 4 ಸೆಂ.ಮೀ ಹಾಗೂ ಹೊಸಕೋಟೆಯಲ್ಲಿ 3 ಸೆಂ.ಮೀ ಮಳೆ ಸುರಿದಿದೆ. ಮೈಸೂರು, ಚಾಮರಾಜನಗರ ಭಾಗದಲ್ಲೂ ಮಳೆಯಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಬಿಡುವು ಸಿಗದಂತಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಗಾಲ ಮತ್ತೆ ಮರುಕಳಿಸಿದಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಶುಕ್ರವಾರ ಸಂಜೆ ಭಾರಿ ಗುಡುಗು ಸಹಿತ ಮಳೆ ಸುರಿದಿದ್ದು, ಹಲವೆಡೆ ವಿದ್ಯುತ್ ತಂತಿಗಳು ತುಂಡಾಗಿ ಕತ್ತಲಾವರಿಸಿತ್ತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರಿನಲ್ಲಿ ಅಕಾಲಿಕ ಮಳೆಯಿಂದಾಗಿ ಒಣಗಲು ಹಾಕಿರುವ ಅಡಿಕೆ ಮತ್ತು ಕಾಫಿ ಫಸಲು ಹಾಳಾಗುವ ಭೀತಿ ರೈತರನ್ನು ಕಾಡುತ್ತಿದೆ.

ಒಂದೇ ರಾಜ್ಯದಲ್ಲಿ ಎರಡು ಸಂಪೂರ್ಣ ಭಿನ್ನ ಹವಾಮಾನ ಕಂಡುಬರುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತಿದ್ದರೆ, ಉತ್ತರ ಒಳನಾಡಿನಲ್ಲಿ ಮಾತ್ರ ಮಳೆಯ ಸುಳಿವಿಲ್ಲದೆ ಒಣಹವೆ ಮುಂದುವರಿದಿದೆ. ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗಲಿನ ವೇಳೆ ಕಡು ಬಿಸಿಲು ಮತ್ತು ಅತಿಯಾದ ಸೆಕೆ ಜನರನ್ನು ಹೈರಾಣಾಗಿಸಿದೆ. ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗದಲ್ಲೂ ಬಹುತೇಕ ಒಣಹವೆ ಇರಲಿದ್ದು, ಸಂಜೆ ವೇಳೆ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಬಿಟ್ಟರೆ ಬೇರೆ ಮಳೆಯ ಮುನ್ಸೂಚನೆ ಇಲ್ಲ.

ಒಟ್ಟಿನಲ್ಲಿ, ಕರ್ನಾಟಕದಲ್ಲಿ ಹವಾಮಾನ ವಿಚಿತ್ರ ಕವಲೊಡೆದಿದೆ.. ಉತ್ತರ ಕರ್ನಾಟಕದ ಜನತೆ ಬಿಸಿಲ ಬೇಗೆ ಮತ್ತು ಸೆಕೆಯಿಂದ ತತ್ತರಿಸುತ್ತಿದ್ದರೆ, ರಾಜಧಾನಿ ಬೆಂಗಳೂರು, ಮಲೆನಾಡು ಹಾಗೂ ಕರಾವಳಿಯ ಜನರು ಛತ್ರಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಮುಂದಿನ 48 ಗಂಟೆಗಳ ಕಾಲ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದ್ದು, ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆಯಿಂದ  ಇರಬೇಕಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES