SOCIAL MEDIA

Newsletter

PARTNER SITES
Select Language Select State

ಹಾವೇರಿ: ಬಾಣಂತಿಯರ ಉಪಹಾರದಲ್ಲಿ ಸತ್ತ ಹಲ್ಲಿ ಪತ್ತೆ, ಸಾರ್ವಜನಿಕರ ತೀವ್ರ ಆಕ್ರೋಶ!

ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಬಾಣಂತಿಯರು ಹಾಗೂ ರೋಗಿಗಳಿಗೆ ಆಸ್ಪತ್ರೆ ಕ್ಯಾಂಟೀನ್‌ನಿಂದ ಉಪಹಾರವಾಗಿ ಶೀರವನ್ನು ನೀಡಲಾಗಿತ್ತು. ರೋಗಿಗಳು ಆಹಾರ ಸೇವಿಸುವ ವೇಳೆಯಲ್ಲಿ ಶೀರದೊಳಗೆ ತುಂಡು ತುಂಡಾಗಿ ಸತ್ತು ಬಿದ್ದಿದ್ದ ಹಲ್ಲಿಯ ದೇಹದ ಭಾಗಗಳು ಕಾಣಿಸಿಕೊಂಡಿವೆ.

Reported By Manjunath Naragund Written By Manjunath Naragund
Published: Sep 27, 2026, 01:28 PM IST | Updated: Sep 27, 2026, 01:40 PM IST
Image Credit: Haveri
Join

ಹಾವೇರಿ: ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಬಾಣಂತಿಯರು ಹಾಗೂ ಪುಟ್ಟ ಮಕ್ಕಳ ಜೀವದ ಜೊತೆ ಕ್ಯಾಂಟೀನ್ ಸಿಬ್ಬಂದಿ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಘಟನೆಯೊಂದು ಹಾವೇರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಹಾರಕ್ಕಾಗಿ ಸರಬರಾಜು ಮಾಡಿದ್ದ ಶೀರದಲ್ಲಿ (ಸಜ್ಜಿಗೆ) ಸತ್ತು ಬಿದ್ದ ಹಲ್ಲಿ ಕಂಡುಬಂದಿದ್ದು, ರೋಗಿಗಳು ಹಾಗೂ ಅವರ ಸಂಬಂಧಿಕರು ತೀವ್ರ ದಿಗ್ಭ್ರಮೆಗೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಬಾಣಂತಿಯರು ಹಾಗೂ ರೋಗಿಗಳಿಗೆ ಆಸ್ಪತ್ರೆ ಕ್ಯಾಂಟೀನ್‌ನಿಂದ ಉಪಹಾರವಾಗಿ ಶೀರವನ್ನು ನೀಡಲಾಗಿತ್ತು. ರೋಗಿಗಳು ಆಹಾರ ಸೇವಿಸುವ ವೇಳೆಯಲ್ಲಿ ಶೀರದೊಳಗೆ ತುಂಡು ತುಂಡಾಗಿ ಸತ್ತು ಬಿದ್ದಿದ್ದ ಹಲ್ಲಿಯ ದೇಹದ ಭಾಗಗಳು ಕಾಣಿಸಿಕೊಂಡಿವೆ.ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಏಕೆಂದರೆ, ಅಷ್ಟರೊಳಗಾಗಲೇ ಆಸ್ಪತ್ರೆಯ ಬಹುತೇಕ ಬಾಣಂತಿಯರು ಅದೇ ಶೀರವನ್ನು ಸೇವಿಸಿದ್ದರು.

ಕ್ಯಾಂಟೀನ್ ತಪಾಸಣೆ, ಬಯಲಾಯ್ತು ಅಸಲಿ ಬಣ್ಣ:

ಶೀರದಲ್ಲಿ ಹಲ್ಲಿ ಬಿದ್ದಿರುವುದನ್ನು ನೋಡಿ ರೋಷಿಹೋದ ರೋಗಿಗಳ ಸಂಬಂಧಿಕರು ಹಾಗೂ ಸಾರ್ವಜನಿಕರು ತಕ್ಷಣವೇ ಕ್ಯಾಂಟೀನ್‌ಗೆ ನುಗ್ಗಿ ಪರಿಶೀಲನೆ ನಡೆಸಿದರು. ಈ ವೇಳೆ ಕ್ಯಾಂಟೀನ್‌ನ ಒಳಗಿನ ಅಸಹ್ಯಕರ ವಾತಾವರಣ ಕಂಡು ಎಲ್ಲರೂ ಹುಬ್ಬೇರಿಸುವಂತಾಯಿತು.ಆಹಾರ ನೀಡುವ ಪ್ಲೇಟ್‌ಗಳ ಮೇಲೆಯೇ ಜಿರಳೆಗಳು ಮುಕ್ತವಾಗಿ ಹರಿದಾಡುತ್ತಿದ್ದುದು ಕಂಡುಬಂದಿದೆ. ಯಾವುದೇ ಕನಿಷ್ಠ ಸ್ವಚ್ಛತೆ ಹಾಗೂ ನೈರ್ಮಲ್ಯ ಪಾಲಿಸದೆ, ತೀರಾ ಕಳಪೆ ಮತ್ತು ಅಪಾಯಕಾರಿ ವಾತಾವರಣದಲ್ಲಿ ಆಹಾರ ತಯಾರಿಸಿ ಪೂರೈಸಲಾಗುತ್ತಿತ್ತು ಎಂಬುದು ಸಾರ್ವಜನಿಕರ ತಪಾಸಣೆ ವೇಳೆ ಸ್ಪಷ್ಟವಾಯಿತು.

ಬಾಣಂತಿಯರು ಹಾಗೂ ನವಜಾತ ಶಿಶುಗಳ ಆರೋಗ್ಯದ ವಿಚಾರದಲ್ಲಿ ಇಷ್ಟೊಂದು ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ವಹಿಸಿರುವ ಕ್ಯಾಂಟೀನ್ ಸಿಬ್ಬಂದಿ ಮತ್ತು ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ತೀವ್ರವಾಗಿ ಕಿಡಿಕಾರಿದರು. "ಆಸ್ಪತ್ರೆಗೆ ಗುಣಮುಖರಾಗಲು ಬಂದರೆ, ಇಲ್ಲಿ ನೀಡುವ ಆಹಾರದಿಂದ ಜೀವಕ್ಕೇ ಅಪಾಯ ಎದುರಾಗುತ್ತಿದೆ. ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಏನಾದರೂ ತೊಂದರೆಯಾದರೆ ಯಾರು ಹೊಣೆ?" ಎಂದು ರೋಗಿಗಳ ಸಂಬಂಧಿಕರು ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಘಟನೆ ಸಂಬಂಧ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಹಾಗೂ ತಪ್ಪಿತಸ್ಥ ಕ್ಯಾಂಟೀನ್ ಸಿಬ್ಬಂದಿ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕ್ಯಾಂಟೀನ್ ಪರವಾನಗಿ ರದ್ದುಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES