SOCIAL MEDIA

Newsletter

PARTNER SITES
Select Language Select State

ಶಿವಂ ಅಸೋಸಿಯೇಟ್ಸ್ ನೀಲಣ್ಣನವರ್‌ಗೆ ED ಶಾಕ್‌..! 427 ಕೋಟಿ ರೂ. ಆಸ್ತಿ ಜಪ್ತಿ

ಜಾರಿ ನಿರ್ದೇಶನಾಲಯ 'ಶಿವಂ ಅಸೋಸಿಯೇಟ್ಸ್' ಶಿವಾನಂದ ನೀಲಣ್ಣನವರ್‌ ಮತ್ತು ಅವರ ಕುಟುಂಬಕ್ಕೆ ಶಾಕ್‌ ನೀಡಿದೆ.. ಇ.ಡಿ ಅಧಿಕಾರಿಗಳು, ಬರೋಬ್ಬರಿ 427 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.. ವಿವರಗಳು ಈ ಕೆಳಗಿನಂತಿವೆ..

Written By Krishna NK
Published: Oct 31, 2026, 04:19 PM IST | Updated: Oct 31, 2026, 04:21 PM IST
Image Credit: shivananda neelannavar
Join

ಬೆಂಗಳೂರು : ಬೆಳಗಾವಿ ಮೂಲದ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಿಗಿ ಕ್ರಮ ಕೈಗೊಂಡಿದೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಆಘಾತ ನೀಡಿರುವ ಇ.ಡಿ ಅಧಿಕಾರಿಗಳು, ಬರೋಬ್ಬರಿ 427 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸಾಮಾನ್ಯ ಜನರ ಆಸೆಗೆ ಬ್ಲಾಕ್‌ಮೇಲ್‌ ಮಾಡಿ, ಅಧಿಕ ಬಡ್ಡಿ ಆಮಿಷವೊಡ್ಡಿ ಕೋಟ್ಯಂತರ ಹಣ ಸಂಗ್ರಹಿಸಿ ಕೈಕೊಟ್ಟಿದ್ದ ಈ ಕಳ್ಳಾಟದ ಕರಾಳ ಮುಖ ಈಗ ಒಂದೊಂದಾಗಿ ಹೊರಬೀಳುತ್ತಿದೆ.

ಹೂಡಿಕೆದಾರರಿಗೆ ಬಂಗಾರದ ಆಮಿಷ, ಕೊನೆಗೆ ಕಣ್ಣೀರು
ಬೆಳಗಾವಿ ಭಾಗದಲ್ಲಿ ಭಾರೀ ಸದ್ದು ಮಾಡಿದ್ದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಸುಮಾರು 35,000ಕ್ಕೂ ಅಧಿಕ ಅಮಾಯಕ ಹೂಡಿಕೆದಾರರನ್ನು ನಂಬಿಸಿ, ಒಟ್ಟು 2,459 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಸಂಗ್ರಹಿಸಿತ್ತು. ಆದರೆ, ಈ ಹಣವನ್ನು ಸುರಕ್ಷಿತವಾಗಿಡದೆ ಅಕ್ರಮ ಮಾರ್ಗದಲ್ಲಿ ಬೇರೆಡೆಗೆ ವರ್ಗಾಯಿಸಲಾಗಿತ್ತು. ಹೂಡಿಕೆದಾರರಿಂದ ಸಂಗ್ರಹಿಸಿದ ಈ ಹಣದಲ್ಲಿ ಬಹುಪಾಲು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಆದರೆ, ಷೇರು ಮಾರುಕಟ್ಟೆಯ ಏರಿಳಿತ ಹಾಗೂ ತಪ್ಪಾದ ಹೂಡಿಕೆಯಿಂದ ಬರೋಬ್ಬರಿ 185.95 ಕೋಟಿ ರೂಪಾಯಿ ನಿವ್ವಳ ನಷ್ಟ ಉಂಟಾಗಿದೆ ಎಂಬುದು ಇ.ಡಿ ತನಿಖೆಯಿಂದ ಬಯಲಾಗಿದೆ.

ಜಪ್ತಿಯಾಗಿರುವ ಆಸ್ತಿಯ ವಿವರಗಳು ಹೀಗಿವೆ
ಇ.ಡಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಒಟ್ಟು 427 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಸೀಜ್ ಮಾಡಲಾಗಿದೆ. ಫಿಕ್ಸೆಡ್ ಡೆಪಾಸಿಟ್ (FD) ರೂಪದಲ್ಲಿದ್ದ ಭರ್ಜರಿ ₹367 ಕೋಟಿ ಜಪ್ತಿ. ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ₹44 ಕೋಟಿ ನಗದು ಸೀಜ್. ಕೃಷಿ ಜಮೀನು ಹಾಗೂ ಬಂಗಲೆಯಂತಹ ಒಟ್ಟು ₹13 ಕೋಟಿ ಮೌಲ್ಯದ ಸ್ಥಿರಾಸ್ತಿಗಳು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದ ₹1.31 ಕೋಟಿ ಮೌಲ್ಯದ ಷೇರುಗಳು.

ಮಡದಿ, ಮಗನ ಖಾತೆಗೂ ಹರಿದಿತ್ತು ಹಣ
ತನಿಖೆಯ ವೇಳೆ ಹಣಕಾಸು ವರ್ಗಾವಣೆಯ ಅಕ್ರಮ ಚಟುವಟಿಕೆಗಳ ಸ್ಪಷ್ಟ ಸುಳಿವು ಸಿಕ್ಕಿದೆ. ಸುಮಾರು 25 ಕೋಟಿ ರೂಪಾಯಿ ಹಣವನ್ನು ಎರಡು ಸಹಕಾರಿ ಕ್ರೆಡಿಟ್ ಸೊಸೈಟಿಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ. ವಿಶೇಷವೆಂದರೆ, ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಸೃಷ್ಟಿಸಿ, ಅದರ ಆಧಾರದ ಮೇಲೆ ತಮ್ಮ ಸಹಚರರ ಹೆಸರಿನಲ್ಲಿ ಸಾಲ ಪಡೆಯಲಾಗಿದೆ. ಈ ಸಾಲದ ಹಣವನ್ನು ಹಾಗೂ ವಂಚನೆಯ ಹಣವನ್ನು ಹೊಸ ಜಮೀನುಗಳನ್ನು ಖರೀದಿಸಲು ಬಳಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಶಿವಾನಂದ ನೀಲಣ್ಣನವರ್ ಅವರ ಪತ್ನಿ ಸಂಗೀತಾ ಮತ್ತು ಮಗ ಸಿದ್ಧಾಂತ್ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೂ ಅಪಾರ ಪ್ರಮಾಣದ ಹಣ ವರ್ಗಾವಣೆ ಆಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬೆಳಗಾವಿಯಿಂದ ಮಂಗಳೂರು ಕೋರ್ಟ್ ವರೆಗೂ ವಿಸ್ತರಿಸಿದ ತನಿಖಾ ಜಾಲ
ಈ ವಂಚನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಎಂಟ್ರಿ ಕೊಟ್ಟರು. 2026ರ ಆಗಸ್ಟ್ ತಿಂಗಳಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಸೇರಿದಂತೆ ಒಟ್ಟು 8 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಈ ರೇಡ್ ವೇಳೆ ಮಹತ್ವದ ದಾಖಲೆಗಳು, ಕೈಬರಹದ ಲೆಕ್ಕಪತ್ರಗಳು ಮತ್ತು ಮೊಬೈಲ್ ಸೇರಿದಂತೆ ಹಲವಾರು ಡಿಜಿಟಲ್ ಸಾಕ್ಷ್ಯಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ಸಾಕ್ಷ್ಯಗಳು ಕೈಗೆ ಸಿಕ್ಕ ಬಳಿಕ ಎಚ್ಚೆತ್ತ ಇ.ಡಿ ಅಧಿಕಾರಿಗಳು, 2026ರ ಆಗಸ್ಟ್ 8ರಂದೇ ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದರು. ತನಿಖೆ ಮುಂದುವರೆಸಿದ ಬಳಿಕ, ಅಕ್ಟೋಬರ್ 9ರಂದು ಶಿವಾನಂದ ನೀಲಣ್ಣ ಸೇರಿದಂತೆ ಒಟ್ಟು ಐವರು ಆರೋಪಿಗಳ ವಿರುದ್ಧ ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಅಧಿಕೃತವಾಗಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅಧಿಕ ಬಡ್ಡಿಯ ಆಸೆಗೆ ಬಿದ್ದು ಶಿವಂ ಅಸೋಸಿಯೇಟ್ಸ್‌ನಲ್ಲಿ ತೊಡಗಿಸಿದ್ದ ಸಾವಿರಾರು ಹೂಡಿಕೆದಾರರು ಈಗ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇ.ಡಿಯ ಈ ಕಠಿಣ ಕ್ರಮದಿಂದಲಾದರೂ ತಮಗೆ ನ್ಯಾಯ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES