SOCIAL MEDIA

Newsletter

PARTNER SITES
Select Language Select State

ದೀಪಾವಳಿಗೆ ಬೇಕಾಬಿಟ್ಟಿ ಸಿಡಿಸುವಂತಿಲ್ಲ ʼಪಟಾಕಿʼ: ಈ ನಿಯಮಗಳ ಅನುಸರಣೆ ಕಡ್ಡಾಯ

ಸುಪ್ರೀಂಕೋರ್ಟ್‌ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಲು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತಂದಿದ್ದು ʼಪಟಾಕಿʼ ಸಿಡಿಸಲು ಕೇವಲ 2 ಗಂಟೆಗಳ ಕಾಲಾವಕಾಶವನ್ನು ಮಾತ್ರ ನಿಗದಿಪಡಿಸಿದೆ.

Written By Yashaswini V
Published: Nov 07, 2026, 08:21 IST | Updated: Nov 07, 2026, 08:23 IST
Join

ದೀಪಾವಳಿ ಕೇವಲ ಬೆಳಕಿನ ಹಬ್ಬ ಮಾತ್ರವಲ್ಲ, ಮಕ್ಕಳಿಗೆ ದೀಪಾವಳಿ ಎಂದರೆ ಪಟಾಕಿಯದ್ದೇ ಸಂಭ್ರಮ. ಹಾಗಂತ, ನೀವು ಬೇಕಾಬಿಟ್ಟಿ ಪಟಾಕಿ ಸಿಡಿಸಿದ್ರೆ ಸಂಕಷ್ಟಕ್ಕೆ ಸಿಲುಕಬಹುದು. ಹೌದು, ದೀಪಾವಳಿ ಎಂದು ಬೇಕಾಬಿಟ್ಟಿ ಪಟಾಕಿ ಸಿಡಿಸುವಂತಿಲ್ಲ. ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದ್ದು, ಈ ರೂಲ್ಸ್ ಬ್ರೇಕ್ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಂತೂ ಗ್ಯಾರಂಟಿ. ಏನದು ನಿಯಮ ಅಂತೀರಾ... ಈ ಸುದ್ದಿ ಒಮ್ಮೆ ಓದಿ.

ಬೆಳಕಿನ ಹಬ್ಬ ದೀಪಾವಳಿ ಎಂದರೆ ಎಲ್ಲರಿಗೂ ಸಡಗರ, ಸಂಭ್ರಮ. ಆದರೆ ಈ ಸಂದರ್ಭದಲ್ಲಿ, ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯವು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜೊತೆಗೆ, ಈ ಪಟಾಕಿ ಸಿಡಿತದಿಂದ ಪ್ರಾಣಹಾನಿ ಪ್ರಕರಣಗಳೂ ಹೆಚ್ಚಾಗುತ್ತಿವೆ.

ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಸಾಮಾನ್ಯ ಪಟಾಕಿಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಸ್ಫೋಟಗೊಂಡಾಗ ವಾತಾವರಣದಲ್ಲಿ ಅಪಾರ ಪ್ರಮಾಣದ ವಿಷಾನಿಲ ಬಿಡುಗಡೆಯಾಗಿ ವಾಯುಮಾಲಿನ್ಯ ಉಂಟಾಗುತ್ತದೆ.

ವರದಿಗಳ ಆಧಾರದ ಮೇಲೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪಟಾಕಿ ಸಿಡಿಸಲು ಕಟ್ಟುನಿಟ್ಟಿನ ಸಮಯವನ್ನು ನಿಗದಿಪಡಿಸಿದೆ. ನ್ಯಾಯಾಲಯದ ಆದೇಶದಂತೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇವಲ ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಅಂದರೆ ಕೇವಲ 2 ಗಂಟೆಗಳ ಕಾಲ ಮಾತ್ರ ಪಟಾಕಿಗಳನ್ನ ಸಿಡಿಸಲು ಅವಕಾಶ ನೀಡಲಾಗಿದೆ. ಉಳಿದ ಯಾವುದೇ ಸಮಯದಲ್ಲಿ ಪಟಾಕಿ ಸಿಡಿಸುವುದನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳು, ವೃದ್ಧಾಶ್ರಮಗಳು ಮತ್ತು ಅಧಿಸೂಚಿತ ಮೌನ ವಲಯಗಳ 300 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಟಾಕಿಗಳನ್ನು ಸಿಡಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ಪ್ರದೇಶಗಳನ್ನು ಶಿಕ್ಷಣ ಸಂಸ್ಥೆಗಳ ಜೊತೆಗೆ 'ಕ್ರ್ಯಾಕರ್ ನಿಷೇಧಿತ ವಲಯಗಳು' ಎಂದು ಗೊತ್ತುಪಡಿಸಲಾಗುತ್ತದೆ. ಈ ವಲಯಗಳನ್ನು ಸೂಕ್ತವಾಗಿ ಗುರುತಿಸಲಾಗಿದೆ ಮತ್ತು ಪ್ರಚಾರ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನ್ಯಾಯಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸುರಕ್ಷಿತ ದೀಪಾವಳಿ ಆಚರಣೆ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

