ಬೇಲೂರು: ಜಮೀನು ಹಂಚಿಕೆ ವ್ಯಾಜ್ಯ ಹಾಗೂ ಪಡಿತರ ಅಕ್ಕಿ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ತೀವ್ರ ಗಲಾಟೆ ಕೊ*ಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ಅಣ್ಣ ದೇವರಾಜ್ ಎಂಬಾತ ತನ್ನ ಸ್ವಂತ ತಮ್ಮ ರಘು (37) ಎಂಬಾತನಿಗೆ ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾನೆ.
ಘಟನೆಯ ವಿವರ: ಸೋಂಪುರ ಗ್ರಾಮದ ನಿವಾಸಿಗಳಾದ ದೇವರಾಜ್ ಮತ್ತು ರಘು ನಡುವೆ ಕಳೆದ ಹಲವು ವರ್ಷಗಳಿಂದ ಜಮೀನು ಭಾಗ ಮಾಡುವ ವಿಚಾರದಲ್ಲಿ ನಿರಂತರವಾಗಿ ಜಗಳ ನಡೆಯುತ್ತಿತ್ತು. ಇದರೊಂದಿಗೆ, ತಾಯಿಯ ಪಡಿತರ ಅಕ್ಕಿಯನ್ನು ಕಳೆದೆರಡು ವರ್ಷಗಳಿಂದ ರಘು ಒಬ್ಬನೇ ಪಡೆದುಕೊಳ್ಳುತ್ತಿದ್ದ ಎಂಬ ವಿಚಾರಕ್ಕೂ ಎರಡೂ ಕುಟುಂಬಗಳ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು.
ಶುಕ್ರವಾರದಂದು ಇದೇ ವಿಚಾರವಾಗಿ ಸಹೋದರರ ನಡುವೆ ಮಾತುಕತೆ ವಿಕೋಪಕ್ಕೆ ತಿರುಗಿ, ಕೋಪಗೊಂಡ ಅಣ್ಣ ದೇವರಾಜ್ ಚಾಕುವಿನಿಂದ ರಘುವಿಗೆ ತೀವ್ರವಾಗಿ ಇರಿದಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರಘುವನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಘು ಕೊನೆಯುಸಿರೆಳೆದಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೇಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಆರೋಪಿ ದೇವರಾಜ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.