ಚಿತ್ರದುರ್ಗ: ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರಲ್ಲಿರುವ ಪ್ರಸಿದ್ಧ ಉಪಾಧ್ಯ ಹೋಟೆಲ್ ಸಮೀಪ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ ಬಸ್ಸೊಂದು, ಯೂರಿಯಾ ಗೊಬ್ಬರ ಹೇರಿಕೊಂಡು ಹೊರಟಿದ್ದ ಲಾರಿಗೆ ಹಿಂದಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ದುರಂತದಲ್ಲಿ ಬಸ್ ಚಾಲಕ ಹಾಗೂ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾವಣಗೆರೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಯೂರಿಯಾ ಗೊಬ್ಬರ ತುಂಬಿದ ಲಾರಿ ಉಪಾಧ್ಯ ಹೋಟೆಲ್ ಹತ್ತಿರ ಸಾಗುತ್ತಿದ್ದಾಗ, ಅದೇ ಮಾರ್ಗದಲ್ಲಿ ಬಂದ ರಾಜಹಂಸ ಬಸ್ ಅತಿ ವೇಗ ಮತ್ತು ಚಾಲಕನ ನಿರ್ಲಕ್ಷ್ಯದಿಂದ ಲಾರಿಯ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಾಜಹಂಸ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ನೋಡುಗರ ಎದೆಝಲ್ಲೆನಿಸುವಂತಿತ್ತು.
ಅಪಘಾತದಲ್ಲಿ ಬಸ್ ಚಾಲಕ ನಾಗರಾಜ್ ನಾಯ್ಕ್ (45) ಬಸ್ಸಿನ ಮುಂಭಾಗದಲ್ಲಿ ಸಿಲುಕಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಸ್ಸಿನಲ್ಲಿದ್ದ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದ ಗಂಡಸು ಪ್ರಯಾಣಿಕ ಕೂಡ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇವರ ಹೆಸರು ಹಾಗೂ ವಿವರ ಇನ್ನೂ ಪತ್ತೆಯಾಗಿಲ್ಲ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಆರು ಮಂದಿಗೆ ಗಂಭೀರ ಗಾಯ:
ಘಟನೆಯಲ್ಲಿ ಬಸ್ಸಿನಲ್ಲಿದ್ದ ಶೋಭಾ, ವಿಜಯಕುಮಾರ್, ಮಹಾಲಿಂಗಪ್ಪ, ಜಗದೀಶ್, ಸಣ್ಣ ತಿಮ್ಮಪ್ಪ ಅಟ್ಟಪ್ಪ ಹಾಗೂ ಪ್ರಸನ್ನ ಎಂಬ ಆರು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳೆಲ್ಲರೂ ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳ ಮೂಲದವರಾಗಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರ ನೆರವಿನಿಂದ ಗಾಯಾಳುಗಳನ್ನು ತಕ್ಷಣವೇ ಚಿತ್ರದುರ್ಗದ ಸರ್ಕಾರಿ ಜಿಲ್ಲಾ ಸರ್ಜನ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿದ ತಕ್ಷಣವೇ ಚಿತ್ರದುರ್ಗ ನಗರ ಸಂಚಾರಿ ಪೊಲೀಸ್ ಠಾಣೆ ಹಾಗೂ ನಗರ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಕ್ರೇನ್ ಯಂತ್ರಗಳ ನೆರವಿನಿಂದ ನುಜ್ಜುಗುಜ್ಜಾಗಿದ್ದ ಬಸ್ ಹಾಗೂ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿ, ವಾಹನ ಸಂಚಾರ ಸುಗಮಗೊಳಿಸಲಾಯಿತು.
ಈ ಸಂಬಂಧ ಚಿತ್ರದುರ್ಗ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಮುಖ್ಯ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.