SOCIAL MEDIA

Newsletter

PARTNER SITES
Select Language Select State

ರಾಜ್ಯದ ಜನತೆಗೆ ಮತ್ತೆ ಕರೆಂಟ್‌ ಶಾಕ್: ವಿದ್ಯುತ್‌ ಬಿಲ್‌ ಹೆಚ್ಚಳಕ್ಕೆ ಎಸ್ಕಾಂಗಳ ಸಿದ್ಧತೆ!

ಮತ್ತೊಮ್ಮೆ ವಿದ್ಯುತ್ ದರ ಏರಿಕೆಗೆ ಎಸ್ಕಾಂಗಳು ಸಿದ್ಧತೆ ನಡೆಸಿದ್ದು ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ ನೀಡಲು ಮುಂದಾಗಿವೆ.

Written By Yashaswini V
Published: Oct 21, 2026, 09:45 AM IST | Updated: Oct 21, 2026, 09:46 AM IST
Join

ಒಂದೆಡೆ ತಿಂಗಳಿಗೆ 200 ಯುನಿಟ್‌ವರೆಗೆ ಫ್ರೀ ಕರೆಂಟ್‌ ಸೌಲಭ್ಯ ನೀಡುವ ಗೃಹ ಜ್ಯೋತಿ ಯೋಜನೆಯಿಂದ 1.3 ಲಕ್ಷ ಗ್ರಾಹಕರನ್ನು ಕೈ ಬಿಡಲಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಮತ್ತೊಮ್ಮೆ ವಿದ್ಯುತ್‌ ದರ ಏರಿಕೆಗೆ ಎಸ್ಕಾಂಗಳು ಪ್ಲಾನ್‌ ಮಾಡಿವೆ. ಇದರಿಂದಾಗಿ ಗ್ರಾಹಕರ ಮಾಸಿಕ ಬಜೆಟ್‌ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕರೆಂಟ್‌ ಬಿಲ್‌ ಹೆಚ್ಚಳಕ್ಕೆ ಕಾರಣ ಏನು? ಗೃಹಜ್ಯೋತಿ ಯೋಜನೆಯಿಂದ ಲಕ್ಷಾಂತರ ಫಲಾನುಭವಿಗಳು ಔಟ್‌ ಆಗಿದ್ದು ಏಕೆ ಎಂಬ ಮಹತ್ವದ ಮಾಹಿತಿ ಇಲ್ಲಿದೆ.

ವಿದ್ಯುತ್‌ ಬಿಲ್‌ ಹೆಚ್ಚಳಕ್ಕೆ ಎಸ್ಕಾಂಗಳು ಸಿದ್ಧತೆ ನಡೆಸುತ್ತಿರುವುದು ಏಕೆ?
ಸೆಪ್ಟೆಂಬರ್‌ನಲ್ಲಿ ದಾಖಲೆಯ ವಿದ್ಯುತ್ ಬೇಡಿಕೆಯಿಂದಾಗಿ ದುಬಾರಿ ಮೊತ್ತಕ್ಕೆ ಹೊರ ರಾಜ್ಯದಿಂದ ಕರೆಂಟ್ ಖರೀದಿಸಲಾಗಿದೆ. ಇದರಿಂದಾಗಿ ಹೆಚ್ಚುವರಿ ವೆಚ್ಚ ಸರಿದೂಗಿಸಲು ವಿದ್ಯುತ್‌ ದರ ಹೆಚ್ಚಳಕ್ಕೆ ಎಸ್ಕಾಂಗಳು ನಿರ್ಧರಿಸಿವೆ.

ಗ್ರಾಹಕರ ಮಾಸಿಕ ಬಿಲ್‌ಗೆ ಹೆಚ್ಚುವರಿ ಬರೆ:
ಸೆಪ್ಟೆಂಬರ್‌ ತಿಂಗಳಲ್ಲಿ ದಾಖಲೆ 20 ಸಾವಿರ ಮೆ.ವ್ಯಾ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆಗಾಗಿ, ತುರ್ತು ಪರಿಸ್ಥಿತಿ ವೆಚ್ಚ ಭರಿಸಲು ಎಫ್‌ಪಿಪಿಸಿಎ ನಿಯಮಾವಳಿಯಂತೆ ಶುಲ್ಕ ಪರಿಷ್ಕರಿಸಲು ಎಸ್ಕಾಂಗಳು ಸಿದ್ಧತೆ ನಡೆಸಿವೆ.  ಮೂರು ತಿಂಗಳಿಗೊಮ್ಮೆ ಅನ್ವಯವಾಗುವಂತೆ ಗ್ರಾಹಕರಿಂದ ಹಣ ಸಂಗ್ರಹಿಸಲು ಯೋಜಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಎಫ್‌ಪಿಪಿಸಿಎ (FPPCA) ಹೆಸರಲ್ಲಿ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗಲಿದೆ.

