ಹಗರಿಬೊಮ್ಮನಹಳ್ಳಿ (ವಿಜಯನಗರ): ಸಾಲಸೋಲ ಮಾಡಿ ತೆರೆದ ಕೊಳವೆಬಾವಿಯನ್ನು ನಂಬಿ, ಕಷ್ಟಪಟ್ಟು ಬಿತ್ತಿದ್ದ ಮೆಕ್ಕೆಜೋಳದ ಬೆಳೆ ಕಣ್ಣೆದುರೇ ಒಣಗಿ ಬರಿದಾಗಿದ್ದನ್ನು ಸಹಿಸಲಾಗದೆ, ಆ ಬೆಳೆಗೆ ಕುರಿ ಮತ್ತು ಜಾನುವಾರುಗಳನ್ನು ಮೇಯಲು ಬಿಟ್ಟು ರೈತನೊಬ್ಬ ಕಣ್ಣೀರಿಟ್ಟ ದಯನೀಯ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ರಾಯರಾಳ ತಾಂಡಾದ ರೈತ ಲೋಕ್ಯಾನಾಯ್ಕ ಎಂಬುವರೇ ಈ ರೀತಿ ಸಂಕಷ್ಟಕ್ಕೆ ಸಿಲುಕಿದ ದುರದೃಷ್ಟಕರ ಕೃಷಿಕ. ತಮ್ಮ 3.16 ಎಕರೆ ಜಮೀನಿನಲ್ಲಿ ಸುಮಾರು ₹50 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದರು. ಆದರೆ ಪ್ರಕೃತಿಯ ಮುನಿಸು ಹಾಗೂ ಅಂತರ್ಜಲದ ಕುಸಿತ ಅವರ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ.
ಮುಂಗಾರು ಮಳೆ ಸರಿಯಾಗಿ ಆಗದಿದ್ದರೂ, ತಮ್ಮ ಜಮೀನಿನ ಕೊಳವೆಬಾವಿ ನೀರನ್ನು ನೆಚ್ಚಿಕೊಂಡು ಲೋಕ್ಯಾನಾಯ್ಕ ಮೆಕ್ಕೆಜೋಳದ ಪೈರು ಬೆಳೆಸಿದ್ದರು. ಆದರೆ ದಿನಕಳೆದಂತೆ ಮಳೆಯ ಅಭಾವ ತೀವ್ರಗೊಂಡು, ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿಯಿತು. ಪರಿಣಾಮವಾಗಿ ಕೊಳವೆಬಾವಿಯಲ್ಲಿ ನೀರು ಸಂಪೂರ್ಣ ಬತ್ತಿಹೋಯಿತು. ಇತ್ತ ಮಳೆಯೂ ಇಲ್ಲದೆ, ಅತ್ತ ಕೊಳವೆಬಾವಿಯಲ್ಲೂ ನೀರಿಲ್ಲದೆ ಬೆಳೆದಿದ್ದ ಇಡೀ ಮೆಕ್ಕೆಜೋಳದ ಬೆಳೆ ಕಣ್ಣೆದುರಲ್ಲೇ ಒಣಗಿ ಬೂದಿಯಂತಾಯಿತು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ವೇದನೆಯಲ್ಲಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ, ಒಣಗಿ ನಿಂತಿದ್ದ ಇಡೀ ಮೆಕ್ಕೆಜೋಳದ ಬೆಳೆಗೆ ಕುರಿ ಹಾಗೂ ಜಾನುವಾರುಗಳನ್ನು ಮೇಯಲು ಬಿಟ್ಟು ತಮ್ಮ ಸಂಕಟವನ್ನು ಹೊರಹಾಕಿದ್ದಾರೆ. ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಲೋಕ್ಯಾನಾಯ್ಕ ಕಂಗಾಲಾಗಿದ್ದಾರೆ.
ಈಗಾಗಲೇ ಸರ್ಕಾರ ಹಗರಿಬೊಮ್ಮನಹಳ್ಳಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಹೀಗಾಗಿ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯಬಹುದು ಎನ್ನುವ ಆಸೆಯಲ್ಲಿ ರೈತ ಕುಟುಂಬ ದಿನ ದೂಡುತ್ತಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೃಷಿ ತಾಂತ್ರಿಕ ಅಧಿಕಾರಿ ಶಿವಮೂರ್ತಿ ನಾಯ್ಕ ಅವರು, ರೈತರು ಬೆಳೆ ವಿಮೆ (ಫಸಲ್ ಬಿಮಾ) ಮಾಡಿಸಿದ್ದರೆ ಖಂಡಿತವಾಗಿ ನಿಯಮಾವಳಿಗಳ ಪ್ರಕಾರ ಸೂಕ್ತ ಪರಿಹಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಆದರೆ ಬೆಳೆ ನಷ್ಟದಿಂದ ಕಂಗೆಟ್ಟಿರುವ ರೈತರಿಗೆ ಶೀಘ್ರವಾಗಿ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.