* ಮಾರ್ಗಸೂಚಿಗಳ ಪ್ರಕಾರ, ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ಅನುಸಾರವಾಗಿ, ಜನರು ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ ಬಳಸಬೇಕು ಮತ್ತು ರಾತ್ರಿ 8 ರಿಂದ 10 ಗಂಟೆಯವರೆಗೆ ಕಟ್ಟುನಿಟ್ಟಾಗಿ ಸಿಡಿಸಬೇಕು ಎಂದು ಸೂಚಿಸಲಾಗಿದೆ.
* ಆಸ್ಪತ್ರೆಗಳು, ಪೆಟ್ರೋಲ್ ಪಂಪ್‌ಗಳು, ಪೆಟ್ರೋಲ್ ಬಂಕ್‌ಗಳು ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮಗಳು ಮತ್ತು ಶಿಶುಪಾಲನಾ ಕೇಂದ್ರಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. 
* ಮುಖ್ಯ ರಸ್ತೆಗಳಲ್ಲಿ, ಜನದಟ್ಟಣೆಯ ಪ್ರದೇಶಗಳಲ್ಲಿ ಮತ್ತು ನಿಲುಗಡೆ ಮಾಡಿದ ವಾಹನಗಳ ಬಳಿ ಪಟಾಕಿಗಳನ್ನು ಸಿಡಿಸುವುದನ್ನು ತಪ್ಪಿಸಿ, ಬದಲಾಗಿ ತೆರೆದ ಮೈದಾನಗಳು ಮತ್ತು ಕಡಿಮೆ ಜನದಟ್ಟಣೆ ಇರುವ ಸ್ಥಳಗಳನ್ನು ಬಳಸುವಂತೆ ಜನರಿಗೆ ಸೂಚಿಸಲಾಗಿದೆ.
* ಪ್ರಾಣಿಗಳಿಗೆ ತೊಂದರೆಯಾಗದಂತೆ ಅಥವಾ ಹಾನಿಯಾಗದಂತೆ ವಿಶೇಷ ಕಾಳಜಿ ವಹಿಸಬೇಕು. ಪಟಾಕಿಗಳನ್ನು ಸಿಡಿಸಿದ ನಂತರ, ಜನರು ಪಟಾಕಿಗಳ ಅವಶೇಷಗಳನ್ನು ಬಕೆಟ್‌ನಲ್ಲಿ ಸಂಗ್ರಹಿಸಿ ನೀರು ಅಥವಾ ಮರಳನ್ನು ಬಳಸಿ ಸಂಪೂರ್ಣವಾಗಿ ನಂದಿಸಬೇಕು. ಆಟದ ಮೈದಾನಗಳು, ರಸ್ತೆಗಳು ಮತ್ತು ತೆರೆದ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹ ಅವರಿಗೆ ಸೂಚಿಸಲಾಗಿದೆ.
* ಅಪಘಾತ ಸಂಭವಿಸಿದಲ್ಲಿ, ಜನರು ತಕ್ಷಣವೇ 112 ಅಥವಾ 108 ಗೆ ಕರೆ ಮಾಡಿ ವೈದ್ಯಕೀಯ ನೆರವು ಪಡೆಯಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಕಾನೂನು ಕ್ರಮದ ಎಚ್ಚರಿಕೆ: 
ರಾತ್ರಿ 8 ರಿಂದ 10 ರವರೆಗೆ ಅನುಮತಿಸಲಾದ ಸಮಯವನ್ನು ಮೀರಿ ಪಟಾಕಿಗಳನ್ನು ಸಿಡಿಸುವುದು ಅಥವಾ ನಿಗದಿತ ನಿಯಮಗಳನ್ನು ಉಲ್ಲಂಘಿಸಿದರೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023, ಸ್ಫೋಟಕ ಕಾಯ್ದೆ, 1884, ಮಾಲಿನ್ಯ ನಿಯಂತ್ರಣ ಕಾನೂನುಗಳು ಮತ್ತು ಇತರ ಅನ್ವಯವಾಗುವ ಶಾಸನಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ.

2026ನೇ ಸಾಲಿನ ದೀಪಾವಳಿ ಹಬ್ಬವನ್ನ ಪರಿಸರ ಸ್ನೇಹಿ ದೀಪಾವಳಿಯಾಗಿ ಆಚರಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES