ಮುಂದಿನ 18 ತಿಂಗಳು ಏರ್ಪೋರ್ಟ್ ರಸ್ತೆ ಸಂಚಾರದಲ್ಲಿ ವ್ಯತ್ಯಯ: ಬದಲಿ ಮಾರ್ಗಗಳ ಪಟ್ಟಿ ಬಿಡುಗಡೆ
ರಾಜಧಾನಿ ವಾಹನ ಸವಾರರ ಗಮನಕ್ಕೆ.. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಎಲಿವೇಟೆಡ್ ಕಾರಿಡಾರ್ ಹಾಗೂ ಸುರಂಗ ರಸ್ತೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಬಳ್ಳಾರಿ ರಸ್ತೆಯ ಕ್ವಾರ್ಟರ್ಸ್ ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗಿನ ಮಾರ್ಗದಲ್ಲಿ ನಾಳೆಯಿಂದ ಮುಂದಿನ 18 ತಿಂಗಳುಗಳ ಕಾಲ ಎಲ್ಲಾ ಮಾದರಿಯ ಗೂಡ್ಸ್ ವಾಹನಗಳು ಮತ್ತು ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.. ಪರ್ಯಾಯ ಮಾರ್ಗ ಪಟ್ಟಿಯೂ ಸಹ ಬಿಡುಗಡೆಯಾಗಿದ್ದು, ಮಾಹಿತಿ ಇಲ್ಲಿದೆ..
ಬೆಂಗಳೂರು: ನಗರದಲ್ಲಿ ಬಿಡಿಎ ವತಿಯಿಂದ ಕೈಗೆತ್ತಿಕೊಂಡಿರುವ ಪ್ರಮುಖ ಕಾಮಗಾರಿಗಳ ಹಿನ್ನೆಲೆಯಲ್ಲಿ, ಏರ್ಪೋರ್ಟ್ ರಸ್ತೆಯಲ್ಲಿ ನಾಳೆಯಿಂದ ಮುಂದಿನ 18 ತಿಂಗಳುಗಳ ಕಾಲ ಎಲ್ಲಾ ಮಾದರಿಯ ಸರಕು ಸಾಗಣೆ (ಗೂಡ್ಸ್) ವಾಹನಗಳು ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರದ ಮೇಲೆ ಸಂಪೂರ್ಣ ನಿಷೇಧ ಹೇರಿ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ.
ಬಳ್ಳಾರಿ ರಸ್ತೆಯ ಕ್ವಾರ್ಟರ್ಸ್ ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗಿನ ವ್ಯಾಪ್ತಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕಾಮಗಾರಿಗಳು ಭರದಿಂದ ಸಾಗಲಿರುವ ಕಾರಣ, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರ ದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ದೀರ್ಘಕಾಲದವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಪ್ರವೇಶ ಇರುವುದಿಲ್ಲವಾದ್ದರಿಂದ, ವಾಹನ ಸವಾರರು ಹಾಗೂ ಸರಕು ಸಾಗಣೆದಾರರು ಮುಂಚಿತವಾಗಿ ಪರ್ಯಾಯ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯವಾಗಿದೆ.
ಪರ್ಯಾಯ ಮಾರ್ಗಗಳ ಪಟ್ಟಿ ಬಿಡುಗಡೆ
ಹೆಬ್ಬಾಳ ಮೂಲಕ ತೆರಳುವ ವಾಹನಗಳಿಗೆ: ಸಾಮಾನ್ಯವಾಗಿ ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ ಕಡೆಗೆ ಸಾಗುವ ವಾಹನಗಳು ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್, ಕಲ್ಪನಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್ ಹಾಗೂ ಕಂಟೋನ್ಮೆಂಟ್ ಟ್ಯಾನರಿ ರಸ್ತೆ ಮೂಲಕ ನಾಗವಾರ ತಲುಪಿ, ಅಲ್ಲಿಂದ ಏರ್ಪೋರ್ಟ್ ಕಡೆಗೆ ಪ್ರಯಾಣಿಸಲು ಸೂಚಿಸಲಾಗಿದೆ.
ಯಶವಂತಪುರದಿಂದ ಏರ್ಪೋರ್ಟ್ ರಸ್ತೆ ಕಡೆಗೆ ಸಾಗುವ ವಾಹನಗಳಿಗೆ: ಯಶವಂತಪುರ ಭಾಗದಿಂದ ಏರ್ಪೋರ್ಟ್ ರಸ್ತೆಯತ್ತ ತೆರಳಬೇಕಿದ್ದ ವಾಹನಗಳು ಮತ್ತಿಕೆರೆ ಹಾಗೂ ಬಿಇಎಲ್ ಬಳಿ ಬಲ ತಿರುವು ಪಡೆದುಕೊಂಡು, ರಿಂಗ್ ರೋಡ್ (Outer Ring Road) ಮೂಲಕ ಏರ್ಪೋರ್ಟ್ ರಸ್ತೆಯನ್ನು ಸೇರಿಕೊಳ್ಳಬೇಕು.
