ಹತ್ತು ವರ್ಷದ ಸಂಸಾರಕ್ಕೆ ಅಕ್ರಮ ಸಂಬಂಧದ ಬರೆ, ಪತ್ನಿ-ಪ್ರಿಯಕರನ ಕಿರುಕುಳಕ್ಕೆ ಪತಿ ಆತ್ಮಹತ್ಯೆ ಆರೋಪ
ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಕೊನೆಗೆ ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ.ಹತ್ತು ವರ್ಷದ ಸಂಸಾರ ದುರಂತದಲ್ಲಿ ಅಂತ್ಯವಾಗಿದ್ದೇಕೆ, ಪತಿಯ ಸಾವಿಗೆ ಕಾರಣವೇನು ಅಂತಾ ತಿಳಿಯಲು ಈ ಸ್ಟೋರಿ ಓದಿ
ಅವರದ್ದು ಹತ್ತು ವರ್ಷಗಳ ದಾಂಪತ್ಯ ಜೀವನ,ಮುದ್ದಾದ ಆರು ವರ್ಷದ ಮಗನಿದ್ದ ಪುಟ್ಟ ಸಂಸಾರ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದ್ರೆ ಆ ಒಂದು ವಿಚಾರ ಇಡೀ ಸಂಸಾರದ ನೆಮ್ಮದಿಯನ್ನೇ ಕಸಿದುಕೊಂಡಿದೆ.ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿಯುತ್ತಿದ್ದಂತೆ ಪತಿ ಕಂಗಾಲಾಗಿದ್ದಾನೆ. ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಕೊನೆಗೆ ಮನನೊಂದ ಪತಿ ನೇಣಿಗೆ ಶರಣಾಗಿದ್ದಾನೆ.ಹತ್ತು ವರ್ಷದ ಸಂಸಾರ ದುರಂತದಲ್ಲಿ ಅಂತ್ಯವಾಗಿದ್ದೇಕೆ, ಪತಿಯ ಸಾವಿಗೆ ಕಾರಣವೇನು, ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ಈ ಫೋಟೋದಲ್ಲಿ ಕಾಣ್ತಿರೋ ವ್ಯಕ್ತಿಯ ಹೆಸರು ಮುನಿಕೃಷ್ಣ, ವೃತ್ತಿಯಲ್ಲಿ ಆಟೋ ಚಾಲಕ, ಕುಟುಂಬದ ಜವಾಬ್ದಾರಿ ಹೊತ್ತು ದುಡಿಯುತ್ತಿದ್ದ ಈತನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದು ಪತ್ನಿಯ ಅಕ್ರಮ ಸಂಬಂಧದ ವಿಚಾರ ಹತ್ತು ವರ್ಷಗಳ ಹಿಂದೆ ಮದುವೆಯಾಗಿ, ಆರು ವರ್ಷದ ಮಗನೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಮುನಿಕೃಷ್ಣ, ಪತ್ನಿಯ ಮೇಲಿನ ಅನುಮಾನ ಸತ್ಯವಾಗುತ್ತಿದ್ದಂತೆ ಮಾನಸಿಕವಾಗಿ ಕುಗ್ಗಿಹೋಗಿದ್ದ ಎನ್ನಲಾಗಿದೆ.ಕೊನೆಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಿಗಾ ಗ್ರಾಮದಲ್ಲಿ ಈ ದುರಂತ ನಡೆದಿದ್ದು ದೊಡ್ಡಬಳ್ಳಾಪುರದ ನಾಗದೇವನಹಳ್ಳಿಯ ನಯನಾ ಜೊತೆ ಮುನಿಕೃಷ್ಣ ಹತ್ತು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ.ಇವರಿಗೆ ಆರು ವರ್ಷದ ಗಂಡು ಮಗನಿದ್ದ, ಸಂಸಾರಕ್ಕೆ ಮತ್ತೊಂದು ಮಗು ಸೇರುವ ನಿರೀಕ್ಷೆಯೂ ಇತ್ತು.ಆದ್ರೆ ಕುಟುಂಬದ ನೆಮ್ಮದಿಗೆ ಸಂಬಂಧಿ ಕುಮಾರನ ಪ್ರವೇಶವೇ ಮುಳುವಾಯಿತೆಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪತ್ನಿ ನಯನಾ ಮತ್ತು ಕುಮಾರನ ನಡುವೆ ಅಕ್ರಮ ಸಂಬಂಧವಿತ್ತು ಎಂಬುದು ಅವರ ಆರೋಪ, ಇದೇ ವಿಚಾರ ಮುನಿಕೃಷ್ಣನ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿತ್ತು.
ಇನ್ನು ಮೃತ ಮುನಿಕೃಷ್ಣನ ಸಂಬಂಧಿಯಾಗಿದ್ದ ಕುಮಾರ ವೃತ್ತಿಯಲ್ಲಿ ಕ್ಯಾಬ್ ಚಾಲಕ, ಆಗಾಗ ಮನೆಗೆ ಬಂದು ಹೋಗುತ್ತಿದ್ದ ಕುಮಾರ, ನಯನಾಳನ್ನು ಕಾರಿನಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಬರುತ್ತಿದ್ದ ಎನ್ನಲಾಗಿದೆ. ಹೀಗೆ ಪರಿಚಯ ಬೆಳೆಸಿಕೊಂಡಿದ್ದ ಇಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧವಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಆದ್ರೆ ಈ ವಿಚಾರ ಮುನಿಕೃಷ್ಣನಿಗೆ ಗೊತ್ತಾಗಿದ್ದು ಕೇವಲ ಮೂರು ತಿಂಗಳ ಹಿಂದಷ್ಟೇ ಎನ್ನಲಾಗಿದೆ. ಕುಟುಂಬಸ್ಥರ ಆರೋಪದ ಪ್ರಕಾರ, ಕುಮಾರನೇ ಮುನಿಕೃಷ್ಣನ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಇಬ್ಬರು ಜೊತೆಯಲ್ಲಿರುವ ಫೋಟೋಗಳು, ಖಾಸಗಿ ವಿಡಿಯೋಗಳು ಹಾಗೂ ಚಾಟ್‌ಗಳನ್ನು ಕಳುಹಿಸಿದ್ದ. ಇದರಿಂದ ಆಘಾತಕ್ಕೊಳಗಾದ ಮುನಿಕೃಷ್ಣ ಮತ್ತು ಪತ್ನಿ ನಯನಾ ನಡುವೆ ಜಗಳ ಶುರುವಾಗಿತ್ತು.ದಂಪತಿ ನಡುವೆ ಮನಸ್ತಾಪ ಹೆಚ್ಚಾದ ಬಳಿಕ ನಯನಾ ಗಂಡನ ಮನೆಯಿಂದ ತವರು ಮನೆ ಸೇರಿದ್ದಳು.
ಆದ್ರೆ ಇಲ್ಲಿಗೆ ಕಿರಿಕ್ ನಿಂತಿರಲಿಲ್ಲ, ರಸ್ತೆಯಲ್ಲಿ ಎದುರಾದಾಗ ಕುಮಾರ ಮುನಿಕೃಷ್ಣನನ್ನು ನಿಂದಿಸುತ್ತಿದ್ದನಂತೆ. ಅಷ್ಟೇ ಅಲ್ಲ, ನಯನಾಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನದು ಎಂದು ಹೇಳಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಒಂದು ಕಡೆ ಪತ್ನಿಯ ಅಕ್ರಮ ಸಂಬಂಧದ ಆಘಾತ. ಮತ್ತೊಂದು ಕಡೆ ಪ್ರಿಯಕರನಿಂದ ಅವಮಾನ ಮತ್ತು ಕಿರುಕುಳದ ಆರೋಪ. ಈ ಎಲ್ಲ ವಿಚಾರಗಳಿಂದ ಮುನಿಕೃಷ್ಣ ತೀವ್ರವಾಗಿ ನೊಂದಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ತನ್ನ ಮನದ ನೋವನ್ನು ಎಲ್ಲರ ಮುಂದೆಯೂ ಹೇಳಿಕೊಳ್ಳದ ಮುನಿಕೃಷ್ಣ, ಸಾವಿಗೂ ಒಂದು ದಿನ ಮೊದಲು ಸಹೋದರಿಯ ಬಳಿ ಈ ವಿಚಾರ ಹಂಚಿಕೊಂಡಿದ್ದನಂತೆ.. ಆದ್ರೆ ಮರುದಿನವೇ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.. ಬೆಳಗ್ಗೆ ಮನೆಯಲ್ಲಿ ನೋಡಿದಾಗ ಮುನಿಕೃಷ್ಣ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ..
ಮುನಿಕೃಷ್ಣನ ಸಾವಿನ ಬಳಿಕ ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.. ಆದರೆ ಕುಟುಂಬಸ್ಥರ ಆರೋಪದ ಪ್ರಕಾರ, ಘಟನೆಗೆ ಕಾರಣರಾದ ನಯನಾ ಮತ್ತು ಕುಮಾರನ ವಿರುದ್ಧ ಇನ್ನೂ ಬಂಧನ ಸೇರಿದಂತೆ ಕ್ರಮ ಕೈಗೊಂಡಿಲ್ಲ. ತಮ್ಮನ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಕುಟುಂಬಸ್ಥರ ಆಗ್ರಹ..
ಒಟ್ಟಿನಲ್ಲಿ, ಹತ್ತು ವರ್ಷಗಳ ದಾಂಪತ್ಯ ಜೀವನದಲ್ಲಿ ಎದುರಾದ ಬಿಕ್ಕಟ್ಟು ಈಗ ಒಂದು ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.ಆರು ವರ್ಷದ ಮಗನಿಗೆ ತಂದೆಯನ್ನು ಕಳೆದುಕೊಂಡ ನೋವು, ಕುಟುಂಬಸ್ಥರಿಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಆಘಾತ, ಮತ್ತೊಂದೆಡೆ ಮುನಿಕೃಷ್ಣನ ಸಾವಿನ ಹಿಂದೆ ಪತ್ನಿಯ ಅಕ್ರಮ ಸಂಬಂಧ ಮತ್ತು ಕಿರುಕುಳದ ಆರೋಪಗಳು ಕೇಳಿಬಂದಿವೆ.ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದೆ.ಸದ್ಯ ಪ್ರಕರಣ ಸರ್ಜಾಪುರ ಪೊಲೀಸರ ಮುಂದಿದ್ದು, ಮುನಿಕೃಷ್ಣನ ಸಾವಿಗೆ ನಿಖರ ಕಾರಣವೇನು,ಕುಟುಂಬಸ್ಥರು ಮಾಡಿರುವ ಆರೋಪಗಳಲ್ಲಿ ಎಷ್ಟು ಸತ್ಯಾಂಶವಿದೆ, ಎಂಬುದಕ್ಕೆ ತನಿಖೆಯೇ ಉತ್ತರ ನೀಡಬೇಕಿದೆ.ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂಬುದು ಮೃತನ ಕುಟುಂಬದ ಒತ್ತಾಯವಾಗಿದೆ.