ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣಗಳ MRP ಅಕ್ರಮ ಕಡಿವಾಣಕ್ಕೆ ಕರ್ನಾಟಕ FDA ಕ್ರಮ
ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ (ಇನ್‌ಸ್ಟಿಟ್ಯೂಷನಲ್ ಪ್ರೈಸ್) ಔಷಧಿ ಹಾಗೂ ಮೆಡಿಕಲ್ ಉಪಕರಣಗಳನ್ನು ಖರೀದಿಸಿ, ರೋಗಿಗಳಿಗೆ ಮಾತ್ರ ಭಾರಿ ಪ್ರಮಾಣದ MRP ದರದಲ್ಲೇ ಬಿಲ್ ಹಾಕಿ ಜೇಬು ಖಾಲಿ ಮಾಡುತ್ತಿವೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು.
ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿ, ವೈದ್ಯಕೀಯ ಉಪಕರಣ ಹಾಗೂ ಸರ್ಜಿಕಲ್ ಸಾಮಗ್ರಿಗಳ ಮೇಲೆ ಮುದ್ರಿತವಾಗುವ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ (MRP) ಹೆಸರಿನಲ್ಲಿ ರೋಗಿಗಳಿಂದ ಅತಿಯಾದ ಹಣ ವಸೂಲಿ ಮಾಡುತ್ತಿರುವುದಕ್ಕೆ ಕೊನೆಹಾಡಲು ಕರ್ನಾಟಕ ಔಷಧ ನಿಯಂತ್ರಣ ಇಲಾಖೆ (FDA) ಮಹತ್ವದ ಹೆಜ್ಜೆ ಇಟ್ಟಿದೆ. ಆಸ್ಪತ್ರೆಗಳ ಈ ಮನಸೋ ಇಚ್ಛೆ ಲಾಭಕೋರತನಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರಕ್ಕೆ ಸರಣಿ ಮಹತ್ವದ ಶಿಫಾರಸುಗಳನ್ನು ಸಲ್ಲಿಸಿದೆ.
ಖಾಸಗಿ ಆಸ್ಪತ್ರೆಗಳು ಕಂಪನಿಗಳಿಂದ ತೀರಾ ಕಡಿಮೆ ದರಕ್ಕೆ (ಇನ್‌ಸ್ಟಿಟ್ಯೂಷನಲ್ ಪ್ರೈಸ್) ಔಷಧಿ ಹಾಗೂ ಮೆಡಿಕಲ್ ಉಪಕರಣಗಳನ್ನು ಖರೀದಿಸಿ, ರೋಗಿಗಳಿಗೆ ಮಾತ್ರ ಭಾರಿ ಪ್ರಮಾಣದ MRP ದರದಲ್ಲೇ ಬಿಲ್ ಹಾಕಿ ಜೇಬು ಖಾಲಿ ಮಾಡುತ್ತಿವೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಎಫ್‌ಡಿಎ, ಕೇಂದ್ರ ಸರ್ಕಾರದ ಅಧೀನಕ್ಕೆ ಬರುವ 'ಔಷಧ ಬೆಲೆ ನಿಯಂತ್ರಣ ಆದೇಶ' (DPCO) ವ್ಯವಸ್ಥೆಯಲ್ಲಿ ತುರ್ತು ಬದಲಾವಣೆ ತರುವಂತೆ ಒತ್ತಾಯಿಸಿದೆ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಎಫ್‌ಡಿಎ ಸಲ್ಲಿಸಿದ ಪ್ರಮುಖ ಶಿಫಾರಸುಗಳು:
ಲ್ಯಾಂಡಿಂಗ್ ಕಾಸ್ಟ್ ಬಹಿರಂಗ: ಆಸ್ಪತ್ರೆಗಳು ರೋಗಿಗಳಿಗೆ ನೀಡುವ ಅಂತಿಮ ಬಿಲ್‌ನಲ್ಲಿ ಔಷಧ ಅಥವಾ ಉಪಕರಣದ ನಿಜವಾದ ಖರೀದಿ ವೆಚ್ಚ (Landing Cost) ಮತ್ತು MRP ಎರಡನ್ನೂ ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸುವಂತೆ ನಿಯಮ ರೂಪಿಸಲು ಮನವಿ ಮಾಡಲಾಗಿದೆ.