ಏರ್ಪೋರ್ಟ್‌ನಿಂದ ಸಿಟಿಗೆ ಬರುವ ಹೆಬ್ಬಾಳ ವಾಹನಗಳಿಗೆ: ವಿಮಾನ ನಿಲ್ದಾಣದ ಕಡೆಯಿಂದ ನಗರದ ಒಳಗೆ ಬರುವ ವಾಹನಗಳು ಹೆಬ್ಬಾಳದ ಬಳಿ ಎಡ ತಿರುವು ಪಡೆದು ನಾಗವಾರ ಜಂಕ್ಷನ್ ತಲುಪಿ, ಅಲ್ಲಿಂದ ಬಲ ತಿರುವು ಪಡೆದುಕೊಂಡು ಬಂಬು ಬಜಾರ್ ಜಂಕ್ಷನ್ ಮೂಲಕ ಸಂಚರಿಸಬಹುದು. ಪರ್ಯಾಯವಾಗಿ, ಹೆಬ್ಬಾಳದ ಬಳಿ ಬಲ ತಿರುವು ಪಡೆದು ಕುವೆಂಪು ಸರ್ಕಲ್ ಮೂಲಕ ಸಾಗಿ, ಗೊರಗುಂಟೆಪಾಳ್ಯ ಸರ್ಕಲ್ ಬಳಿ ಎಡ ತಿರುವು ಪಡೆದು ಡಾ. ರಾಜ್‌ಕುಮಾರ್ ರಸ್ತೆ ಮೂಲಕ ಸಿಟಿ ಪ್ರವೇಶಿಸಬಹುದಾಗಿದೆ.
ಹೆಬ್ಬಾಳದಿಂದ ಸಿಟಿ ಸೆಂಟರ್ ತಲುಪುವ ಮಾರ್ಗ: ಹೆಬ್ಬಾಳ ಫ್ಲೈಓವರ್ ಮೂಲಕ ಬ್ಯಾಪಿಸ್ಟ್ ಆಸ್ಪತ್ರೆ ತಲುಪಿ, ಅಲ್ಲಿಂದ ಸರ್ವೀಸ್ ರಸ್ತೆ ಮುಖಾಂತರ ಸಿಬಿಐ ಜಂಕ್ಷನ್ ವರೆಗೆ ಸಾಗಿ ಬಳ್ಳಾರಿ ರಸ್ತೆಯನ್ನು ರೀಚ್ ಆಗಲು ಅವಕಾಶ ಕಲ್ಪಿಸಲಾಗಿದೆ.
ಆನಂದನಗರ ಮತ್ತು ಆರ್.ಟಿ. ನಗರ ಕಡೆಗೆ ಹೋಗುವವರಿಗೆ: ಹೆಬ್ಬಾಳದಿಂದ ಆನಂದನಗರ ಹಾಗೂ ಆರ್.ಟಿ. ನಗರ ಕಡೆಗೆ ಸಂಚರಿಸುವ ವಾಹನಗಳು ಬ್ಯಾಪಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವೀಸ್ ರಸ್ತೆ ಸೇರಿ, ಆನಂದನಗರ ಕ್ರಾಸ್ ಮತ್ತು ಸಿಬಿಐ ಜಂಕ್ಷನ್ ಬಳಿ ಎಡ ತಿರುವು ಪಡೆದುಕೊಳ್ಳಬೇಕು. ಬಳಿಕ ಆನಂದನಗರ ಮುಖ್ಯ ರಸ್ತೆ ಮೂಲಕ ಆರ್.ಟಿ. ನಗರ ಹಾಗೂ ಜಯಮಹಲ್ ಕಡೆಗೆ ಸುಲಭವಾಗಿ ತಲುಪಬಹುದು.
ಮುಂದಿನ ಒಂದೂವರೆ ವರ್ಷಗಳ ಕಾಲ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ. ಕಾಮಗಾರಿಗಳು ಬೇಗ ಮುಗಿದು ಜನಸಾಮಾನ್ಯರಿಗೆ ಆಗುತ್ತಿರುವ ಸಂಚಾರ ದಟ್ಟಣೆಯ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸವಾರರು ಪೊಲೀಸರ ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೈಜೋಡಿಸಬೇಕಾಗಿ ವಿನಂತಿ.