ತುಮಕೂರು: "ನಾನು ಮತ್ತೆ ಚುನಾವಣೆಗೆ ನಿಲ್ಲುವುದು ಬೇಡ ಎಂದು ತೀರ್ಮಾನ ಮಾಡಿದ್ದೇನೆ. ಮುಂದೇನಾಗುತ್ತದೋ ನೋಡೋಣ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ನಿವೃತ್ತಿಯ ಸುಳಿವು ನೀಡುವ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ. ತುಮಕೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಗೂ ಚುನಾವಣೆಗಳ ಖರ್ಚು-ವೆಚ್ಚಗಳ ಕುರಿತು ತೀವ್ರ ಕಳವಳ ಮತ್ತು ಬೇಸರ ವ್ಯಕ್ತಪಡಿಸಿದರು.
ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, "ನಾನು 1983 ರಿಂದ ರಾಜ್ಯದಲ್ಲಿ ಒಟ್ಟು 13 ಚುನಾವಣೆಗಳನ್ನು ಕಂಡಿದ್ದೇನೆ. ಇದರಲ್ಲಿ 8 ಬಾರಿ ಗೆದ್ದಿದ್ದರೆ, 2 ಅಸೆಂಬ್ಲಿ ಹಾಗೂ 1 ಪಾರ್ಲಿಮೆಂಟ್ (ಲೋಕಸಭೆ) ಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿದ್ದೇನೆ. ಆದರೆ, ಇಂದಿನ ಕಾಲದಲ್ಲಿ ಚುನಾವಣೆ ಎಂದರೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ಚುನಾವಣೆ ಎನ್ನುವುದು ಅತ್ಯಂತ ಕಷ್ಟಕರ ಮತ್ತು ದುಬಾರಿಯಾಗುತ್ತಿದೆ" ಎಂದು ಬಹಿರಂಗವಾಗಿ ಒಪ್ಪಿಕೊಂಡರು.
ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ಸ್ಮರಿಸಿದ ಅವರು, "ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಆಗ ಜಾರ್ಜ್ ಫರ್ನಾಂಡೀಸ್ ಅವರು ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದರು. 'ಇವನ್ಯಾರೋ ಹೊಸ ಹುಡುಗ ನಿಂತಿದ್ದಾನೆ' ಎಂದು ಆಗ ಎಲ್ಲರೂ ಅಂದುಕೊಂಡಿದ್ದರು. ಆದರೆ, ನಾನು ಆ ಚುನಾವಣೆಯಲ್ಲಿ ಎದುರಾಳಿಯನ್ನು ಸೋಲಿಸಿ ಗೆದ್ದು ಬಂದೆ. ಆದರೆ ಇಂದಿನ ಪರಿಸ್ಥಿತಿ ತೀರಾ ಭಿನ್ನವಾಗಿದೆ" ಎಂದರು.
ಇದೇ ವೇಳೆ ಇಂದಿನ ಚುನಾವಣಾ ವ್ಯವಸ್ಥೆಯ ಕೆಟ್ಟುಹೋದ ಸ್ಥಿತಿಗೆ ರಾಜಕಾರಣಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿದ ಸಿದ್ದರಾಮಯ್ಯ, "ಇಂದಿನ ರಾಜಕೀಯ ವ್ಯವಸ್ಥೆ ಈ ಹಂತಕ್ಕೆ ತಲುಪಲು ಜನರಿಗಿಂತ ಹೆಚ್ಚಾಗಿ ನಾವೇ, ಅಂದರೆ ರಾಜಕಾರಣಿಗಳೇ ಕಾರಣ. ನಾವೇ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದೇವೆ. ಚುನಾವಣಾ ವ್ಯವಸ್ಥೆಯಲ್ಲಿ ತಕ್ಷಣವೇ ಸೂಕ್ತ ಸುಧಾರಣೆಗಳು ಆಗದಿದ್ದರೆ, ಭವಿಷ್ಯದಲ್ಲಿ ಯಾವುದೇ ಒಳ್ಳೆಯ ವ್ಯಕ್ತಿ ಚುನಾವಣೆಗೆ ನಿಲ್ಲಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಾಣವಾಗುತ್ತದೆ" ಎಂದು ಎಚ್ಚರಿಸಿದರು.
ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಸಿದ್ದರಾಮಯ್ಯ ಅವರ ರಾಜಕೀಯ ನಡೆ ಮುಂದೇನು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.