• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ; 21 ತಾಲೂಕುಗಳಲ್ಲಿ ತೀವ್ರ ಬರ!

ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ; 21 ತಾಲೂಕುಗಳಲ್ಲಿ ತೀವ್ರ ಬರ!

ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 23 ಹೊಸ ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ 2026ರ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಹೊಸದಾಗಿ ಘೋಷಿಸಲಾದ ತಾಲೂಕುಗಳಲ್ಲಿ 21 ತೀವ್ರ ಹಾಗೂ 2 ಮಧ್ಯಮ ಬರಪೀಡಿತ ತಾಲೂಕುಗಳಾಗಿವೆ.

Reported ByPuttaraj K AlurEdited ByPuttaraj K Alur
Published: Sep 17, 2026, 09:04 PM IST|Updated: Sep 17, 2026, 09:44 PM IST
joinshare
ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ; 21 ತಾಲೂಕುಗಳಲ್ಲಿ ತೀವ್ರ ಬರ!
Image Credit: Karnataka Drought Hit Taluks

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka Drought Hit Taluks: ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಹಾಗೂ ಒಣಹವೆ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 23 ಹೆಚ್ಚುವರಿ ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ 2026ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಈ ಹಿಂದೆ ಆಗಸ್ಟ್‌ 27ರಂದು ಸರ್ಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಿತ್ತು. 

ಇದೀಗ ಮಳೆ ಕೊರತೆಯ ಪರಿಸ್ಥಿತಿ ಮುಂದುವರಿದ ಹಿನ್ನೆಲೆಯಲ್ಲಿ ಮತ್ತಷ್ಟು ತಾಲೂಕುಗಳನ್ನ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಉಳಿದ ತಾಲೂಕುಗಳಲ್ಲಿನ ಮಳೆ ಪರಿಸ್ಥಿತಿ ಹಾಗೂ ಕೃಷಿ ಸಂಬಂಧಿತ ಸ್ಥಿತಿಗತಿಗಳನ್ನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ವೈಜ್ಞಾನಿಕವಾಗಿ ಪರಿಶೀಲಿಸಿತ್ತು. ಈ ಮೌಲ್ಯಮಾಪನದ ಆಧಾರದ ಮೇಲೆ ಹೊಸದಾಗಿ 23 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿದೆ.

23 ತಾಲೂಕುಗಳಲ್ಲಿ 21 ತೀವ್ರ ಬರಪೀಡಿತ

ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ, ಹೊಸದಾಗಿ ಬರಪೀಡಿತ ಎಂದು ಘೋಷಿಸಲಾದ 23 ತಾಲೂಕುಗಳಲ್ಲಿ 21 ತಾಲೂಕುಗಳನ್ನ ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಉಳಿದ ಎರಡು ತಾಲೂಕುಗಳನ್ನ ಮಧ್ಯಮ ಬರಪೀಡಿತ ಎಂದು ಗುರುತಿಸಲಾಗಿದೆ. ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ತಾಲೂಕುಗಳು ಸೇರಿವೆ. ತುಮಕೂರು ಜಿಲ್ಲೆಯ ತಿಪಟೂರು, ಕೊಪ್ಪಳ ಜಿಲ್ಲೆಯ ಕಾರಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರವಾರ ತಾಲೂಕುಗಳು ಈ ಪಟ್ಟಿಯಲ್ಲಿವೆ.

ಅದೇ ರೀತಿ ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್ ತಾಲೂಕುಗಳನ್ನ ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳು, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ ತಾಲೂಕುಗಳು ತೀವ್ರ ಬರಪೀಡಿತ ಪಟ್ಟಿಯಲ್ಲಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕನ್ನೂ ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ.

ಕೊಡಗಿನ ಎರಡು ತಾಲೂಕುಗಳು ಮಧ್ಯಮ ಬರಪೀಡಿತ

ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, 2ನೇ ಹಂತದ ಗ್ರೌಂಡ್ ಟ್ರೂಥಿಂಗ್ ವರದಿ ಆಧರಿಸಿ ಹೆಚ್ಚುವರಿ 23 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದೇವೆ. ಇದರೊಂದಿಗೆ ರಾಜ್ಯದಲ್ಲಿ ʼಬರಪೀಡಿತʼ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.

ರೈತರ ನೈಜ ಬೆಳೆ ಹಾನಿಯನ್ನು ಸಮರ್ಪಕವಾಗಿ… pic.twitter.com/q75zvW4u0r

— Dr. G Parameshwara (@DrParameshwara) September 17, 2026

 ಇನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕುಗಳನ್ನ ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಮೂಲಕ ಮಳೆ ಕೊರತೆಯ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗಿರುವ ಸಮಸ್ಯೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಹಾಗೂ ತುರ್ತು ಕ್ರಮಗಳನ್ನ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.

24 ತಾಲೂಕುಗಳ 214 ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ

ಉಳಿದ 139 ತಾಲೂಕುಗಳ ಬರ ಪರಿಸ್ಥಿತಿಯನ್ನ KSNDMC ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿತ್ತು.  ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪಸಮಿತಿಯ ನಿರ್ದೇಶನದಂತೆ 24 ತಾಲೂಕುಗಳ 214 ಗ್ರಾಮಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಮೊಬೈಲ್ ಅಪ್ಲಿಕೇಶನ್‌ ಮೂಲಕ ನಡೆಸಿದ ಈ ಸ್ಥಳ ಪರಿಶೀಲನೆಯಲ್ಲಿ ಮಳೆ ಪ್ರಮಾಣ, ಕೃಷಿ ಪರಿಸ್ಥಿತಿ, ಬೆಳೆಗಳ ಸ್ಥಿತಿ ಸೇರಿದಂತೆ ವಿವಿಧ ಅಂಶಗಳನ್ನ ಪರಿಶೀಲಿಸಲಾಗಿದೆ. ಸ್ಥಳ ಪರಿಶೀಲನೆಯ ಮಾಹಿತಿಯ ಜೊತೆಗೆ KSNDMC ಸಲ್ಲಿಸಿದ ಸಮಗ್ರ ವರದಿಯನ್ನ ಪರಿಗಣಿಸಿ ಸರ್ಕಾರ ಇದೀಗ 23 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಿದೆ. ಈ ಘೋಷಣೆ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆರು ತಿಂಗಳ ಅವಧಿಗೆ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ರೈತರಿಗೆ ಪರಿಹಾರ ಕ್ರಮಕ್ಕೆ ಸೂಚನೆ

ಬರಪೀಡಿತ ತಾಲೂಕುಗಳಲ್ಲಿ ರೈತರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (SDRF) ಮಾರ್ಗಸೂಚಿಗಳ ಅನ್ವಯ ಅಗತ್ಯ ಪರಿಹಾರ ಹಾಗೂ ತುರ್ತು ಕ್ರಮಗಳನ್ನ ಕೈಗೊಳ್ಳಬಹುದು. ಅಲ್ಲದೆ ಕೃಷಿ ಆಯುಕ್ತರು, ತೋಟಗಾರಿಕೆ ಇಲಾಖೆ ನಿರ್ದೇಶಕರು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಅಂದಾಜು ವರದಿಯನ್ನ ಸರ್ಕಾರಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.

ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಸಾಧ್ಯತೆ

ಇದರ ನಡುವೆ ಸೆಪ್ಟೆಂಬರ್‌ ತಿಂಗಳಲ್ಲಿಯೂ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ. ಹೀಗಾಗಿ ಬರ ಪರಿಸ್ಥಿತಿಯ ಮೇಲೆ ಸರ್ಕಾರ ಮತ್ತು ಅಧಿಕಾರಿಗಳು ನಿರಂತರ ನಿಗಾ ವಹಿಸಲಿದ್ದಾರೆ. KSNDMC ಪ್ರತಿ ವಾರ ರಾಜ್ಯದ ಬರ ಪರಿಸ್ಥಿತಿಯನ್ನ ಪರಿಶೀಲಿಸಲಿದೆ. ಮಳೆ ಪ್ರಮಾಣ, ಕೃಷಿ ಚಟುವಟಿಕೆಗಳು ಮತ್ತು ಬೆಳೆಗಳ ಸ್ಥಿತಿಯನ್ನ ಗಮನಿಸಿ ಅಗತ್ಯವಿದ್ದಲ್ಲಿ ಮುಂದಿನ ಕ್ರಮಗಳನ್ನ ಕೈಗೊಳ್ಳಲಾಗುತ್ತದೆ.

ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮತ್ತೆ 23 ತಾಲೂಕುಗಳು ಸೇರ್ಪಡೆಯಾಗಿರುವುದರಿಂದ ಒಟ್ಟು ಸಂಖ್ಯೆ 124ಕ್ಕೆ ತಲುಪಿದೆ. ಮಳೆ ಕೊರತೆಯಿಂದ ಕೃಷಿ ಕ್ಷೇತ್ರದ ಮೇಲೆ ಉಂಟಾಗಬಹುದಾದ ಪರಿಣಾಮವನ್ನ ಗಮನದಲ್ಲಿಟ್ಟುಕೊಂಡು ಬೆಳೆ ನಷ್ಟದ ಸಮೀಕ್ಷೆ ಹಾಗೂ ಪರಿಹಾರ ಕ್ರಮಗಳಿಗೆ ಸರ್ಕಾರ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಮೇಲೆ ಬರ ಪರಿಸ್ಥಿತಿಯ ತೀವ್ರತೆ ಅವಲಂಬಿತವಾಗಲಿದೆ. ಈ ಹಿನ್ನೆಲೆಯಲ್ಲಿ KSNDMCಯ ವಾರದ ಪರಿಶೀಲನೆ ಹಾಗೂ ಜಿಲ್ಲಾಡಳಿತಗಳ ವರದಿಗಳು ಮಹತ್ವ ಪಡೆದುಕೊಂಡಿವೆ.

Add Zee News as a Preferred Source
TAGS:
Karnataka Politics
Kannada News