ಸಾಮಾನ್ಯವಾಗಿ ವಿದ್ಯುತ್‌ ಅನ್ನು ಪ್ರತಿ ಯೂನಿಟ್‌ಗೆ 6 ರೂ. ನಂತೆ ಖರೀದಿ ಮಾಡಲಾಗುತ್ತದೆ. ಆದರೆ, ಹೆಚ್ಚುವರಿ ವಿದ್ಯುತ್‌ ಬೇಡಿಕೆಯಿಂದಾಗಿ ಪ್ರಸ್ತುತ ಸುಮಾರು, ಪ್ರತಿ ಯೂನಿಟ್‌ಗೆ 25 ರಿಂದ 30 ರೂ. ಕೊಟ್ಟು ವಿದ್ಯುತ್‌ ಖರೀದಿ ಮಾಡಲಾಗುತ್ತಿದೆ. ಕೊರತೆ ಸರಿದೂಗಿಸಲು ಹೊರರಾಜ್ಯದಿಂದ ಹೆಚ್ಚಿನ ಬೆಲೆಗೆ ವಿದ್ಯುತ್‌ ಖರೀದಿ ಮಾಡಲಾಗಿದೆ. ಹೀಗಾಗಿ ಹೊರೆ ಸರಿಸೂಗಿಸಲು ತಾತ್ಕಾಲಿಕ ವಿದ್ಯುತ್‌ ದರ ಏರಿಕೆಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಎಷ್ಟು ಹೆಚ್ಚಾಗಲಿದೆ ಕರೆಂಟ್‌ ಬಿಲ್..!
ಲಭ್ಯವಿರುವ ಮಾಹಿತಿಯ ಪ್ರಕಾರ, ಎಸ್ಕಾಂಗಳು ವಿದ್ಯುತ್‌ ಬಿಲ್‌ ಅನ್ನು ಪ್ರತಿ ಯೂನಿಟ್‌ಗೆ 40 -50 ಪೈಸೆ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

ಗೃಹ ಜ್ಯೋತಿ ಯೋಜನೆಯಿಂದ ಲಕ್ಷಾಂತರ ಮಂದಿ ಔಟ್:‌
ಇತ್ತೀಚೆಗೆ ಕರ್ನಾಟಕ ಸರ್ಕಾರ ನಡೆಸಿದ ಗೃಹಜ್ಯೋತಿ ಯೋಜನೆ ಸಮೀಕ್ಷೆ ಬಳಿಕ ಸುಮಾರು 1.3 ಲಕ್ಷ ಫಲಾನುಭವಿಗಳನ್ನು ಹೊರಗಿಡಲಾಗಿದೆ. ಅದರಲ್ಲೂ ಬೆಸ್ಕಾಂ ವ್ಯಾಪ್ತಿ ಒಂದರಲ್ಲೇ 1.2 ಲಕ್ಷ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಿಂದ ಹೊರಗುಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೆಲವರು ಸಮೀಕ್ಷೆ ಸಮಯದಲ್ಲಿ ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಲು ವಿಫಲವಾಗಿದ್ದು ಇದರಿಂದಾಗಿ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುವುದನ್ನು ಮುಂದುವರೆಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಬೆಸ್ಕಾಂ ವ್ಯಾಪ್ತಿ ಒಂದರಲ್ಲೇ ಇನ್ನೂ 16 ಲಕ್ಷ ಗೃಹಜ್ಯೋತಿ ಫಲಾನುಭವಿಗಳ ದಾಖಲೆ ಲಭ್ಯವಾಗಿಲ್ಲ. ಒಂದೊಮ್ಮೆ ಈ ಫಲಾನುಭವಿಗಳು  ಅಕ್ಟೋಬರ್‌ 31, 2026ರ ಒಳಗೆ ಉಪ ವಿಭಾಗೀಯ ಕಚೇರಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಗೃಹಜ್ಯೋತಿ ಯೋಜನೆಯ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಅಂತಹವರು ಶಾಶ್ವತವಾಗಿ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.  

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES