SOCIAL MEDIA

Newsletter

PARTNER SITES
Select Language Select State

ಹಾಲಿನ ಬೆಲೆ ಹೆಚ್ಚಳ, ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್!

ರಾಜ್ಯದಲ್ಲಿ ಈಗಾಗಲೇ ಹಾಲು ಮತ್ತು ಬಸ್ ದರ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆ ಪರಿಷ್ಕರಣೆಯ ಮತ್ತೊಂದು ಬಿಗ್ ಶಾಕ್ ನೀಡಲು ರೆಡಿಯಾಗಿದೆ.

Written By Yashaswini V
Published: Nov 02, 2026, 12:28 PM IST | Updated: Nov 02, 2026, 12:32 PM IST
Join

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹಾಲಿನ ಬೆಲೆ ಹೆಚ್ಚಳ ಹಾಗೂ ಬಸ್ ಟಿಕೆಟ್ ದರ ಏರಿಕೆಯ ಬಿಸಿಯಲ್ಲಿ ಬೆಂದು ಹೋಗಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಮತ್ತೊಂದು ದೊಡ್ಡ ಶಾಕ್ ನೀಡಲು ಸಜ್ಜಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹ ಜ್ಯೋತಿ ಯೋಜನೆಗೆ ಈಗ ಪರಿಷ್ಕರಣೆಯ ಕತ್ತರಿ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಗೃಹ ಜ್ಯೋತಿ ಯೋಜನೆಗೆ ಹೊಸ ಮಾನದಂಡಗಳನ್ನು ಅಳವಡಿಸಿ, ಅರ್ಹರಲ್ಲದ ಫಲಾನುಭವಿಗಳನ್ನು ಈ ಯೋಜನೆಯಿಂದ ಕೈಬಿಡುವ ನಿಟ್ಟಿನಲ್ಲಿ ಇಂಧನ ಇಲಾಖೆ ಮಹತ್ವದ ಸಿದ್ಧತೆ ಮಾಡಿಕೊಂಡಿದೆ.

ಮನೆ ಮನೆ ಸರ್ವೇ ಪೂರ್ಣ:
ಗೃಹ ಜ್ಯೋತಿ ಯೋಜನೆಯ ದುರುಪಯೋಗವನ್ನು ತಡೆಗಟ್ಟಲು ಹಾಗೂ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರವು ಐದು ಎಸ್ಕಾಂ ವ್ಯಾಪ್ತಿಯಲ್ಲಿ ವ್ಯಾಪಕವಾದ ಮನೆ ಮನೆ ಸರ್ವೇ ಕಾರ್ಯವನ್ನು ಕೈಗೊಂಡಿತ್ತು. ಅಕ್ಟೋಬರ್ 31ರೊಳಗೆ ಈ ಸರ್ವೇ ಪ್ರಕ್ರಿಯೆಯು ಅಧಿಕೃತವಾಗಿ ಪೂರ್ಣಗೊಂಡಿದ್ದು, ಇಂಧನ ಇಲಾಖೆಯು ಇಡೀ ರಾಜ್ಯದ ಸಮಗ್ರ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

3 ಲಕ್ಷಕ್ಕೂ ಹೆಚ್ಚು ಜನರಿಂದ ಸ್ವಯಂಪ್ರೇರಿತ ನಿರಾಕರಣೆ:
ಪ್ರಸ್ತುತ, ಇಡೀ ರಾಜ್ಯದಲ್ಲಿ ಒಟ್ಟು 1.64 ಕೋಟಿ ಗ್ರಾಹಕರು ಗೃಹ ಜ್ಯೋತಿ ಯೋಜನೆಯಡಿ ಶೂನ್ಯ ವಿದ್ಯುತ್ ಬಿಲ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಕೇವಲ ಬೆಸ್ಕಾಂ ವ್ಯಾಪ್ತಿಯೊಂದರಲ್ಲೇ ಬರೋಬ್ಬರಿ 68 ಲಕ್ಷ ಫಲಾನುಭವಿಗಳಿದ್ದಾರೆ. ವಿಶೇಷವೆಂದರೆ, ನಮಗೆ ಈ ಉಚಿತ ವಿದ್ಯುತ್ ಯೋಜನೆ ಬೇಡ ಎಂದು ಸುಮಾರು 3 ಲಕ್ಷಕ್ಕೂ ಅಧಿಕ ನಾಗರಿಕರು ಈಗಾಗಲೇ ಸ್ವಯಂಪ್ರೇರಿತರಾಗಿ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ.

ಕ್ಯಾಬಿನೆಟ್‌ನಲ್ಲಿ ಅಂತಿಮ ನಿರ್ಧಾರ:
ಇಂಧನ ಇಲಾಖೆ ಸಲ್ಲಿಸಲಿರುವ ಗೃಹ ಜ್ಯೋತಿ ಯೋಜನೆಯ ಸರ್ವೇ ವರದಿಯ ಆಧಾರದ ಮೇಲೆ ನವೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದೆ ಎನ್ನಲಾಗಿದೆ.

ಕ್ಯಾಬಿನೆಟ್‌ನಲ್ಲಿ ಯಾವ ವಿಚಾರಗಳು ಚರ್ಚೆಗೆ ಬರಬಹುದು?
* ಸದ್ಯ ಯಾರೆಲ್ಲ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ?
* ಸರ್ವೇ ಬಳಿಕ ಯೋಜನೆಗೆ ಏನೆಲ್ಲ ಮಾನದಂಡಗಳನ್ನ ಸೇರ್ಪಡೆ ಮಾಡಬೇಕು? 
* ಫ್ರೀ ವಿದ್ಯುತ್‌ ಸೌಲಭ್ಯ ನೀಡುವ ಗೃಹ ಜ್ಯೋತಿ ಯೋಜನೆಯಿಂದ ಯಾರನ್ನು ಕೈಬಿಡಬೇಕು?. 
* ಯೋಜನೆ ಪರಿಷ್ಕರಣೆ ಆದರೆ ಸರ್ಕಾರ ಮೇಲೆ ಆಗುವ ಎಫೆಕ್ಟ್ ಏನು?. 
ಹೀಗೆ ಎಲ್ಲಾ ಸಾಧಕ-ಭಾಧಕಗಳನ್ನು ಚರ್ಚಿಸಿ ಸರ್ಕಾರವು ಗೃಹ ಜ್ಯೋತಿ ಯೋಜನೆಯ ಕುರಿತಂತೆ ಹೊಸ ಮಾನದಂಡಗಳ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟ ಮಾಡಲಿದೆ. ಸದ್ಯಕ್ಕೆ ಉಚಿತ ವಿದ್ಯುತ್‌ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ನವೆಂಬರ್‌ ತಿಂಗಳು ನಿಜಕ್ಕೂ ಬೆಲೆ ಏರಿಕೆಯ ತಿಂಗಳಾಗಿದ್ದು, ಗೃಹಜ್ಯೋತಿಯ ಹೊಸ ಗೈಡ್‌ಲೈನ್ಸ್‌ ಜನಸಾಮಾನ್ಯರ ನಿದ್ದೆಗೆಡಿಸುವುದಂತೂ ಗ್ಯಾರಂಟಿ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES