SOCIAL MEDIA

Newsletter

PARTNER SITES
Select Language Select State

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ: ಇಂದೇ ಅಧಿಕೃತ ನಿರ್ಧಾರ ಪ್ರಕಟ ಸಾಧ್ಯತೆ!

ಹಾಲಿನ ದರ ಪರಿಷ್ಕರಣೆ ವಿಚಾರವಾಗಿ ಇಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಅತ್ಯಂತ ನಿರ್ಣಾಯಕ ಸಭೆ ಕರೆಯಲಾಗಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Reported By Manjunath Naragund Written By Manjunath Naragund
Published: Sep 25, 2026, 01:10 PM IST | Updated: Sep 25, 2026, 01:26 PM IST
Image Credit: Representation only
Join

ಬೆಂಗಳೂರು: ರಾಜ್ಯದ ಜನರಿಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಲಕ್ಷಣಗಳು ದಟ್ಟವಾಗಿವೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಅತ್ಯಂತ ಜನಪ್ರಿಯ ಬ್ರ್ಯಾಂಡ್ ಆಗಿರುವ 'ನಂದಿನಿ' ಹಾಲಿನ ಮಾರಾಟ ದರ ಹೆಚ್ಚಳವಾಗುವುದು ಬಹುತೇಕ ಖಚಿತಗೊಂಡಿದ್ದು, ಈ ಕುರಿತು ಇಂದೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.

ಹಾಲಿನ ದರ ಪರಿಷ್ಕರಣೆ ವಿಚಾರವಾಗಿ ಇಂದು ಬೆಂಗಳೂರಿನ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಅತ್ಯಂತ ನಿರ್ಣಾಯಕ ಸಭೆ ಕರೆಯಲಾಗಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಹೈನುಗಾರರು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಕುರಿತು ಈ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತದೆ.

ಕೆಎಂಎಫ್ ಮತ್ತು ಜಿಲ್ಲಾ ಒಕ್ಕೂಟಗಳ ಸಭೆ ಮುಗಿದ ತಕ್ಷಣವೇ ಅಧಿಕಾರಿಗಳ ತಂಡ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಂತಿಮ ಸುತ್ತಿನ ಸಮಾಲೋಚನೆ ನಡೆಸಲಿದೆ. ಈ ಉನ್ನತ ಮಟ್ಟದ ಸಭೆಯ ನಂತರವೇ ಹಾಲಿನ ದರ ಎಷ್ಟು ಹೆಚ್ಚಾಗಲಿದೆ ಎಂಬ ಅಧಿಕೃತ ಮಾಹಿತಿಯನ್ನು ಸರ್ಕಾರ ಹೊರಹಾಕಲಿದೆ.

ರೈತರ ಬೇಡಿಕೆ ಹಾಗೂ ಸರ್ಕಾರದ ನಿಲುವು

ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿಯಿಂದಾಗಿ ಪಶು ಆಹಾರದ ಬೆಲೆ ಗಗನಕ್ಕೇರಿದೆ. ಹೀಗಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವ ರೈತರ ನೆರವಿಗೆ ಸರ್ಕಾರ ತಕ್ಷಣ ಬರಬೇಕಿದೆ. ಇದೇ ಕಾರಣಕ್ಕೆ ಹಾಲು ಒಕ್ಕೂಟಗಳು ಮತ್ತು ರೈತ ಸಂಘಟನೆಗಳು ಪ್ರತಿ ಲೀಟರ್ ಹಾಲಿನ ಮಾರಾಟ ದರವನ್ನು 8 ರಿಂದ 10 ರೂಪಾಯಿಗಳವರೆಗೆ ಹೆಚ್ಚಿಸಬೇಕು ಹಾಗೂ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು 8 ರೂಪಾಯಿಗೆ ಏರಿಕೆ ಮಾಡಬೇಕೆಂದು ಬಲವಾಗಿ ಒತ್ತಾಯಿಸಿದ್ದವು.

ಆದರೆ, ಒಂದೇ ಬಾರಿಗೆ ಲೀಟರ್‌ಗೆ 8 ರಿಂದ 10 ರೂಪಾಯಿ ಹೆಚ್ಚಿಸಿದರೆ ಸಾಮಾನ್ಯ ಗ್ರಾಹಕರಿಗೆ ಭಾರೀ ಹೊರೆಯಾಗಲಿದೆ ಎಂಬುದನ್ನು ಸರ್ಕಾರ ಮನಗಂಡಿದೆ. ಹೀಗಾಗಿ, ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕರಿಗೂ ತೊಂದರೆಯಾಗದಂತೆ ಹಾಗೂ ರೈತರಿಗೂ ನ್ಯಾಯ ಸಿಗುವ ರೀತಿಯಲ್ಲಿ ಮಧ್ಯಮ ಮಾರ್ಗದ ಪ್ರಸ್ತಾವನೆ ಸಿದ್ಧಪಡಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್‌ಗೆ ಸೂಚನೆ ನೀಡಿದ್ದರು.

ಪ್ರತಿ ಲೀಟರ್‌ಗೆ ಎಷ್ಟು ಏರಿಕೆಯಾಗಬಹುದು?

ಸರ್ಕಾರ ನೀಡಿದ ಸುಳಿವು ಹಾಗೂ ಮೂಲಗಳ ಪ್ರಕಾರ, ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 4 ರಿಂದ 5 ರೂಪಾಯಿಗಳವರೆಗೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಒಕ್ಕೂಟಗಳು ಕೋರಿದಷ್ಟು ಬೃಹತ್ ಪ್ರಮಾಣದ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡದಿದ್ದರೂ, ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಕನಿಷ್ಠ 4 ರಿಂದ 5 ರೂಪಾಯಿ ಏರಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಇಂದಿನ ಸಭೆಯ ನಂತರ ಮುಖ್ಯಮಂತ್ರಿಗಳ ಅಂತಿಮ ಒಪ್ಪಿಗೆ ಸಿಗುತ್ತಿದ್ದಂತೆ ಹೊಸ ದರ ಜಾರಿಗೆ ಬರಲಿದ್ದು, ರಾಜ್ಯದ ಲಕ್ಷಾಂತರ ಗ್ರಾಹಕರ ಜೇಬಿಗೆ ಕೊಂಚ ಬಿಸಿ ತಟ್ಟುವುದು ಖಂಡಿತ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES