• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ

ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ

ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದರಿಂದ ಹಿಡಿದು ಅದರ ವಿಲೇವಾರಿಯವರೆಗೆ ಇಡೀ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಅಗತ್ಯವಿದೆ. ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.

Reported ByManjunath NaragundEdited ByManjunath Naragund
Published: Sep 24, 2026, 04:49 PM IST|Updated: Sep 24, 2026, 04:53 PM IST
joinshare
ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ
Image Credit: File Photo

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನಾಗರೀಕರ ಸಹಕಾರ-ಸಹಭಾಗಿತ್ವವಿಲ್ಲದೆ, ನಗರ ವ್ಯವಸ್ಥೆಯ ಸುಧಾರಣೆ ಅಸಾಧ್ಯ: ಕೃಷ್ಣ ಬೈರೇಗೌಡ

ಬೆಂಗಳೂರು, ಸೆ. 24: ನಗರದ ಪ್ರಮುಖ ಸಮಸ್ಯೆಗಳಲ್ಲೊಂದಾದ ಕಸ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ನಾಗರಿಕ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಾಗರೀಕರ ಸಕ್ರಿಯ ಸಹಭಾಗಿತ್ವ ಅತ್ಯವಶ್ಯಕ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.

ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಘನತ್ಯಾಜ್ಯ ನಿರ್ವಹಣೆ ಕುರಿತ ಪಾಲುದಾರರ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರವನ್ನು ಸುಧಾರಿಸುವ ಜವಾಬ್ದಾರಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದಷ್ಟೇ ಅಲ್ಲ; ನಾಗರಿಕರೂ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಅವರ ಸಹಕಾರವಿಲ್ಲದೆ ಯಾವುದೇ ಸುಧಾರಣೆ ಸಾಧ್ಯವಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು.

ಮನೆಮನೆ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆ ಬಲಪಡಿಸುವ ಅಗತ್ಯವಿದೆ:

ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವುದರಿಂದ ಹಿಡಿದು ಅದರ ವಿಲೇವಾರಿಯವರೆಗೆ ಇಡೀ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಅಗತ್ಯವಿದೆ. ಕೆಲವು ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಮೂಲದಲ್ಲೇ (ಹಸಿ ಮತ್ತು ಒಣ) ತ್ಯಾಜ್ಯ ವಿಂಗಡಿಸುವ ಪ್ರಕ್ರಿಯೆಯೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ.

ರಸ್ತೆ ಬದಿಯಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗುವುದಲ್ಲದೆ, ನಾಗರಿಕರಲ್ಲಿ ಇರಬೇಕಾದ ಜವಾಬ್ದಾರಿಯ ಭಾವನೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಒಂದು ಕಡೆ ತ್ಯಾಜ್ಯ ಬಿದ್ದಿರುವುದನ್ನು ಕಂಡಾಗ, ಇತರರೂ ಅದೇ ಸ್ಥಳದಲ್ಲಿ ಕಸ ಎಸೆಯಲು ಪ್ರೇರೇಪಿತರಾಗುತ್ತಾರೆ. ಇದು ಕ್ರಮೇಣ 'ಬ್ಲ್ಯಾಕ್ಸ್ಪಾಟ್'ಗಳಾಗಿ ಮಾರ್ಪಟ್ಟು, ಮಳೆನೀರು ಹರಿಯುವ ಚರಂಡಿ ವ್ಯವಸ್ಥೆ ಸೇರಿದಂತೆ ಇತರ ನಾಗರಿಕ ಮೂಲಸೌಕರ್ಯಗಳ ಮೇಲೆಯೂ ಸರಣಿ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ನಾಗರಿಕ ಸೇವೆಗಳ ವಿತರಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ತರುವುದು ಅಗತ್ಯವಾಗಿದೆ.

ಪ್ರಸ್ತುತ ನಗರದ ಎಲ್ಲ ಮನೆಗಳಿಗೂ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹಣಾ ಸೇವೆ ತಲುಪದಿರುವುದೇ ಪ್ರಮುಖ ಸಮಸ್ಯೆಯಾಗಿದೆ. ಹಿಂದೆ ಟೆಂಡರ್ ಕರೆಯುವಾಗ ಇದ್ದ ಮನೆಗಳ ಸಂಖ್ಯೆ ಹಾಗೂ ಉತ್ಪತ್ತಿಯಾಗುತ್ತಿದ್ದ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ವಾಹನಗಳು ಮತ್ತು ಸಂಗ್ರಹಣಾ ಸಾಮರ್ಥ್ಯವನ್ನು ನಿಗದಿಪಡಿಸಲಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಗರದ ಜನಸಂಖ್ಯೆ, ಮನೆಗಳ ಸಂಖ್ಯೆ ಹಾಗೂ ತ್ಯಾಜ್ಯ ಉತ್ಪಾದನೆ ಗಣನೀಯವಾಗಿ ಹೆಚ್ಚಾಗಿದೆ. ಹಳೆಯ ಟೆಂಡರ್ ನಿಯಮಾವಳಿಗಳ ಶಕ್ತಿಗಷ್ಟೇ ವಾಹನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಹಾಲಿ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗಿದೆ. ವಿವಿಧ ತಾಂತ್ರಿಕ ಕಾರಣಗಳಿಂದ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ವಿಳಂಬವಾಗಿದ್ದು, ಈ ನ್ಯೂನ್ಯತೆಯನ್ನು ಸರಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು

ಪ್ರಸ್ತುತ ಕಸ ಸಂಗ್ರಹಣಾ ಕೆಲಸದಲ್ಲಿ ಕೆಲವು ಮಿತಿಗಳಿರುವುದು ನಿಜ. ಆದರೆ, ಈ ಲೋಪದೋಷಗಳನ್ನೇ ಮುಂದುವರಿಸಲು ಸಾಧ್ಯವಿಲ್ಲ. ಯಾವುದೇ ಪ್ರದೇಶಕ್ಕೆ ಮನೆಮನೆ ತ್ಯಾಜ್ಯ ಸಂಗ್ರಹಣಾ ಸೇವೆ ತಲುಪುತ್ತಿಲ್ಲವೋ, ಅಂತಹ ಕಡೆಗಳಿಗೆ ಸೇವೆ ಒದಗಿಸುವುದು ಆಡಳಿತದ ಜವಾಬ್ದಾರಿ. ಈ ನಿಟ್ಟಿನಲ್ಲಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತ್ಯಾಜ್ಯ ಸಂಗ್ರಹಣೆ ವಾಹನಗಳು ಬಂದಾಗ ನಾಗರಿಕರು ವಿಂಗಡಿಸಿದ ಕಸವನ್ನು ರಸ್ತೆ ಬದಿ ಎಸೆಯದೆ, ನೇರವಾಗಿ ಗಾಡಿಗಳಿಗೇ ನೀಡಬೇಕು ಎಂದು ವಿನಂತಿಸಿದರು.

ವಾಹನ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ವಿಂಗಡಿಸಿದ ತ್ಯಾಜ್ಯವನ್ನು ಮನೆ ಕಾಂಪೌಂಡ್ ಅಥವಾ ಗೇಟ್ ಬಳಿ ಸುರಕ್ಷಿತವಾಗಿ ಇರಿಸಿ. ಗೇಟ್ ಇಲ್ಲದಿದ್ದರೆ ಗೋಡೆಗೆ ಮೊಳೆ ಹೊಡೆದು ಕಸದ ಡಬ್ಬಿಯನ್ನು ತಗಲಿಸಿ. ನಮ್ಮ ಸಿಬ್ಬಂದಿ ಅದನ್ನು ತಪ್ಪದೇ ಸಂಗ್ರಹಿಸುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ಭರವಸೆ ನೀಡಿದರು.