ಬಿಡಿಭಾಗಗಳು ಮತ್ತು ಉಪಕರಣಗಳ ಬೆಲೆ ನಿಯಂತ್ರಣ: 'ಔಷಧ ಬೆಲೆ ನಿಯಂತ್ರಣ ಆದೇಶ-2013' (DPCO) ವ್ಯಾಪ್ತಿಯನ್ನು ತಕ್ಷಣವೇ ವಿಸ್ತರಿಸಿ, ಆಸ್ಪತ್ರೆಗಳಲ್ಲಿ ಬಳಸುವ ಸರ್ಜಿಕಲ್ ಕನ್ಸ್ಯೂಮಬಲ್ಸ್ ಹಾಗೂ ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಬೆಲೆ ನಿಯಂತ್ರಣ ಚೌಕಟ್ಟಿಗೆ ತರಬೇಕು.
ಟ್ರೇಡ್ ಮಾರ್ಜಿನ್ ಶೇಕಡಾವಾರು ಮಿತಿ: ಔಷಧಿ ಕಂಪನಿಗಳು, ವಿತರಕರು ಹಾಗೂ ಆಸ್ಪತ್ರೆಗಳು ಪಡೆಯುವ ಶೇಕಡಾವಾರು ವ್ಯಾಪಾರ ಲಾಭಕ್ಕೆ (Trade Margin) ನಿರ್ದಿಷ್ಟ ಮಿತಿ ಹೇರಬೇಕು.
ಅಗತ್ಯ ಔಷಧಿಗಳ ಪಟ್ಟಿ ವಿಸ್ತರಣೆ: ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರಸ್ತುತ ಇರುವ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು (NLEM) ವಿಸ್ತರಿಸಬೇಕು.
ಸಂಸ್ಥಾ ದರದ ಪಾರದರ್ಶಕತೆ: ಆಸ್ಪತ್ರೆಗಳಿಗೆ ಕಂಪನಿಗಳು ನೀಡುವ 'ಇನ್‌ಸ್ಟಿಟ್ಯೂಷನಲ್ ಡಿಸ್ಕೌಂಟ್' ಮತ್ತು ಕಡಿತಗೊಳಿಸಿದ ಬೆಲೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಕಡ್ಡಾಯವಾಗಬೇಕು.
ಪ್ರಸ್ತುತ ಇರುವ ಬೆಲೆ ನಿಯಂತ್ರಣದ ಲೋಪಗಳು:
ಸದ್ಯ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ನಿಗದಿಪಡಿಸುವ 'ಶೆಡ್ಯೂಲ್ಡ್' ಔಷಧಿಗಳಿಗೆ ಮಾತ್ರ ಶೇ. 16 ರಷ್ಟು ರಿಟೇಲರ್ ಮಾರ್ಜಿನ್ ಮಿತಿ ಇದೆ. ಆದರೆ, 'ನಾನ್-ಶೆಡ್ಯೂಲ್ಡ್' ಔಷಧಿಗಳಿಗೆ ಯಾವುದೇ ನಿರ್ದಿಷ್ಟ ಲಾಭದ ಮಿತಿ ಇಲ್ಲದಿರುವುದರಿಂದ ತಯಾರಕರು ನಮೂದಿಸುವ ಅಧಿಕ MRP ಯೇ ಅಂತಿಮವಾಗುತ್ತಿದೆ.
ಅದರಲ್ಲೂ ಮುಖ್ಯವಾಗಿ ಸರ್ಜಿಕಲ್ ಗ್ಲೌಸ್, ಸಿರಿಂಜ್, ಕ್ಯಾತಿಟರ್, ಸ್ಟೆಂಟ್ ಹಾಗೂ ರೋಗಿಗಳಿಗೆ ಬಳಸುವ ದಿನನಿತ್ಯದ ಕನ್ಸ್ಯೂಮಬಲ್ಸ್‌ಗಳ ಮೇಲೆ ಯಾವುದೇ ಬೆಲೆ ನಿಯಂತ್ರಣವಿಲ್ಲ. ಆಸ್ಪತ್ರೆಗಳು ತಮಗೆ ಸಿಗುವ ಭಾರಿ ಪ್ರಮಾಣದ ಡಿಸ್ಕೌಂಟ್ ಲಾಭವನ್ನು ರೋಗಿಗಳಿಗೆ ವರ್ಗಾಯಿಸದೆ ತಾವೇ ಜೇಬಿಗಿಳಿಸಿಕೊಳ್ಳುತ್ತಿವೆ.
ಕರ್ನಾಟಕ ಎಫ್‌ಡಿಎ ನೀಡಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿ ಕಾಯ್ದೆಗೆ ತಿದ್ದುಪಡಿ ತಂದರೆ, ಮುಂಬರುವ ದಿನಗಳಲ್ಲಿ ಆಸ್ಪತ್ರೆಗಳ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಬರಲಿದ್ದು, ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವೈದ್ಯಕೀಯ ವೆಚ್ಚದಲ್ಲಿ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.