SOCIAL MEDIA

Newsletter

PARTNER SITES
Select Language Select State

ಕರ್ನಾಟಕದಲ್ಲಿ ಮುಂದಿನ 2 ದಿನ ಬಿರುಗಾಳಿ ಸಹಿತ ಭಾರೀ ಮಳೆ: ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತ, ಸವಾರರ ಪರದಾಟ!

ಬೆಳಗಾವಿ, ಧಾರವಾಡ, ಬೀದರ್, ಗದಗ, ಮೈಸೂರು, ಹಾಸನ, ಮಂಡ್ಯ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

Reported By Manjunath Naragund Written By Manjunath Naragund
Published: Sep 22, 2026, 07:47 AM IST | Updated: Sep 22, 2026, 07:55 AM IST
Image Credit: Rain Effect
Join

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ತೀವ್ರ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯಾದ್ಯಂತ ವರುಣನ ಅಬ್ಬರ ತೀವ್ರಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದಾದ್ಯಂತ ಗಂಟೆಗೆ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಬೀಸುವ ಭೀಕರ ಬಿರುಗಾಳಿ ಹಾಗೂ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡು ಭಾಗದ ಹಲವು ಜಿಲ್ಲೆಗಳಿಗೆ ಅತ್ಯಂತ ಮುನ್ನೆಚ್ಚರಿಕೆಯ 'ರೆಡ್ ಅಲರ್ಟ್'ಘೋಷಿಸಲಾಗಿದೆ.

ಅಲ್ಲದೆ ಬೆಳಗಾವಿ, ಧಾರವಾಡ, ಬೀದರ್, ಗದಗ, ಮೈಸೂರು, ಹಾಸನ, ಮಂಡ್ಯ ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದ್ದು, ಮೀನುಗಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ನದಿಯಂತಾದ ರಾಜಧಾನಿಯ ರಸ್ತೆಗಳು; ಕೆಆರ್‌ ಪುರಂ, ರಾಮಮೂರ್ತಿನಗರ ಜಲಾವೃತ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯಿಂದ ಆರಂಭವಾದ ಮಳೆ, ಸೋಮವಾರ ತಡರಾತ್ರಿವರೆಗೂ ನಿರಂತರವಾಗಿ ಸುರಿದಿದೆ. ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಬಿಸಿಲಿನ ತಾಪ ಕಡಿಮೆಯಾಗಿ ತಂಪಾದ ವಾತಾವರಣ ಸೃಷ್ಟಿಯಾಗಿದೆಯಾದರೂ, ಸಾರ್ವಜನಿಕರ ದಿನನಿತ್ಯದ ಬದುಕು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ, ಮಧ್ಯಾಹ್ನದ ವೇಳೆಗೆ ಮತ್ತೆ ಅಬ್ಬರಿಸಿ ಬೊಬ್ಬೆರೆದಿದ್ದಾನೆ.

ವಿಶೇಷವಾಗಿ ಕೆಆರ್ ಪುರಂ ಹಾಗೂ ರಾಮಮೂರ್ತಿನಗರ ಬಳಿಯ ದೂರವಾಣಿ ನಗರದ ರಸ್ತೆಗಳು ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡು ನದಿಯಂತೆ ಹರಿಯುತ್ತಿವೆ. ರಸ್ತೆಗಳಲ್ಲಿ ಸುಮಾರು ಎರಡಡಿ ಎತ್ತರಕ್ಕೆ ನೀರು ನಿಂತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಈ ಕೆಟ್ಟ ಅವಾಂತರದಿಂದಾಗಿ ಘಂಟೆಗಟ್ಟಲೆ ವಿಪರೀತ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಕನಿಷ್ಠ ಮೂಲಸೌಕರ್ಯ ಒದಗಿಸದ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.

ಮಳೆಯ ಆರ್ಭಟದಿಂದಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ಫ್ಲೈಓವರ್‌ಗಳು ಜಲಾವೃತಗೊಂಡು ಸಂಚಾರ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ.

ವಿಮಾನ ನಿಲ್ದಾಣ ರಸ್ತೆ: ಬಾಗಲೂರು ಕ್ರಾಸ್‌ನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ನಿಧಾನಗತಿಯಲ್ಲಿ ಸಾಗಿತು.

ಐಟಿ ಕಾರಿಡಾರ್: ಬಿ.ನಾರಾಯಣಪುರ ಮುಖ್ಯ ರಸ್ತೆ ಹಾಗೂ ಲೋರಿ ಜಂಕ್ಷನ್ ಕಡೆಗೆ ಭಾರಿ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ. ಮಾರತ್‌ಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೆ ಸಂಚರಿಸುವ ಐಟಿ ಉದ್ಯೋಗಿಗಳು ತೀವ್ರ ಪರದಾಟ ನಡೆಸಿದರು.

ಮೇಲ್ಸೇತುವೆಗಳಲ್ಲೇ ನೀರು: ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಜಲಾವೃತಗೊಂಡಿದೆ. ಕೋಟಿ ಕೋಟಿ ವೆಚ್ಚ ಮಾಡಿ ಖರೀದಿಸಿರುವ 'ರಸ್ತೆ ಸ್ವಚ್ಛತಾ ಯಂತ್ರಗಳು' ಏನಾದವು ಎಂದು ವಾಹನ ಸವಾರರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ನಗರದಲ್ಲಿ ಸರಾಸರಿ 2 ಸೆಂ.ಮೀ ಮಳೆಯಾಗಿದೆ. ಯಲಹಂಕ ಹಾಗೂ ಪಶ್ಚಿಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ದಾಖಲಾಗಿದೆ.ಹೆಮ್ಮಿಗೆಪುರ, ಮೂಡಲಪಾಳ್ಯ, ನಾಗರಭಾವಿ, ಉತ್ತರಹಳ್ಳಿಯಲ್ಲಿ ತಲಾ 4.1 ಸೆಂ.ಮೀ ಮಳೆ ಸುರಿದರೆ ವಿಜಯನಗರದಲ್ಲಿ 2.8 ಸೆಂ.ಮೀ ಸುರಿದಿದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಬೆಂಗಳೂರಿನಲ್ಲಿ ಇಂದೂ ಸಹ ಗುಡುಗು ಸಹಿತ ಮಳೆಯಾಗಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಇದೇ ರೀತಿಯ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತುರ್ತು ಕೆಲಸಗಳಿದ್ದರೆ ಮಾತ್ರ ಹೊರಬರಲು ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES