ಬೆಂಗಳೂರು: ಈ ಬಾರಿ ಮುಂಗಾರು ಆರಂಭದಲ್ಲಿ ಸಂಪೂರ್ಣ ಕ್ಷೀಣಿಸಿ, ರಾಜ್ಯದಾದ್ಯಂತ ತೀವ್ರ ಅಭಾವ ಹಾಗೂ ಬರ ಪರಿಸ್ಥಿತಿ ತಲೆದೋರಿತ್ತು. ಮಳೆಯಿಲ್ಲದೆ ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗಿ, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನೇನು ಈ ಬಾರಿಯ ಮಳೆಗಾಲ ಮುಗಿದೇ ಹೋಯಿತು, ಇಡೀ ವರ್ಷ ನೀರಿನ ಅಭಾವ ಎದುರಿಸಬೇಕಾಗುತ್ತದೆ ಎಂದು ಜನ ಹಾಗೂ ರೈತರು ಆತಂಕದಲ್ಲಿದ್ದಾಗ, ಕೊನೆಗೂ ವರುಣದೇವನ ಆಗಮನವಾಗಿತ್ತು.
ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಸುರಿದ ಭಾರಿ ಮಳೆಯು ಒಂದು ಕಡೆ ಆಶಾದಾಯಕ ವಾತಾವರಣ ನಿರ್ಮಿಸಿದರೆ, ಇನ್ನೊಂದೆಡೆ ಹಲವು ಜಿಲ್ಲೆಗಳಲ್ಲಿ ಜಲಾವೃತ, ಮರಗಳು ಉರುಳಿಬಿದ್ದಿರುವುದು ಹಾಗೂ ಸಂಚಾರ ವ್ಯತ್ಯಯದಂತಹ ಸಾಲು ಸಾಲು ಅವಾಂತರಗಳನ್ನೇ ಸೃಷ್ಟಿಸಿತ್ತು. ಇದೀಗ ಆ ಭಾರಿ ಆರ್ಭಟ ಕೊಂಚ ಕಡಿಮೆಯಾಗಿದ್ದರೂ, ಮಳೆರಾಯ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿಲ್ಲ. ಮತ್ತೆ ತನ್ನ ಕಣ್ಣಾಮುಚ್ಚಾಲೆ ಆಟವನ್ನು ಆರಂಭಿಸಿದ್ದು, ರಾಜ್ಯದ 12 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಹಲವೆಡೆ ಗುಡುಗು, ಮಿಂಚು ಸಹಿತ ಗಾಳಿ ಮಳೆಯಾಗಲಿದೆ ಎಂದು ವರದಿಯಾಗಿದೆ.
ಮಳೆಯ ಸಮಯದಲ್ಲಿ ವಾತಾವರಣದಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಪ್ರಬಲ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಆಕಸ್ಮಿಕವಾಗಿ ಗುಡುಗು ಮತ್ತು ಮಿಂಚು ಸಂಭವಿಸುವಾಗ ಸಾರ್ವಜನಿಕರು, ವಿಶೇಷವಾಗಿ ಗ್ರಾಮೀಣ ಭಾಗದ ರೈತರು ಹಾಗೂ ತೆರೆದ ಪ್ರದೇಶಗಳಲ್ಲಿ ಕೆಲಸ ಮಾಡುವವರು ಮರಗಳ ಕೆಳಗೆ ನಿಲ್ಲದೆ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಹವಾಮಾನ ತಜ್ಞರು ಕಟ್ಟೆಚ್ಚರ ನೀಡಿದ್ದಾರೆ.