ಮಂಡ್ಯ: ಸಾಮಾನ್ಯವಾಗಿ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಅಥವಾ ವಿದ್ಯುತ್ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದನ್ನು ನಾವು ನೋಡಿದ್ದೇವೆ. ಆದರೆ, ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಮತದಾರರು ಹಾಗೂ ರೈತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವಿಚಿತ್ರ ಮನವಿಯೊಂದು ಈಗ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಕ್ಷೇತ್ರದ ಶಾಸಕರು ಕೈಗೆ ಸಿಗುತ್ತಿಲ್ಲ ಎಂಬ ಬೇಸರದಿಂದ, ಅವರನ್ನು ಭೇಟಿ ಮಾಡಲಾದರೂ ನಮಗೆ ಅಮೆರಿಕಗೆ ಉಚಿತ ವೀಸಾ ಕೊಡಿಸಿ ಎಂದು ಜನತೆ ಜಿಲ್ಲಾಡಳಿತದ ಬಾಗಿಲು ತಟ್ಟಿದ್ದಾರೆ!
18 ಬಾರಿ ವಿದೇಶ ಪ್ರವಾಸ: ಶಾಸಕರ ವಿರುದ್ಧ ಆಕ್ರೋಶ:
ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ರೈತ ಸಂಘದ ಬೆಂಬಲದೊಂದಿಗೆ ಗೆದ್ದು ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಜನಕ್ರೋಶ ವ್ಯಕ್ತವಾಗುತ್ತಿದೆ. ರೈತರ ಹೆಸರಿನಲ್ಲಿ ಗೆದ್ದು ಬಂದಿರುವ ಏಕೈಕ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಶಾಸಕರಾದ ಬಳಿಕ ಬರೋಬ್ಬರಿ 18 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 300 ದಿನಗಳ ಕಾಲ ಅವರು ವಿದೇಶದಲ್ಲೇ ಕಾಲ ಕಳೆದಿದ್ದಾರೆ ಎಂಬುದು ಕೃಷಿಕರ ಆರೋಪ. ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಶಾಸಕರು, ಪದೇ ಪದೇ ಕ್ಷೇತ್ರವನ್ನು ತೊರೆದು ಅಮೆರಿಕಕ್ಕೆ ತೆರಳುತ್ತಿರುವುದು ಜನರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ.
ಪ್ರಸ್ತುತ ಮಂಡ್ಯ ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ಬರಗಾಲದ ಛಾಯೆ ಆವರಿಸಿದೆ. ರೈತರು ನೀರಿನ ಆಹಾಕಾರ, ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಜನರ ಜೊತೆ ನಿಂತು ಧೈರ್ಯ ತುಂಬಬೇಕಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತೆ ಅಮೆರಿಕಕ್ಕೆ ಹಾರಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾಗಲೂ ಶಾಸಕರು ಅಮೆರಿಕದಲ್ಲೇ ಇದ್ದರು. ಈಗಲೂ ಕ್ಷೇತ್ರದ ಜನರು ಹಾಗೂ ರೈತರ ಸಂಕಷ್ಟಗಳನ್ನು ಆಲಿಸದೆ ವಿದೇಶದಲ್ಲೇ ಉಳಿದುಕೊಂಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ "ನಾನು ಅಮೆರಿಕದಲ್ಲಿದ್ದ ಕಂಪನಿಯನ್ನು ಮಾರಾಟ ಮಾಡಿದ್ದೇನೆ, ಇನ್ಮುಂದೆ ಅಮೆರಿಕಗೆ ತೆರಳುವುದಿಲ್ಲ, ಸಂಪೂರ್ಣವಾಗಿ ಇಲ್ಲೇ ಇದ್ದು ರೈತರ ಹೋರಾಟ ಹಾಗೂ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ" ಎಂದು ಮತದಾರರಿಗೆ ಶಾಸಕರು ಭರವಸೆ ನೀಡಿದ್ದರು. ಆದರೆ ಈಗ ಮಾತು ತಪ್ಪಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂಬುದು ಸ್ಥಳೀಯರ ಗಂಭೀರ ಆರೋಪ.
"ಕ್ಷೇತ್ರದಲ್ಲಿದ್ದರೆ ಶಾಸಕರು ನಮಗೆ ಸಿಗುತ್ತಿಲ್ಲ, ಅವರ ಬಳಿ ನಮ್ಮ ಕಷ್ಟ-ಸುಖ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಮಗೆ ಅಮೆರಿಕಕ್ಕಾದರೂ ಹೋಗಿ ಅವರನ್ನ ಭೇಟಿಯಾಗಲು ಜಿಲ್ಲಾಡಳಿತವೇ ಉಚಿತವಾಗಿ ವೀಸಾ ಕೊಡಿಸಬೇಕು" ಎಂದು ಮೇಲುಕೋಟೆ ಕ್ಷೇತ್ರದ ಜನರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿನೂತನವಾಗಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ಈ ಧೋರಣೆಗೆ ಮತದಾರರು ಹಿಡಿಶಾಪ ಹಾಕುತ್ತಿದ್ದಾರೆ.