ಐಐಎಸ್‌ಸಿ ಪ್ರೊ. ಮಹೇಶ್ ಕಾಕ್ಡೆಗೆ ರಾಮಾನುಜನ್ ಪ್ರಶಸ್ತಿ! ಗಣಿತ ಕ್ಷೇತ್ರದ ಸಾಧನೆಗೆ ಜಾಗತಿಕ ಮನ್ನಣೆ
ಬೆಂಗಳೂರಿನ IISc ಪ್ರಾಧ್ಯಾಪಕ ಹಾಗೂ ಗಣಿತಶಾಸ್ತ್ರಜ್ಞ ಮಹೇಶ್ ಕಾಕ್ಡೆ ಅವರಿಗೆ 2026ರ ಪ್ರತಿಷ್ಠಿತ ರಾಮಾನುಜನ್ ಪ್ರಶಸ್ತಿ ಲಭಿಸಿದೆ. Algebraic Number Theory ಕ್ಷೇತ್ರಕ್ಕೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನ ಗುರುತಿಸಿ ICTP ಮತ್ತು IMU ಈ ಗೌರವ ಘೋಷಿಸಿವೆ. ಅವರ ಸಾಧನೆ ಭಾರತೀಯ ಗಣಿತ ಸಂಶೋಧನೆ ಹಾಗೂ ಬೆಂಗಳೂರಿನ IIScಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಹೆಮ್ಮೆ ತಂದಿದೆ.
Ramanujan Prize 2026: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಗಣಿತಶಾಸ್ತ್ರಜ್ಞ ಹಾಗೂ ಪ್ರಾಧ್ಯಾಪಕ ಮಹೇಶ್ ಕಾಕ್ಡೆ ಅವರಿಗೆ ಪ್ರತಿಷ್ಠಿತ 2026ರ ರಾಮಾನುಜನ್ ಪ್ರಶಸ್ತಿ ಲಭಿಸಿದೆ. ಬೀಜಗಣಿತೀಯ ಸಂಖ್ಯಾ ಸಿದ್ಧಾಂತ (Algebraic Number Theory) ಕ್ಷೇತ್ರಕ್ಕೆ ಅವರು ನೀಡಿರುವ ಮಹತ್ವದ ಕೊಡುಗೆಗಳನ್ನ ಗುರುತಿಸಿ ಈ ಪ್ರಶಸ್ತಿಯನ್ನ ನೀಡಲಾಗಿದೆ. ಅಂತಾರಾಷ್ಟ್ರೀಯ ಸೈದ್ಧಾಂತಿಕ ಭೌತಶಾಸ್ತ್ರ ಕೇಂದ್ರ (ICTP) ಮತ್ತು ಅಂತಾರಾಷ್ಟ್ರೀಯ ಗಣಿತ ಒಕ್ಕೂಟ (IMU) ಜಂಟಿಯಾಗಿ ಪ್ರಶಸ್ತಿಯನ್ನ ಘೋಷಿಸಿವೆ.
ಮಹೇಶ್ ಕಾಕ್ಡೆ ಅವರ ಸಂಶೋಧನೆಯು ಆಧುನಿಕ ಸಂಖ್ಯಾ ಸಿದ್ಧಾಂತದ ಕೆಲವು ಅತ್ಯಂತ ಸಂಕೀರ್ಣ ಪ್ರಶ್ನೆಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದೆ. ವಿಶೇಷವಾಗಿ Noncommutative Iwasawa Theory ಕ್ಷೇತ್ರದಲ್ಲಿನ ಮೂಲಭೂತ ಫಲಿತಾಂಶಗಳು ಹಾಗೂ Gross-Stark ಮತ್ತು Brumer-Stark conjectures ಕುರಿತ ಅವರ ಸಂಶೋಧನೆಯನ್ನ ಪ್ರಶಸ್ತಿ ಸಮಿತಿ ಗುರುತಿಸಿದೆ. ಈ ಕೆಲಸಗಳಿಗೆ ಗಣಿತಜ್ಞ ಡೇವಿಡ್ ಹಿಲ್ಬರ್ಟ್ ಅವರು 1900ರಲ್ಲಿ ಪ್ರಸ್ತಾಪಿಸಿದ್ದ ಪ್ರಸಿದ್ಧ 23 ಸಮಸ್ಯೆಗಳ ಪೈಕಿ ಒಂದಾದ Hilbert's 12th Problemನೊಂದಿಗೆ ಸಂಬಂಧವಿದೆ.
