ರಾಜ್ಯ ಸರ್ಕಾರದೊಂದಿಗೆ ಆಶಾ ಕಾರ್ಯಕರ್ತೆಯರ ಜೊತೆ ನಡೆದ ಎರಡು ಸುತ್ತಿನ ಸಭೆಗಳೂ ವಿಫಲವಾದ ಹಿನ್ನಲೆಯಲ್ಲಿ, ಗೌರವಧನ ಹೆಚ್ಚಳವೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಸತತ ಏಳನೇ ದಿನವೂ ಮುಂದುವರೆದಿದೆ. ಇದೀಗ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ನಡೆಸಿದ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಗುರುವಾರ ಸಿಎಂ ಜೊತೆ ಹಾಗೂ ನಿನ್ನೆ ಆರೋಗ್ಯ ಸಚಿವರ ಜೊತೆ ಸಭೆ ನಡೆಸಲಾಗಿತ್ತು. ಮುಂದಿನ ಅಧಿವೇಶನದಲ್ಲಿ ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ಮಾಡೋಣ, ಪ್ರತಿಭಟನೆ ಕೈಬಿಡಿ ಎಂದು ಸಿಎಂ ಮತ್ತು ಆರೋಗ್ಯ ಸಚಿವರು ಮನವಿ ಮಾಡಿದ್ದರು. ಆದರೆ, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಆಶಾ ಕಾರ್ಯಕರ್ತೆಯರು ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರೆಸಿದ್ದು ಬೇಡಿಕೆ ಈಡೇರಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಈಗಾಗಲೇ ಸಾಕಷ್ಟು ಸಹೋದ್ಯೋಗಿಗಳು ಅಸ್ವಸ್ಥಗೊಂಡಿದ್ದರೂ ಕೂಡ ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿರುವ ಆಶಾ ಕಾರ್ಯಕರ್ತೆಯರು, ನಾವು ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ನಮಗೇನಾದರೂ ಸಮಸ್ಯೆಯಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬೆಂಬಲ:-
ಹಗಲಿರುಳೆನ್ನದೆ ಕೊರೆಯುವ ಚಳಿಯಲ್ಲೂ ತಮ್ಮ ಪ್ರತಿಭಟನೆ ಮುಂದುವರೆಸಿರುವ ಆಶಾ ಕಾರ್ಯಕರ್ತೆಯರಿಗೆ ಬೆಂಬಲ ವ್ಯಕ್ತಪಡಿಸಿರುವ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್, ಈ ಕುರಿತಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ತುರ್ತಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಸುಮಲತಾ ಅಂಬರೀಶ್ ಈ ಪತ್ರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ʼಆಶಾ ಕಾರ್ಯಕರ್ತೆಯರುʼ ಅನಿವಾರ್ಯ ಭಾಗ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸುಮಲತಾ ಅಂಬರೀಶ್, ಹಲವು ದಿನಗಳಿಂದ ಚಳಿಯನ್ನೂ ಲೆಕ್ಕಿಸದೆ, ಬಯಲಿನಲ್ಲಿ ರಾತ್ರಿ ಪ್ರತಿಭಟನೆ ನಡೆಸುತ್ತಿರುವ ಈ ಮಹಿಳೆಯರ ಪರಿಸ್ಥಿತಿ ನಿಜಕ್ಕೂ ಕಳವಳಕಾರಿ ಆಗಿದೆ. ಸಮುದಾಯ ಆರೋಗ್ಯ ಸೇವೆಗಳು, ಗರ್ಭಿಣಿ ಮಹಿಳೆಯರು, ಹೆರಿಗೆ ಬಳಿಕ ತಾಯಿ-ಮಗುವಿನ ಆರೋಗ್ಯ ಹಾಗೂ ಲಸಿಕೆ ಹಾಕುವಿಕೆಯಂತಹ ಸೇವೆಗಳಲ್ಲಿ ಅವರು ನೀಡುತ್ತಿರುವ ಕೊಡುಗೆಗಾಗಿ ಸರ್ಕಾರದಿಂದ ಸೂಕ್ತ ಗೌರವ ದೊರೆಯಬೇಕು. ಅವರ ಜೀವನ ಮಟ್ಟ ಸುಧಾರಿಸಲು ಅವರು ಮಾಡುವ ಕೆಲಸಕ್ಕೆ ನ್ಯಾಯಯುತ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ಆರೋಗ್ಯ ವ್ಯವಸ್ಥೆಯಲ್ಲಿ ಇಷ್ಟು ಮಹತ್ವದ ಜವಾಬ್ದಾರಿ ಹೊತ್ತ ಮಹಿಳೆಯರು ಕೇವಲ ₹5,000 ಮಾಸಿಕ ಗೌರವಧನದಲ್ಲಿ ಬದುಕಬೇಕೆಂದು ನಿರೀಕ್ಷಿಸುವುದು ತೀವ್ರ ಕಳವಳಕಾರಿ ಸಂಗತಿ ಆಗಿದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ಇಷ್ಟು ಕಡಿಮೆ ಹಣದಲ್ಲಿ ಜೀನವ ಸಾಗಿಸುವುದು ನಿಜಕ್ಕೂ ದೊಡ್ಡ ಸವಾಲಿನ ವಿಷಯವಾಗಿದೆ. ಹಾಗಾಗಿ, ಆಶಾ ಕಾರ್ಯಕರ್ತೆಯರು ತಮ್ಮ ಗೌರವಧನವನ್ನು ₹15,000ಕ್ಕೆ ಏರಿಕೆ ಮಾಡಿ ಎಂದು ಬೇಡಿಕೆ ಇಟ್ಟಿರುವುದು ಸಮಂಜಸ ಮನವಿ ಆಗಿದೆ ಎಂದಿರುವ ಸುಮಲತಾ ಅಂಬರೀಶ್, ಈ ವಿಚಾರದಲ್ಲಿ ತಾವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಮಾನವೀಯತೆ ಮತ್ತು ಸಹಾನುಭೂತಿಯಿಂದ ಶೀಘ್ರವಾಗಿ ನ್ಯಾಯ ಒದಗಿಸಬೇಕೆಂದು ಹೂತೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ತಮ್ಮ ಸಮಯೋಚಿತ ಮಧ್ಯಪ್ರವೇಶದಿಂದ ಈ ಮಹಿಳೆಯರ ಸಕಾರಾತ್ಮಕ ಪರಿಹಾರ ದೊರೆತು, ಅವರು ಗೌರವಯುತವಾಗಿ ತಮ್ಮ ಮನೆಗಳಿಗೆ ಮರಳುವಂತಾಗಲಿ ಎಂದು ಆಶಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.