7ನೇ ದಿನವೂ ಕಳೆಗಟ್ಟಿದ ಹಾಸನಾಂಬೆ ಸನ್ನಿಧಿ : ಸಿನಿತಾರೆಯರ ವಿಶೇಷ ದರ್ಶನ, ಸಾಧು ಸಂತರಿಂದ ಪೂಜೆ
ಏಳನೇ ದಿನವೂ ತಾಯಿ ಹಾಸನಾಂಬೆಯ ದರ್ಶನಕ್ಕೆ ಅಪಾರ ಭಕ್ತರು ಹಾಗೂ ಸಾಧು ಸಂತರ ಮಹಾಪೂರವೇ ಹರಿದುಬಂದಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜನ ತಾಯಿಯ ದರ್ಶನ ಪಡೆಯುತ್ತಿದ್ದರೆ, ಇತ್ತ ರಾಜಕೀಯ ಗಣ್ಯರು, ಮಠಾಧೀಶರು, ನಾಗಸಾಧುಗಳು ಹಾಗೂ ಸ್ಯಾಂಡಲ್‌ವುಡ್‌ನ ತಾರೆಯರು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿ ಹಾಸನಾಂಬೆಯ ಸನ್ನಿಧಿಯಲ್ಲಿ ಭಕ್ತಿಯ ಸಂಭ್ರಮ ಮುಂದುವರಿದಿದೆ. ದಿನಗಳು ಉರುಳುತ್ತಿದ್ದರೂ ತಾಯಿಯ ದರ್ಶನ ಪಡೆಯುವ ಭಕ್ತರ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಬೆಳಗಾದರೆ ಸಾಕು, ದೇವಸ್ಥಾನದತ್ತ ಭಕ್ತರ ಹೆಜ್ಜೆ... ಸರತಿ ಸಾಲುಗಳಲ್ಲಿ ಗಂಟೆಗಟ್ಟಲೆ ಕಾದರೂ ತಾಯಿಯ ದರ್ಶನ ಪಡೆಯಲೇಬೇಕೆಂಬ ಭಕ್ತರ ಹಂಬಲ... ಏಳನೇ ದಿನವಾದ ಇಂದು ಕೂಡ ರಾಜಕೀಯ ನಾಯಕರು, ಮಠಾಧೀಶರು, ನಾಗಸಾಧುಗಳು ಹಾಗೂ ಸ್ಯಾಂಡಲ್‌ವುಡ್‌ನ ತಾರೆಯರು ಹಾಸನಾಂಬೆಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾಗಾದರೆ ಏಳನೇ ದಿನದ ಹಾಸನಾಂಬೆ ದರ್ಶನೋತ್ಸವ ಹೇಗಿತ್ತು..? ಯಾರೆಲ್ಲ ಗಣ್ಯರು ತಾಯಿಯ ದರ್ಶನ ಪಡೆದರು..? ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ..
ಹೌದು.. ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವಕ್ಕೆ ಇಂದು ಏಳನೇ ದಿನ. ಏಳನೇ ದಿನವೂ ದೇವಿಯ ದರ್ಶನಕ್ಕಾಗಿ ಭಕ್ತರ ಮಹಾಪೂರವೇ ಹರಿದುಬಂದಿದ್ದು, ದೇವಸ್ಥಾನದ ಆವರಣದ ಎಲ್ಲಾ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ನಿನ್ನೆ ಮಧ್ಯರಾತ್ರಿ 12.30ರಿಂದ ಇಂದು ಬೆಳಗಿನ ಜಾವ 5 ಗಂಟೆಯವರೆಗೆ ಅಲಂಕಾರ ಹಾಗೂ ನೈವೇದ್ಯದ ಹಿನ್ನೆಲೆಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗಿತ್ತು. ಹೀಗಾಗಿ ರಾತ್ರಿಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಕಾದು ನಿಂತಿದ್ದರು.