ಯಾರು ಈ ಮಹೇಶ್ ಕಾಕ್ಡೆ?
ಮಹೇಶ್ ಕಾಕ್ಡೆ ಅವರು ಬೆಂಗಳೂರಿನ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ISI)ಯಲ್ಲಿ ಗಣಿತ ಪದವಿ ಪಡೆದಿದ್ದು, ಬಳಿಕ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶುದ್ಧ ಗಣಿತದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. 2008ರಲ್ಲಿ ಡಾಕ್ಟರೇಟ್ ಪಡೆದ ಬಳಿಕ ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಗಣಿತ ಬೋಧಕರಾಗಿ ಕೆಲಸ ಮಾಡಿದರು. ನಂತರ ಯೂನಿವರ್ಸಿಟಿ ಕಾಲೇಜ್ ಲಂಡನ್ ಹಾಗೂ ಕಿಂಗ್ಸ್ ಕಾಲೇಜ್ ಲಂಡನ್‌ನಲ್ಲಿ ಸಂಶೋಧನೆ ಮತ್ತು ಬೋಧನಾ ಕಾರ್ಯ ನಿರ್ವಹಿಸಿದರು. 2019ರಲ್ಲಿ ಬೆಂಗಳೂರಿನ IIScಗೆ ಪ್ರಾಧ್ಯಾಪಕರಾಗಿ ಸೇರ್ಪಡೆಯಾದರು.
ಕಾಕ್ಡೆ ಅವರ ಪ್ರಮುಖ ಸಂಶೋಧನಾ ಆಸಕ್ತಿ Algebraic Number Theory. ಸರಳವಾಗಿ ಹೇಳುವುದಾದರೆ, ಇದು ಬೀಜಗಣಿತದ ರಚನೆಗಳು, ಕ್ಷೇತ್ರಗಳು ಮತ್ತು ಗುಂಪುಗಳಂತಹ ಪರಿಕಲ್ಪನೆಗಳನ್ನ ಬಳಸಿಕೊಂಡು ಸಂಖ್ಯೆಗಳ ಕುರಿತ ಸಂಕೀರ್ಣ ಸಮಸ್ಯೆಗಳನ್ನ ಅರ್ಥಮಾಡಿಕೊಳ್ಳುವ ಗಣಿತದ ಪ್ರಮುಖ ಶಾಖೆಯಾಗಿದೆ. ಈ ಕ್ಷೇತ್ರದಲ್ಲಿ ಅವರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
45 ವರ್ಷದೊಳಗಿನ ಗಣಿತಜ್ಞರಿಗೆ ಪ್ರತಿಷ್ಠಿತ ಗೌರವ
ರಾಮಾನುಜನ್ ಪ್ರಶಸ್ತಿಯನ್ನ ಅಭಿವೃದ್ಧಿಶೀಲ ದೇಶಗಳ ಯುವ ಗಣಿತಜ್ಞರ ಅತ್ಯುತ್ತಮ ಸಂಶೋಧನಾ ಸಾಧನೆಗಳನ್ನ ಗುರುತಿಸಲು ನೀಡಲಾಗುತ್ತದೆ. ICTP ಮತ್ತು IMU ಜಂಟಿಯಾಗಿ ನಿರ್ವಹಿಸುವ ಈ ಪ್ರಶಸ್ತಿ 2005ರಿಂದ ಪ್ರತಿವರ್ಷ ನೀಡಲಾಗುತ್ತಿದೆ. ಪ್ರಶಸ್ತಿಗೆ ಆಯ್ಕೆಯಾಗುವ ಸಂಶೋಧಕರು ಪ್ರಶಸ್ತಿ ವರ್ಷದ ಡಿಸೆಂಬರ್ 31ರಂದು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಅಭಿವೃದ್ಧಿಶೀಲ ದೇಶದಲ್ಲಿ ಸಂಶೋಧನೆ ನಡೆಸಿರಬೇಕು. ಪ್ರಶಸ್ತಿಯೊಂದಿಗೆ 10,000 ಅಮೆರಿಕನ್ ಡಾಲರ್ ನಗದು ಬಹುಮಾನವೂ ಇದೆ.