ಬೃಹತ್ ತ್ಯಾಜ್ಯ ಉತ್ಪಾದಕರ ಹೊಣೆಗಾರಿಕೆ:

ಬೃಹತ್ ತ್ಯಾಜ್ಯ ಉತ್ಪಾದಕರ (bulk waste generator) ಬೇಜವ್ದಾರಿಯೂ ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನ ಹಾಗೂ ಅನ್ವಯವಾಗುವ ನಿಯಮಗಳ ಪ್ರಕಾರ, ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಹಾಗೂ ಅಗತ್ಯವಿದ್ದಲ್ಲಿ ಅಧಿಕೃತ ವೆಂಡರ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.

ನಗರದಲ್ಲಿ ಸುಮಾರು 50,000 ಬೃಹತ್ ತ್ಯಾಜ್ಯ ಉತ್ಪಾದಕರಿದ್ದು, ಈ ಪೈಕಿ ಸುಮಾರು 2,000 ಮಂದಿ ಮಾತ್ರ ಟೆಂಡರ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಉಳಿದವರು ತಾವು ಉತ್ಪಾದಿಸುವ ಕಸವನ್ನುಕಾನೂನು ಬಾಹೀರವಾಗಿ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಪೌರ ಕಾರ್ಮಿಕರಿಗೆ ನೀಡುತ್ತಿದ್ದಾರೆ. ಕೆಲವರ ಈ ಬೇಜವಾಬ್ದಾರಿ ವರ್ತನೆಗಳಿಂದ ವ್ಯವಸ್ಥೆಯ ಮೇಲೆಯೇ ಹೆಚ್ಚುವರಿ ಹೊರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲಿಯೇ ತ್ಯಾಜ್ಯವನ್ನು ವಿಂಗಡಿಸಿ, ನಿಯಮಾನುಸಾರ ಅಗತ್ಯವಿರುವಲ್ಲಿ ಮೂಲದಲ್ಲೇ ಕಾಂಪೋಸ್ಟ್ ಮಾಡಬೇಕು. ಮೂಲದಲ್ಲೇ ತ್ಯಾಜ್ಯ ಸಂಸ್ಕರಣೆ ಮತ್ತು ಕಾಂಪೋಸ್ಟಿಂಗ್ ಮಾಡಿದರೆ, ಅದರ ಮುಂದಿನ ನಿರ್ವಹಣೆ ಅಥವಾ ವಿಲೇವಾರಿಗೆ ಅಗತ್ಯವಿರುವ ಸೇವೆಯನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಇದಕ್ಕಾಗಿ ಅವರು ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಪ್ರಸ್ತುತ ಬೃಹತ್ ತ್ಯಾಜ್ಯದಿಂದ ಸುಮಾರು 1,000 ಟನ್ ಗಳಷ್ಟು ಹೆಚ್ಚುವರಿ ತ್ಯಾಜ್ಯ ಮನೆಮನೆ ಕಸ ಸಂಗ್ರಹಿಸುವ ವ್ಯವಸ್ಥೆಯ ಮೇಲೆ ಹೊರೆ ಉಂಟುಮಾಡುತ್ತಿದೆ. ಆದ್ದರಿಂದ ಬೃಹತ್ ತ್ಯಾಜ್ಯ ಉತ್ಪಾದಕರು ಸಮನ್ವಯ ಸಾಧಿಸಿ, ನಿಯಮಾನುಸಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ:

ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸುವುದು ಎಷ್ಟು ಮುಖ್ಯವೋ, ಸಂಗ್ರಹಿಸಿದ ನಂತರವೂ ಅದರ ವಿಂಗಡಣೆಯನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಪ್ರಸ್ತುತ ಸುಮಾರು 2,100 ಟನ್ ಗಳಷ್ಟು ವಿಂಗಡಿಸಲಾದ ಹಸಿ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಹಿಂದೆ ಸುಮಾರು 4,000 ಟನ್ಗಳಷ್ಟು ತ್ಯಾಜ್ಯ ಲ್ಯಾಂಡ್ ಫಿಲ್ ಗೆ ಹೋಗುತ್ತಿತ್ತು. ಇದೀಗ ಆ ಪ್ರಮಾಣವನ್ನು ಸುಮಾರು 2,500 ಟನ್ ಗಳಿಗೆ ಇಳಿಸಲಾಗಿದೆ. ಮೂಲದಲ್ಲೇ ವಿಂಗಡಣೆಯ ಪ್ರಮಾಣ ಹೆಚ್ಚಾದರೆ ಇಡೀ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದು ತಿಳಿಸಿದರು.

