ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕ ರಾಜ್ಯದಲ್ಲಿ ಇಂದು ರಾತ್ರಿಯಿಂದ ತೀವ್ರ ಸ್ವರೂಪದ 'ಆರೋಗ್ಯ ತುರ್ತು ಪರಿಸ್ಥಿತಿ' ಎದುರಾಗುವ ಭೀತಿ ಎದುರಾಗಿದೆ. ಜೀವಭಯದಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವ ಪ್ರಮುಖ ಕೊಂಡಿಯಾಗಿರುವ '108 ಆ್ಯಂಬುಲೆನ್ಸ್' ಚಾಲಕರು ಹಾಗೂ ಸಿಬ್ಬಂದಿ ಸರ್ಕಾರದ ವಿರುದ್ಧ ನೇರ ಸಮರಕ್ಕಿಳಿದಿದ್ದಾರೆ. ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಇಂದು ಸಂಜೆ 8 ಗಂಟೆಯ ನಂತರ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನೌಕರರ ಸಂಘಟನೆ ನಿರ್ಧರಿಸಿದೆ.
ಅಷ್ಟೇ ಅಲ್ಲದೆ, ಬೇಡಿಕೆಗಳಿಗೆ ಸರ್ಕಾರ ಕ್ಯಾರೇ ಎನ್ನದಿದ್ದಲ್ಲಿ ಎಲ್ಲಾ ಸಿಬ್ಬಂದಿಯೂ 'ಸಾಮೂಹಿಕ ರಾಜೀನಾಮೆ' ನೀಡಿ ಹೋರಾಟವನ್ನು ಅತ್ಯಂತ ತೀವ್ರಗೊಳಿಸಲು ಸಜ್ಜಾಗಿದ್ದಾರೆ. ಇದರಿಂದಾಗಿ ಅಪಘಾತಗಳು, ಗರ್ಭಿಣಿಯರ ತುರ್ತು ಹೆರಿಗೆ ಹಾಗೂ ತೀವ್ರ ಅಸ್ವಸ್ಥರ ಜೀವ ರಕ್ಷಣೆಗೆ ಧಕ್ಕೆಯಾಗುವ ಆತಂಕ ಎದುರಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.
15 ದಿನಗಳ ಗಡುವು ಮುಗಿದರೂ ಅಸಡ್ಡೆ; ನೌಕರರ ಆಕ್ರೋಶ:
ಆರೋಗ್ಯ ಇಲಾಖೆ ಹಾಗೂ ಆ್ಯಂಬುಲೆನ್ಸ್ ನಿರ್ವಹಣಾ ಸಂಸ್ಥೆಯ ಧೋರಣೆಯಿಂದ ಬೇಸತ್ತಿರುವ 108 ಸಿಬ್ಬಂದಿ, ತಮ್ಮ ಹಲವು ವರ್ಷಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ, ನೀಡಿದ್ದ ಗಡುವು ಇಂದು ಸಂಜೆಗೆ ಮುಕ್ತಾಯಗೊಳ್ಳುತ್ತಿದ್ದರೂ ಆರೋಗ್ಯ ಇಲಾಖೆಯಿಂದ ಯಾವುದೇ ಧನಾತ್ಮಕ ಸ್ಪಂದನೆ ಸಿಕ್ಕಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು, ಇಂದಿನಿಂದಲೇ ಸೇವೆ ಸ್ಥಗಿತಗೊಳಿಸಿ ಸಾಮೂಹಿಕವಾಗಿ ಕರ್ತವ್ಯದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ.
ರಾಜ್ಯಾದ್ಯಂತ ನೂರಾರು 108 ಆ್ಯಂಬುಲೆನ್ಸ್ ವಾಹನಗಳು ರಸ್ತೆಗಿಳಿಯದಿದ್ದರೆ, ಅಪಘಾತಕ್ಕೊಳಗಾದವರಿಗೆ ಹಾಗೂ ಗ್ರಾಮೀಣ ಭಾಗದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವುದು ಅಸಾಧ್ಯವಾಗಲಿದೆ. ಪರಿಸ್ಥಿತಿ ಕೈಮೀರುವ ಮುನ್ನ ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು ತಕ್ಷಣವೇ ಮಧ್ಯಪ್ರವೇಶಿಸಿ ಸಂಧಾನ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
108 ನೌಕರರ ಪ್ರಮುಖ ಬೇಡಿಕೆಗಳೇನು?