2026ರ ಪ್ರಶಸ್ತಿಗೆ ಮಹೇಶ್ ಕಾಕ್ಡೆ ಅವರನ್ನ ಆಯ್ಕೆ ಮಾಡಿರುವುದು ಅವರ ವೈಜ್ಞಾನಿಕ ಕೊಡುಗೆಯ ಜೊತೆಗೆ, ಸಂಕೀರ್ಣ ಗಣಿತೀಯ ಸಮಸ್ಯೆಗಳ ಕುರಿತು ಅವರು ನಡೆಸಿರುವ ಆಳವಾದ ಸಂಶೋಧನೆಗೆ ದೊರೆತ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ. ರಾಮಾನುಜನ್ ಅವರ ಹೆಸರಿನಲ್ಲಿರುವ ಈ ಪ್ರಶಸ್ತಿ ಭಾರತೀಯ ಗಣಿತ ಪ್ರತಿಭೆಗೆ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಗೌರವ ತಂದುಕೊಟ್ಟಿದೆ.
ಈಗಾಗಲೇ ಹಲವು ಗೌರವಗಳಿಗೆ ಪಾತ್ರ
ರಾಮಾನುಜನ್ ಪ್ರಶಸ್ತಿಗೂ ಮುನ್ನ ಮಹೇಶ್ ಕಾಕ್ಡೆ ಅವರು ಹಲವು ಪ್ರಮುಖ ಗೌರವಗಳನ್ನ ಪಡೆದಿದ್ದಾರೆ. 2022ರಲ್ಲಿ ಅವರಿಗೆ Infosys Prize in Mathematical Sciences ಲಭಿಸಿತ್ತು. ಅದೇ ವರ್ಷ ಅವರು International Congress of Mathematiciansನಲ್ಲಿ ಆಹ್ವಾನಿತ ಭಾಷಣಕಾರರಾಗಿದ್ದರು. 2023ರಲ್ಲಿ ಏಷ್ಯಾದ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಆವಿಷ್ಕಾರಕರ ಪಟ್ಟಿಯಾದ Asian Scientist 100ನಲ್ಲೂ ಅವರ ಹೆಸರು ಕಾಣಿಸಿಕೊಂಡಿತ್ತು. IISc ಕೂಡ ಕಾಕ್ಡೆ ಅವರಿಗೆ 2026ರ ರಾಮಾನುಜನ್ ಪ್ರಶಸ್ತಿ ಲಭಿಸಿರುವುದನ್ನ ಅಧಿಕೃತವಾಗಿ ಅಭಿನಂದಿಸಿದೆ. ಸಂಸ್ಥೆಯ ಗಣಿತ ವಿಭಾಗದಲ್ಲೂ ಈ ಸಾಧನೆಯನ್ನ ಪ್ರಮುಖ ಗೌರವವಾಗಿ ದಾಖಲಿಸಲಾಗಿದೆ.
ಭಾರತೀಯ ಗಣಿತ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣ
ಶ್ರೀನಿವಾಸ ರಾಮಾನುಜನ್ ಅವರು ಭಾರತೀಯ ಗಣಿತದ ಪ್ರತಿಭೆಯನ್ನ ಜಗತ್ತಿಗೆ ಪರಿಚಯಿಸಿದ ಮಹಾನ್ ಗಣಿತಜ್ಞರಲ್ಲಿ ಒಬ್ಬರು. ಅವರ ಹೆಸರಿನಲ್ಲಿರುವ ಪ್ರತಿಷ್ಠಿತ ಪ್ರಶಸ್ತಿಗೆ IIScಯ ಪ್ರಾಧ್ಯಾಪಕ ಮಹೇಶ್ ಕಾಕ್ಡೆ ಆಯ್ಕೆಯಾಗಿರುವುದು ಭಾರತೀಯ ಗಣಿತ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಸಾಧನೆಯಾಗಿದೆ. ಬೆಂಗಳೂರಿನ IIScಯಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಗಣಿತ ಸಂಶೋಧನೆಗೆ ದೊರೆತ ಜಾಗತಿಕ ಮಾನ್ಯತೆಯಾಗಿ ಈ ಪ್ರಶಸ್ತಿಯನ್ನ ಕಾಣಬಹುದಾಗಿದೆ. ಸಂಖ್ಯಾ ಸಿದ್ಧಾಂತದಂತಹ ಅತ್ಯಂತ ಆಳವಾದ ಮತ್ತು ಸೈದ್ಧಾಂತಿಕ ಕ್ಷೇತ್ರದಲ್ಲಿ ಕಾಕ್ಡೆ ಅವರ ಸಂಶೋಧನೆ ಮುಂದಿನ ಗಣಿತ ಸಂಶೋಧನೆಗಳಿಗೂ ಮಹತ್ವದ ಪ್ರೇರಣೆಯಾಗುವ ನಿರೀಕ್ಷೆಯಿದೆ.