ತ್ಯಾಜ್ಯ ಸಂಗ್ರಹಣಾ ಸಾಮರ್ಥ್ಯ ಹೆಚ್ಚಳ:

ಪ್ರಸ್ತುತ ಸುಮಾರು 5,200 ಆಟೋ ಟಿಪ್ಪರ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ವಾಹನಕ್ಕೆ ಸುಮಾರು ಒಂದು ಟನ್ ಸಾಮರ್ಥ್ಯವಿದ್ದು, ಒಟ್ಟಾರೆ ಸುಮಾರು 5,200 ಟನ್ ಗಳಷ್ಟು ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯವಿದೆ. ಆದರೆ ನಗರದ ಒಟ್ಟು ತ್ಯಾಜ್ಯ ಉತ್ಪಾದನೆ ಸುಮಾರು 6,500 ಟನ್ಗಳಷ್ಟಿದೆ. ಈ ಹಿನ್ನೆಲೆಯಲ್ಲಿ 27 ಅಸೆಂಬ್ಲಿ ಕ್ಷೇತ್ರಗಳನ್ನು 33 ಪ್ಯಾಕೇಜ್ ಗಳಾಗಿ ಮರುಸಂಘಟಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಎರಡು ಮತ್ತು ಮೂರು ಟನ್ ಗಳಷ್ಟು ಸಾಮರ್ಥ್ಯ ಹೊಂದಿರುವ ವಾಹನಗಳನ್ನೂ ಬಳಸಲಾಗುತ್ತದೆ. ಇದರಿಂದ ಒಟ್ಟು ಸಾಗಣೆ ಸಾಮರ್ಥ್ಯ ಸುಮಾರು 9,000 ಟನ್ ಗಳಿಗೆ ಹೆಚ್ಚಲಿದೆ. ಸುಮಾರು 4,500 ವಾಹನಗಳು ಹೊಸ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

ಹೊಸ ವಾಹನಗಳನ್ನು ನಿಯೋಜಿಸುವುದರ ಜೊತೆಗೆ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು. ಜಿಪಿಎಸ್ ಮೂಲಕ ಪ್ರತಿ ವಾಹನಕ್ಕೆ ನಿಗದಿಪಡಿಸಿರುವ ಮಾರ್ಗದಲ್ಲಿ ಅದು ಸಂಚರಿಸಿದೆಯೇ, ಯಾವ ರಸ್ತೆಗಳಿಗೆ ತೆರಳಿದೆ, ಎಷ್ಟು ಸಮಯ ಕಾರ್ಯನಿರ್ವಹಿಸಿದೆ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರಿಂದ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬಹುದು ಎಂದರು.

ನಗರದಾದ್ಯಂತ ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ:

ಜಿಬಿಎ ವತಿಯಿಂದ ನಗರದಾದ್ಯಂತ ಸುಮಾರು 1.42 ಲಕ್ಷ ಟನ್ ಗಳಷ್ಟು ಕಟ್ಟಡ ಹಾಗೂ ಇತರೆ ಹಳೆಯ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಬಿಡಿಎ ವತಿಯಿಂದ ಸುಮಾರು 80,000 ಟನ್ ಗಳಷ್ಟು ಹಳೆಯ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಬೆಸ್ಕಾಂ ವತಿಯಿಂದಲೂ ಟ್ಟ್ರಾನ್ಸ್ಫಾರ್ಮರ್ಗಳ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ವಾರ್ಡ್ ಮಟ್ಟದಲ್ಲಿ ತೀವ್ರ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಗುತ್ತಿದೆ.

ನಗರದ ಮೂಲಭೂತ ನಾಗರಿಕ ಸೇವೆಗಳನ್ನು ಬಲಪಡಿಸುವುದಕ್ಕೆ ನಾವು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಈ ನಗರದಲ್ಲಿ ನಾವು ವಾಸಿಸುತ್ತಿದ್ದೇವೆ, ಈ ನಗರ ನಮಗೆ ನೀಡಿರುವ ಕೊಡುಗೆ ಅಪಾರ. ನಗರದ ಋಣ ತೀರಿಸುವುದು ನಮ್ಮ ಕರ್ತವ್ಯ. ಸರ್ಕಾರ, ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ ಹಾಗೂ ನಾಗರಿಕರು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಗರದಲ್ಲಿ ಶಾಶ್ವತ ಸುಧಾರಣೆ ಸಾಧ್ಯ ಎಂದರು.

ಬಾಕ್ಸ್………………….

ಪ್ರತಿಯೊಂದು ಕೆಲಸಕ್ಕೂ ಗೌರವವಿದೆ:

ಎಲ್ಲರ ವೃತ್ತಿಯೂ ಮುಖ್ಯ, ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ ಎಂಬ ಭಾವನೆ ನನಗಿದೆ. ಪ್ರತಿಯೊಂದು ಕೆಲಸವೂ ಸಮಾಜಕ್ಕೆ ಅಗತ್ಯ ಮತ್ತು ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲೂ ಹೊಣೆಗಾರಿಕೆ ಇರಬೇಕು. ಅಧಿಕಾರಿಗಳಿಂದ ಹಿಡಿದು ನಾಗರಿಕರವರೆಗೆ ಎಲ್ಲರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ಸ್ವಚ್ಛ, ಸುಸ್ಥಿರ ಮತ್ತು ಉತ್ತಮ ನಗರವನ್ನಾಗಿ ರೂಪಿಸಲು ಸಾಧ್ಯ ಎಂದು ತಿಳಿಸಿದರು.

ತಂಡಗಳಲ್ಲಿ ಚರ್ಚೆ:

ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾದ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಐದು ತಂಡಗಳಾಗಿ ವಿಂಗಡಿಸಲಾಯಿತು. ಪ್ರಸ್ತುತ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಎದುರಾಗುತ್ತಿರುವ ತ್ಯಾಜ್ಯ ಸಮಸ್ಯೆಗಳು ಹಾಗೂ ಅವುಗಳಿಗೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಕುರಿತು ತಂಡಗಳಲ್ಲಿ ಚರ್ಚೆ ನಡೆಸಲಾಯಿತು. ನಂತರ ಪ್ರತಿಯೊಂದು ತಂಡವು ಚರ್ಚೆಯ ಆಧಾರದ ಮೇಲೆ ರೂಪಿಸಿದ ಪ್ರಮುಖ ಅಂಶಗಳು ಹಾಗೂ ಪರಿಹಾರೋಪಾಯಗಳನ್ನು ಪ್ರಸ್ತುತಪಡಿಸಲಾಯಿತು. ಈ ಐದೂ ತಂಡಗಳು ನೀಡಿದ ಸಲಹೆಯನ್ನು ಆಲಿಸಿದ ಸಚಿವ ಕೃಷ್ಣ ಬೈರೇಗೌಡರು ಈ ಸಲಹೆಗಳನ್ನು ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಮುಂದಿನ ಮೂರು ನಾಲ್ಕು ತಿಂಗಳು ಅಳವಡಿಸಿಕೊಂಡು ಅದರ ಫಲಿತಾಂಶದ ಆದಾರದಲ್ಲಿ ಮತ್ತೊಂದು ಸಭೆ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಕೇಂದ್ರ ಪಾಲಿಕೆ ಆಯುಕ್ತರಾದ ಜಿ.ಜಗದೀಶ್, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ (ಸಿಇಒ) ಕರೀಗೌಡ ಹಾಗೂ ಜನಾಗ್ರಹ ಸಂಸ್ಥೆಯ ಪ್ರತಿನಿಧಿಗಳು ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

Add Zee News as a Preferred Source
TAGS:
Kannada News