108 ಆ್ಯಂಬುಲೆನ್ಸ್ ನೌಕರರು ತಮ್ಮ ಜೀವ ಹದಗೆಡಿಸಿಕೊಂಡು ಹಗಲು-ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದರೂ ಅವರಿಗೆ ಸೂಕ್ತ ಸೇವಾ ಭದ್ರತೆ ಹಾಗೂ ಸರಿಯಾದ ವೇತನ ಸಿಗುತ್ತಿಲ್ಲ ಎಂಬುದು ಅವರ ಮುಖ್ಯ ದೂರು. ನೌಕರರು ಸರ್ಕಾರದ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳ ಪಟ್ಟಿ ಇಲ್ಲಿದೆ:
ವೇತನ ಹೆಚ್ಚಳ ಹಾಗೂ ಪರಿಷ್ಕರಣೆ: ಪ್ರತಿ ವರ್ಷ ನಿಯಮಿತವಾಗಿ ವಾರ್ಷಿಕ ವೇತನ ಹೆಚ್ಚಳದೊಂದಿಗೆ ಶ್ರಮಕ್ಕೆ ತಕ್ಕಂತೆ ವೇತನವನ್ನು ಪರಿಷ್ಕರಣೆ ಮಾಡಬೇಕು.
ಏಕರೂಪ ವೇತನ ವ್ಯವಸ್ಥೆ: ಪ್ರಸ್ತುತ ಚಾಲ್ತಿಯಲ್ಲಿರುವ ವಲಯವಾರು ವೇತನ ನಿಗದಿ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ರಾಜ್ಯಾದ್ಯಂತ ಎಲ್ಲಾ ಸಿಬ್ಬಂದಿಗೆ ಏಕರೂಪದ ವೇತನ ಜಾರಿಗೆ ತರಬೇಕು.
ಜೇಷ್ಠತೆ ಆಧಾರದ ಮೇಲೆ ಸಂಬಳ: ಅನುಭವ ಮತ್ತು ಜೇಷ್ಠತೆಯ ಆಧಾರದ ಮೇಲೆ ನೌಕರರಿಗೆ ಸೂಕ್ತ ವೇತನ ನಿಗದಿಪಡಿಸಬೇಕು.
ಸರಿಯಾದ ಸಮಯಕ್ಕೆ ವೇತನ ಪಾವತಿ: ಕಾರ್ಮಿಕ ಇಲಾಖೆಯ ನಿಯಮಾವಳಿಯಂತೆ ಪ್ರತಿ ತಿಂಗಳ 7ನೇ ತಾರೀಖಿನ ಒಳಗಾಗಿ ನೌಕರರ ಖಾತೆಗೆ ವೇತನ ಜಮೆ ಮಾಡಬೇಕು.
3 ಪಾಳಿ ಕರ್ತವ್ಯಕ್ಕೆ ವಾಹನ ಪೂರೈಕೆ: ಸಿಬ್ಬಂದಿಗೆ ನಿಗದಿತವಾಗಿ 3 ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ಹೆಚ್ಚುವರಿ ವಾಹನಗಳು ಹಾಗೂ ಶಿಫ್ಟ್ ಸಮಯ ಪರಿಷ್ಕರಣೆ ಮಾಡಬೇಕು.
50 ಲಕ್ಷ ರೂ. ಪರಿಹಾರ: ಕರ್ತವ್ಯದಲ್ಲಿರುವಾಗ ಅಪಘಾತಕ್ಕೀಡಾಗಿ ಮೃತಪಡುವ ಸಿಬ್ಬಂದಿಯ ಕುಟುಂಬಕ್ಕೆ 50 ಲಕ್ಷ ರೂಪಾಯಿಗಳ ಪರಿಹಾರ ಧನ ಒದಗಿಸಬೇಕು.
ಮೂಲಭೂತ ಸೌಕರ್ಯ ಹಾಗೂ ವಿಶ್ರಾಂತಿ: ಕಠಿಣ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಕೊಠಡಿಗಳ (Rest Rooms) ವ್ಯವಸ್ಥೆ ಕಲ್ಪಿಸಬೇಕು.
ಸರ್ಕಾರಕ್ಕೆ ಕೊನೆಯ ಗಡುವು:
"ನಾವು ಸಾರ್ವಜನಿಕರಿಗೆ ತೊಂದರೆ ನೀಡಲು ಬಯಸುವುದಿಲ್ಲ. ಆದರೆ, ಸರ್ಕಾರವೇ ನಮ್ಮನ್ನು ಈ ಹಂತಕ್ಕೆ ತಳ್ಳಿದೆ. ಇಂದು ಸಂಜೆಯೊಳಗೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಇಡೀ ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಚಕ್ರಗಳು ಸ್ಥಗಿತಗೊಳ್ಳಲಿವೆ" ಎಂದು ನೌಕರರ ಒಕ್ಕೂಟದ ಮುಖಂಡರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಆರೋಗ್ಯ ಇಲಾಖೆಯ ನಡೆ ಏನಿರಲಿದೆ ಹಾಗೂ ಸರ್ಕಾರ ಈ ಹೆಲ್ತ್ ಎಮರ್ಜೆನ್ಸಿಯನ್ನು ಹೇಗೆ ಹಸಿಬಿಸಿ ಮಾಡಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.