SOCIAL MEDIA

Newsletter

PARTNER SITES
Select Language Select State

ಗಣೇಶ ವಿಸರ್ಜನೆಯಲ್ಲಿ ಗಲಾಟೆ : ಡಿಜೆ ವಾಹನದಿಂದ ಕೆಳಗಿಳಿಸಿದ್ದಕ್ಕೆ 3 ಚಾಕು ಇರಿ*ತ

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಾದ ಸಣ್ಣ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು, ರ*ಕ್ತಪಾತಕ್ಕೆ ದಾರಿಯಾಗಿದೆ. ಡಿಜೆ ವಾಹನದಿಂದ ಕೆಳಗಿಳಿಸಿದ ಕ್ಷುಲ್ಲಕ ಕಾರಣಕ್ಕೆ ಮೂವರು ಯುವಕರ ಮೇಲೆ ಚಾಕು ಹಾಗೂ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿದೆ.. ಈ ಕುರಿತ ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 29, 2026, 06:37 PM IST | Updated: Sep 29, 2026, 06:39 PM IST
Image Credit: Today Koppal News
Join

ಕೊಪ್ಪಳ : ಗಣೇಶ ಹಬ್ಬದ ಸಡಗರದ ನಡುವೆ ಗಂಗಾವತಿಯಲ್ಲಿ ರಕ್ತಪಾತ ಸಂಭವಿಸಿದೆ. ಮೆರವಣಿಗೆಯ ವೇಳೆ ಡಿಜೆ ವಾಹನದಿಂದ ಕೆಳಗೆ ಇಳಿಸಿದ ಸಣ್ಣ ವಿಚಾರಕ್ಕೆ ಶುರುವಾದ ಜಗಳ, ಚಾಕು ಇರಿತದ ಹಂತಕ್ಕೆ ತಲುಪಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆರಾಳ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೂವರು ಯುವಕರಿಗೆ ಭೀಕರವಾಗಿ ಚಾಕುವಿನಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಅದು ಭಾನುವಾರ ರಾತ್ರಿ ಆರಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೀತಿದ್ದ 14ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ. ಗ್ರಾಮದ ಯುವಕರೆಲ್ಲಾ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸ್ತಿದ್ರು. ಈ ವೇಳೆ ಕೆಲ ಯುವಕರು ಸ್ಪೀಕರ್ ಕಟ್ಟಿದ್ದ ವಾಹನದ ಮೇಲೆ ಹತ್ತಿ ಹುಚ್ಚೆದ್ದು ಕುಣಿಯೋಕೆ ಶುರು ಮಾಡಿದ್ರು. ಇದನ್ನು ಗಮನಿಸಿದ ಜಯಪ್ರಕಾಶ್ ಕೋರಿ ಮತ್ತು ಅವರ ಕಡೆಯವರು, ಸುರಕ್ಷತೆಯ ದೃಷ್ಟಿಯಿಂದ ವಾಹನದ ಮೇಲಿದ್ದವರನ್ನು ಕೆಳಗೆ ಇಳಿಸಿದ್ರು. ಆದರೆ, ಇದೇ ವಿಷಯಕ್ಕೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.

ಭಾನುವಾರ ನಡೆದ ಜಗಳ ಮನಸ್ಸಿನಲ್ಲಿಟ್ಟುಕೊಂಡು ಹಗೆ ಸಾಧಿಸ್ತಿದ್ದ ಆರೋಪಿಗಳು, ಸೋಮವಾರ ಮತ್ತೆ ಜಯಪ್ರಕಾಶ್ ಅವರೊಂದಿಗೆ ಕಿರಿಕ್ ತೆಗೆದಿದ್ದಾರೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆಯೇ ಏಕಾಏಕಿ ಮಾರಕಾಸ್ತ್ರಗಳನ್ನು ಹೊರತೆಗೆದ ದುಷ್ಕರ್ಮಿಗಳು ಜಯಪ್ರಕಾಶ್, ಗುರುಪ್ರಕಾಶ್ ಹಾಗೂ ದೊಡ್ಡಬಸವ ಅವರ ಮೇಲೆ ಭೀಕರವಾಗಿ ಮುಗಿಬಿದ್ದಿದ್ದಾರೆ. ಜಯಪ್ರಕಾಶ್ ಹಾಗೂ ಗುರುಪ್ರಕಾಶ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು, ರಕ್ತದ ಮಡುವಿನಲ್ಲಿ ಕೆಡವಿ ಸ್ಥಳದಿಂದ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಹೋದರರನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇತ್ತ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ದೊಡ್ಡಬಸವ ಅವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೃತ್ಯ ಎಸಗಿದ ಹನುಮೇಶ, ರುದ್ರೇಶ್, ಮಧು, ತೋಟಪ್ಪ, ಪ್ರಭು, ಪ್ರಕಾಶ್ ಹಾಗೂ ಪ್ರವೀಣ ಎಂಬ ಆರೋಪಿಗಳ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸಣ್ಣ ವಿಚಾರಕ್ಕೆ ಶುರುವಾದ ಜಗಳವೀಗ ಮೂವರ ಜೀವಕ್ಕೆ ಕಂಠಕವಾಗಿ ಪರಿಣಮಿಸಿದೆ. ಘಟನೆಯಿಂದ ಆರಾಳ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES