ಬೆಳಗಾವಿ: ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮೇಲೆ ತಾವು ಹಲ್ಲೆ ನಡೆಸಿದ್ದಾಗಿ ಕೇಳಿಬಂದಿರುವ ಆರೋಪಗಳನ್ನು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ (ಎಮ್‌ಎಲ್‌ಸಿ) ಚನ್ನರಾಜ್ ಹಟ್ಟಿಹೊಳಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. "ನಾನು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ, ಕೇವಲ ಗೊಂದಲ ನಿವಾರಣೆಗೆ ಬುದ್ಧಿವಾದ ಹೇಳಿದ್ದೇನೆ" ಎಂದು ಅವರು ನಗರದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.
ಘಟನೆಯ ಕುರಿತು ವಾಸ್ತವಾಂಶ ತಿಳಿಸಿದ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ, "ಇಂದು ಬೆಳಿಗ್ಗೆ ನಮ್ಮ ನಿವಾಸಕ್ಕೆ ವಿವಿಧ ಭಾಗಗಳಿಂದ ಬಂದಿದ್ದ ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮ ಅಹವಾಲು ಸಲ್ಲಿಸಿದರು. ಸಕಾಲಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗೂ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದರು. ಈ ಕುರಿತು ಸಾರ್ವಜನಿಕರ ಹಿತದೃಷ್ಟಿಯಿಂದ ಹೆಸ್ಕಾಂ ಸಿಬ್ಬಂದಿಯನ್ನು ಕರೆಸಿ, ಕ್ರಷರ್‌ಗಳ ವಿದ್ಯುತ್ ಸಂಪರ್ಕವನ್ನು ದಿಢೀರನೆ ಕಟ್ ಮಾಡದಂತೆ ತಿಳಿಹೇಳಿ ಬುದ್ಧಿವಾದ ಹೇಳಿದ್ದೇನೆ ವಿನಃ ಯಾವುದೇ ಹಲ್ಲೆ ನಡೆಸಿಲ್ಲ" ಎಂದರು.
15 ವರ್ಷಗಳ ರಾಜಕೀಯ ಜೀವನದಲ್ಲಿ ಅಸಂವಿಧಾನಿಕ ಪದ ಬಳಸಿಲ್ಲ
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ ಅವರು, "ನಾನು ಕಳೆದ 15 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಈ ಅವಧಿಯಲ್ಲಿ ಎಂದಿಗೂ ಯಾವುದೇ ಸಾರ್ವಜನಿಕರಾಗಲಿ, ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಯಾಗಲಿ ಯಾರ ವಿರುದ್ಧವೂ ಅಸಂವಿಧಾನಿಕ ಪದ ಬಳಸಿ ಮಾತನಾಡಿಲ್ಲ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳನ್ನೂ ಪ್ರತಿನಿಧಿಸುವ ಜವಾಬ್ದಾರಿ ನಮಗಿದೆ. ನಾನು ಆಗಲಿ, ನಮ್ಮ ಕುಟುಂಬದವರಾಗಲಿ ಇಂತಹ ಅಸಂವಿಧಾನಿಕ ಅಥವಾ ಕಾನೂನುಬಾಹಿರ ಕೆಲಸಗಳಲ್ಲಿ ಎಂದಿಗೂ ಭಾಗಿಯಾಗುವುದಿಲ್ಲ. ಹೆಸ್ಕಾಂ ಸಿಬ್ಬಂದಿಯೊಂದಿಗೆ ನಾನು ಮಾತನಾಡಿದ್ದು ಕೇವಲ ಐದು ನಿಮಿಷ ಮಾತ್ರ" ಎಂದು ವಿವರಿಸಿದರು.
ಹೆಸ್ಕಾಂ ನೌಕರರ ಕಾರ್ಯವೈಖರಿ ಮತ್ತು ಯೂನಿಯನ್ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಸ್ತಾಪಿಸಿದ ಚನ್ನರಾಜ್ ಹಟ್ಟಿಹೊಳಿ, "ಹೆಸ್ಕಾಂ ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡುವುದು ಅಗತ್ಯವಾಗಿದೆ ಹಾಗೂ ಕಟ್ ಮಾಡುವುದು ತಪ್ಪಲ್ಲ, ಅದು ಅವರ ಕರ್ತವ್ಯ. ಈ ಘಟನೆಯಿಂದ ಹೆಸ್ಕಾಂ ಸಿಬ್ಬಂದಿ ಯೂನಿಯನ್‌ನವರು ಹೋರಾಟ ಮಾಡಲು ಮುಂದಾಗಿರುವುದು ಸಹಜ. ಆದರೆ ನಮ್ಮ ಮಧ್ಯೆ ಏನೋ ಗೊಂದಲ ಉಂಟಾಗಿದೆ. ಈ ಬಗ್ಗೆ ಹೆಸ್ಕಾಂ ನೌಕರರು ಹಾಗೂ ಅಧಿಕಾರಿಗಳೊಂದಿಗೆ ನಾನೇ ನೇರವಾಗಿ ಕುಳಿತು ಚರ್ಚೆ ನಡೆಸುತ್ತೇನೆ. ಚರ್ಚೆಯ ಮೂಲಕವೇ ಎಲ್ಲಾ ಗೊಂದಲಗಳನ್ನು ಶಮನಗೊಳಿಸುತ್ತೇನೆ" ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯ ಮೂಲಕ ಹೆಸ್ಕಾಂ ನೌಕರರ ಆರೋಪಗಳಿಗೆ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದು, ಉಂಟಾಗಿರುವ ಗೊಂದಲವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಭರವಸೆ ನೀಡಿದ್ದಾರೆ.