ಐಐಟಿ ಯುವಕರ ಐಡಿಯಾ, ಪಾಲಿಕೆಗೆ ಕೋಟಿ ಕೋಟಿ ಆದಾಯ: ಧ್ವನಿ ಏಜೆಂಟ್ ಮೂಲಕ ಸುಸ್ತಿದಾರರಿಗೆ ಶಾಕ್!
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಎಲ್ಲ ಸುಸ್ತಿದಾರರನ್ನು ಪ್ರತಿ ದಿನ 2 ಬಾರಿ ಕರೆ ಮೂಲಕ ತಲುಪಿದ್ದು, ಪಾವತಿ ಸಂಬಂಧಿಸಿದಂತೆ ವಿಷಯ ಮನದಟ್ಟು ಮಾಡಿಸಿದೆ.
ಬೆಂಗಳೂರು: ತಂತ್ರಜ್ಞಾನದ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಇದೀಗ ಪೌರಾಡಳಿತದಲ್ಲೂ ಆಧುನಿಕ ತಂತ್ರಜ್ಞಾನದ ಹೊಸ ಗಾಳಿ ಬೀಸುತ್ತಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಆಯುಕ್ತ ಕೆ.ವಿ. ರಾಜೇಂದ್ರ ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಕೆ ಮಾಡಿದ್ದು, ಪಾಲಿಕೆಯ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬರುತ್ತಿದೆ.
ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಲು ಮರೆತಿರುವ, ನಿಖರವಾದ ತೆರಿಗೆ ಮೊತ್ತದ ಮಾಹಿತಿ ಇಲ್ಲದ ಹಾಗೂ ದೀರ್ಘಾವಧಿಯಿಂದ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಸರಿದಾರಿಗೆ ತರಲು ಪಾಲಿಕೆ ಎಐ ಚಾಲಿತ 'ವಾಯ್ಸ್ ಏಜೆಂಟ್' (Voice Agent) ಪರಿಹಾರವನ್ನು ಅಳವಡಿಸಿಕೊಂಡಿದೆ. ಈ ಎಐ ವ್ಯವಸ್ಥೆಯು ಆಸ್ತಿ ಮಾಲೀಕರಿಗೆ ನೇರವಾಗಿ ಫೋನ್ ಕರೆ ಮಾಡಿ, ಅವರ ಮಾತೃಭಾಷೆ ಕನ್ನಡದಲ್ಲೇ ಮಾತನಾಡಿ ಬಾಕಿ ಇರುವ ನಿಖರ ಮೊತ್ತ ಎಷ್ಟು, ಯಾವ ವರ್ಷದಿಂದ ಬಾಕಿ ಇದೆ ಹಾಗೂ ಆನ್‌ಲೈನ್‌ನಲ್ಲಿ ಅದನ್ನು ಪಾವತಿಸುವುದು ಹೇಗೆ ಎಂಬುದರ ಸಂಪೂರ್ಣ ವಿವರವನ್ನು ಸ್ಪಷ್ಟವಾಗಿ ನೀಡುತ್ತಿದೆ.
ಮಾರ್ಚ್ ಮತ್ತು ಜೂನ್ ತಿಂಗಳ ನಡುವಿನ ಅವಧಿಯಲ್ಲಿ, ಪಾಲಿಕೆಯ 64 ವಾರ್ಡ್‌ಗಳಲ್ಲಿ ಎಐ ಧ್ವನಿ ಏಜೆಂಟ್ ಮೂಲಕ ಬರೋಬ್ಬರಿ 4,54,908 ಸ್ವಯಂಚಾಲಿತ ಕರೆಗಳನ್ನು ಮಾಡಲಾಗಿದೆ. ಈ ಪೈಕಿ 59,604 ಆಸ್ತಿ ಮಾಲೀಕರನ್ನು ಯಶಸ್ವಿಯಾಗಿ ಸಂಪರ್ಕಿಸಲಾಗಿದೆ. ಪ್ರತಿದಿನ ದಿನಕ್ಕೆರಡು ಬಾರಿ ಕರೆ ಮಾಡಿ ವಿಷಯ ಮನದಟ್ಟು ಮಾಡಿಕೊಟ್ಟ ಪರಿಣಾಮ, 26,962 ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ಒಪ್ಪಿಕೊಂಡಿದ್ದಾರೆ. ಇದರಿಂದ ತಕ್ಷಣಕ್ಕೆ 35.11 ಕೋಟಿ ರೂಪಾಯಿ ಮೌಲ್ಯದ ಬಾಕಿ ತೆರಿಗೆ ಸಂಗ್ರಹಣೆಗೆ ದಾರಿ ಸುಗಮವಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ, "10,303 ಆಸ್ತಿ ಮಾಲೀಕರು ನಿರ್ದಿಷ್ಟ ದಿನಾಂಕದಂದು ಪಾವತಿಸುವುದಾಗಿ ತಿಳಿಸಿದ್ದರೆ, ಇನ್ನು 5,747 ಜನರು ಶೀಘ್ರದಲ್ಲೇ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಲಕ್ಷಾಂತರ ಸುಸ್ತಿದಾರರನ್ನು ತಲುಪಲು ಬೃಹತ್ ಕಾಲ್ ಸೆಂಟರ್ ಹಾಗೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿತ್ತು. ಆದರೆ ಎಐ ತಂತ್ರಜ್ಞಾನ ಮೊದಲ ಹಂತದ ಕರೆಗಳನ್ನು ತಾನೇ ನಿರ್ವಹಿಸಿದ್ದರಿಂದ, ನಮ್ಮ ಸಹಾಯಕ ಕಂದಾಯ ಅಧಿಕಾರಿಗಳು ಹೆಚ್ಚು ಗಂಭೀರ ಪ್ರಕರಣಗಳ ಕಡೆಗೆ ಗಮನಹರಿಸಲು ಸಾಧ್ಯವಾಯಿತು" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಅಭಿಯಾನದಿಂದ ಕೇವಲ ತೆರಿಗೆ ಸಂಗ್ರಹ ಅಷ್ಟೇ ಅಲ್ಲದೆ, ಪಾಲಿಕೆಯ ಹಳೆಯ ಹಾಗೂ ತಪ್ಪು ದಾಖಲೆಗಳು ಸರಿಪಡಿಸಲ್ಪಟ್ಟಿವೆ. ಸುಮಾರು 17,314 ನಿಷ್ಕ್ರಿಯ ಫೋನ್ ಸಂಖ್ಯೆಗಳು ಹಾಗೂ ಹಳೆಯ ಮಾಲೀಕರಿಗೆ ಸೇರಿದ್ದ 6,315 ಬೇರೆ ಸಂಖ್ಯೆಗಳನ್ನು ಪತ್ತೆ ಹಚ್ಚಿ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅಷ್ಟೇ ಅಲ್ಲದೆ, 4,577 ಆಸ್ತಿಗಳಲ್ಲಿ ಯಾವುದೇ ತೆರಿಗೆ ಬಾಕಿ ಇಲ್ಲದಿರುವುದು ದೃಢಪಟ್ಟು, ಆ ನಾಗರಿಕರಿಗೆ ಅನಗತ್ಯ ನೋಟಿಸ್ ತಲುಪುವುದು ತಪ್ಪಿದೆ.
ಈ ವಿಶೇಷ ಎಐ ತಂತ್ರಜ್ಞಾನವನ್ನು ಬೆಂಗಳೂರಿನ 'ವೋಕಲ್‌ಲ್ಯಾಬ್ಸ್' (VocalLabs) ಎಂಬ ಯುವ ಸ್ಟಾರ್ಟ್‌ಅಪ್‌ನ ಸಂಸ್ಥಾಪಕರಾದ, ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಗಳಾದ ನೀಲೇಶ್ ಕುಮಾರ್, ಮೃತ್ಯುಂಜಯ್ ದಾಸ್ ಮತ್ತು ರಾಗ್ ಸನಿಲ್ ಅಭಿವೃದ್ಧಿಪಡಿಸಿದ್ದಾರೆ. ಸ್ಥಳೀಯ ಸನ್ನಿವೇಶಕ್ಕೆ ತಕ್ಕಂತೆ ಕನ್ನಡ ಭಾಷೆಯಲ್ಲೇ ಸಂವಹನ ನಡೆಸುವಂತೆ ಈ ಟೆಕ್ನಾಲಜಿ ವಿನ್ಯಾಸಗೊಳಿಸಿರುವುದು ವಿಶೇಷ.
ಇದೇ ವೇಳೆ ಆಯುಕ್ತರು ನಾಗರಿಕರಲ್ಲಿ ಮನವಿ ಮಾಡಿದ್ದು, "ಪಾಲಿಕೆಯಿಂದ ಕರೆ ಮಾಡಿದಾಗ ಎಂದಿಗೂ ಫೋನ್ ಮೂಲಕ ಹಣ ಪಾವತಿಸಲು ಕೇಳುವುದಿಲ್ಲ. ಬ್ಯಾಂಕ್ ವಿವರ, ಒಟಿಪಿ (OTP), ಕಾರ್ಡ್ ಸಂಖ್ಯೆ ಅಥವಾ ಯುಪಿಐ ಪಿನ್ (UPI PIN) ಕೇಳುವುದಿಲ್ಲ. ಅಂತಹ ವಂಚಕರ ಕರೆಗಳ ಬಗ್ಗೆ ಎಚ್ಚರದಿಂದಿರಿ. ಸಾರ್ವಜನಿಕರು ಅಧಿಕೃತ ವೆಬ್‌ಸೈಟ್ [https://bbmptax.karnataka.gov.in](https://bbmptax.karnataka.gov.in) ಮೂಲಕ ಅಥವಾ ತಮ್ಮ ವ್ಯಾಪ್ತಿಯ ವಾರ್ಡ್/ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗೆ ತೆರಳಿ ಮಾತ್ರ ತೆರಿಗೆ ಪಾವತಿಸಬೇಕು" ಎಂದು ಸ್ಪಷ್ಟಪಡಿಸಿದ್ದಾರೆ.