ಬೆಳಗ್ಗೆ ಬಾಗಿಲು ತೆರೆದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಧರ್ಮದರ್ಶನದ ಸಾಲಿನಲ್ಲಿ ಭಕ್ತರ ದಂಡೇ ನೆರೆದಿತ್ತು. ಇನ್ನು 1,000 ಹಾಗೂ 300 ರೂಪಾಯಿ ವಿಶೇಷ ದರ್ಶನದ ಸಾಲುಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಇದರ ನಡುವೆ ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಕುಟುಂಬ ಸಮೇತರಾಗಿ ಆಗಮಿಸಿ ತಾಯಿಯ ದರ್ಶನ ಪಡೆದರೆ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಸಂಬಂಧಿಕರೊಂದಿಗೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಕೂಡ ಕುಟುಂಬ ಸಮೇತರಾಗಿ ಹಾಸನಾಂಬೆಯ ದರ್ಶನ ಪಡೆದರು. ರಾಜಕೀಯ ಗಣ್ಯರ ಜೊತೆಗೆ ವಿವಿಧ ಮಠಗಳ ಮಠಾಧೀಶರು ಹಾಗೂ ನಾಗಸಾಧುಗಳು ಕೂಡ ತಾಯಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ಹಾಸನಾಂಬೆ ದರ್ಶನಕ್ಕೆ ವಿವಿಧ ಮಠದ ಸ್ವಾಮೀಜಿಗಳು ಹಾಗೂ ನಾಗಸಾಧುಗಳ ಭೇಟಿ ನೀಡಿ ತಾಯಿಯ ದರ್ಶನವನ್ನು ಪಡೆದುಕೊಂಡ್ರು. ಹಾಸನಾಂಬೆಯ ಸನ್ನಿಧಿಯಲ್ಲಿ ರಾಜಕಾರಣಿಗಳಷ್ಟೇ ಅಲ್ಲ, ಚಿತ್ರರಂಗದ ಗಣ್ಯರ ಆಗಮನವೂ ವಿಶೇಷ ಗಮನ ಸೆಳೆಯಿತು. ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲ, ಹಿರಿಯ ನಟ ಟೆನ್ನಿಸ್ ಕೃಷ್ಣ ಹಾಗೂ ನಟಿ ಅಮೂಲ್ಯ ಅವರು ದೇವಾಲಯಕ್ಕೆ ಭೇಟಿ ನೀಡಿ ತಾಯಿ ಹಾಸನಾಂಬೆಯ ದರ್ಶನ ಪಡೆದರು. ತಾಯಿಯ ಸನ್ನಿಧಿಯಲ್ಲಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದ ತಾರೆಯರನ್ನು ನೋಡಲು ಅಭಿಮಾನಿಗಳು ಕೂಡ ಆಸಕ್ತಿ ತೋರಿದರು. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಆಶೀರ್ವಾದ ಪಡೆಯಲು ಸಿನಿಮಾ ಕ್ಷೇತ್ರದ ಗಣ್ಯರು ಆಗಮಿಸಿದ್ದು, ಏಳನೇ ದಿನದ ದರ್ಶನೋತ್ಸವಕ್ಕೆ ಮತ್ತಷ್ಟು ವಿಶೇಷ ಮೆರುಗು ನೀಡಿತು.
ಒಟ್ಟಿನಲ್ಲಿ ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವದ ಏಳನೇ ದಿನವೂ ಭಕ್ತರ ಉತ್ಸಾಹಕ್ಕೆ ಯಾವುದೇ ಕೊರತೆಯಾಗಿಲ್ಲ. ರಾಜಕೀಯ ನಾಯಕರು, ವಿವಿಧ ಮಠಗಳ ಸ್ವಾಮೀಜಿಗಳು, ನಾಗಸಾಧುಗಳು ಹಾಗೂ ಸಿನಿಮಾ ತಾರೆಯರು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ತಾಯಿಯ ದರ್ಶನ ಪಡೆದು ಪುನೀತರಾದರು. ಒಟ್ಟಾರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ, ಗಣ್ಯರ ಭೇಟಿ ಹಾಗೂ ಭಕ್ತಿಭಾವದ ವಾತಾವರಣದೊಂದಿಗೆ ಹಾಸನಾಂಬೆ ದರ್ಶನೋತ್ಸವ ಮುಂದುವರಿದಿದೆ. ಅಷ್ಟೇ ಅಲ್ಲದೆ, ಮುಂದಿನ ದಿನವೂ ಅಪಾರ ಭಕ್ತರು ಬಂದು ತಾಯಿಯ ದರ್ಶನ ಪಡೆಯುವ ಸಾಧ್ಯತೆ ಇದೆ.