ದೀಪಾವಳಿಗೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ: ಹಬ್ಬಕ್ಕೂ ಮೊದಲೇ ಖಾತೆ ಸೇರಲಿದೆ ₹6,000
ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಮೂರು ಕಂತಿನ ಹಣವನ್ನು ಒಟ್ಟಿಗೆ ಖಾತೆಗೆ ಜಮಾ ಮಾಡಲು ಸಿಎಂ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
ಬೆಲೆ ಏರಿಕೆಯ ನಡುವೆ ದೀಪಾವಳಿ ಹಬ್ಬಕ್ಕೆ ಮನೆಯ ಯಜಮಾನಿಯರಿಗೆ ಭರ್ಜರಿ ಉಡುಗೊರೆ ನೀಡಿರುವ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೂರೂ ತಿಂಗಳ ಹಣವನ್ನು ಎಂದರೆ ₹6,000 ಒಟ್ಟಿಗೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಆದೇಶಿಸಲಾಗಿದೆ.
ಹೌದು, ಮಹಿಳೆಯರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಆರಂಭಿಸಿರುವ ʼಗೃಹಲಕ್ಷ್ಮಿ ಯೋಜನೆʼಯಲ್ಲಿ ಪ್ರತಿ ತಿಂಗಳು ಅವರ ಖಾತೆಗೆ ₹2,000 ನಗದನ್ನು ಜಮಾ ಮಾಡಲಾಗುತ್ತದೆ. ಆದರೆ, ಇತ್ತೀಚಿಗೆ ಗೃಹಲಕ್ಷ್ಮಿ ಯೋಜನೆಯ ಇ-ಕೆವೈಸಿ ಪೂರ್ಣಗೊಳಿಸಲು ಸೂಚಿಸಿದ್ದ ಸರ್ಕಾರ, ಕಳೆದ ಮೂರು ತಿಂಗಳಿನಿಂದ ಈ ಹಣವನ್ನು ಖಾತೆಗೆ ಜಮಾ ಮಾಡಿಲ್ಲ.
ಇದೀಗ ದೀಪಾವಳಿಗೆ ಗೃಹಲಕ್ಷ್ಮಿಯರಿಗೆ ಭರ್ಜರಿ ಉಡುಗೊರೆ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಮೂರು ಕಂತಿನ ಹಣ ₹6,000 ಒಟ್ಟಿಗೆ ಮಹಿಳೆಯರ ಖಾತೆಗೆ ಜಮಾ ಮಾಡುವಂತೆ ಆದೇಶಿಸಿದ್ದು, ಈ ನಿಟ್ಟಿನಲ್ಲಿ ಒಟ್ಟು 7405.86 ಕೋಟಿ ರೂ. ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಇದರಿಂದಾಗಿ ಹಣದುಬ್ಬರದ ನಡುವೆ ಹಾಲಿನ ದರ ಏರಿಕೆ ಹಾಗೂ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೊಂಚ ಪರಿಹಾರ ಸಿಕ್ಕಂತಾಗುತ್ತದೆ.
ಹೌದು, ಕರ್ನಾಟಕ ಸರ್ಕಾರವು ರಾಜ್ಯದ ಪ್ರತಿ ಮನೆಯ ಯಜಮಾನಿಯರಿಗಾಗಿ ಜಾರಿಗೆ ತಂದಿರುವ 'ಗೃಹ ಲಕ್ಷ್ಮಿ ಯೋಜನೆ'ಯ ಬಾಕಿ ಉಳಿದಿದ್ದ ಮೂರು ಕಂತುಗಳನ್ನು ಎಂದರೆ 34, 35 ಮತ್ತು 36ನೇ ಕಂತಿನ ಹಣ ಪಾವತಿಸಲು ₹7,405 ಕೋಟಿಗೂ ಹೆಚ್ಚು ಮೊತ್ತವನ್ನು ಬಿಡುಗಡೆ ಮಾಡಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಈಗಾಗಲೇ 33 ಕಂತಿನ ಹಣ ಜಮಾ:
ಗಮನಾರ್ಹವಾಗಿ, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 33 ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಇನ್ನುಳಿದ 34ನೇ ಕಂತಿನ 2,500 ಕೋಟಿ ರೂ., 35ನೇ ಕಂತಿನ 2,452.93 ಕೋಟಿ ರೂ. ಹಾಗೂ 36ನೇ ಕಂತಿನ 2,452.93 ಕೋಟಿ ರೂ. ಹೀಗೆ ಒಟ್ಟಾರೆಯಾಗಿ 7405.86 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಸಿಎಂ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ.
ಪರಿಷ್ಕರಣೆ ಬಳಿಕ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 1.24 ಕೋಟಿ ಫಲಾನುಭವಿಗಳಿದ್ದು ಪ್ರತಿಯೊಬ್ಬರಿಗೂ ತಲಾ ₹6,000 ಹಣ ಹಬ್ಬಕ್ಕೂ ಮೊದಲೇ ಖಾತೆಗೆ ಸೇರಲಿದೆ. ಇದರೊಂದಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಫಲಾನುಭವಿ ಖಾತೆಗೆ 72,000 ರೂ. ಹಣ ಸೇರಿದಂತಾಗಲಿದೆ. ಸರ್ಕಾರ ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದ ಇದುವರೆಗೆ ಒಟ್ಟು 86,838.36 ಕೋಟಿ ರೂ. ಹಣ ಪಾವತಿಸಿದಂತೆ ಆಗಲಿದೆ.