ಬಾಗಲಕೋಟೆ : ರಸ್ತೆಯ ಮೇಲೆ ನಿಂತು ಮನೆಗಳತ್ತ ಕಲ್ಲು ತೂರುತ್ತಿರುವ ಒಂದು ಗುಂಪು. ಆ ಕಡೆಯಿಂದಲೂ ಕಲ್ಲು ತೂರಾಟ. ಕೋಲು ದೊಣ್ಣೆ ಹಿಡಿದು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಎರಡು ಗುಂಪುಗಳು. ಮೂಕ ವಿಸ್ಮಿತರಾಗಿ ನೋಡುತ್ತಿರುವ ಸಾರ್ವಜನಿಕರು. ಈ ಎಲ್ಲಾ ದೃಶ್ಯಗಳಿಗೆ ಬೆಳೆಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲೆಯ ರಬಕವಿಬ್ಬನಹಟ್ಟಿಯ ರಬಕವಿ ನಗರದ ದಾಸರಮಡ್ಡಿ ಓಣಿ.
ಹೌದು.. ಈ ದಾಸರ ಮಡ್ಡಿ ಓಣಿಯಲ್ಲಿರುವ ದುರ್ಗಾದೇವಿ ದೇವಸ್ಥಾನದ ಅಭಿವೃದ್ಧಿಗಾಗಿ ಒಂದೇ ಸಮುದಾಯದ ಬಾಂಧವರೆಲ್ಲ ಪಟ್ಟಿ ಹಾಕಿ ಹಣವನ್ನ ಸಂಗ್ರಹಿಸಿ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ದೇವಸ್ಥಾನದ ಕಟ್ಟಡ ಕಾಮಗಾರಿ ಕೂಡ ನಡೆದಿದೆ. ಆದರೆ ಈ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಸಂಗ್ರಹಿಸಿದ ಹಣದ ಲೆಕ್ಕದ ವಿಚಾರಕ್ಕಾಗಿ ಜಗಳ ಆರಂಭವಾಗಿದೆ. ಇದೇ ಜಗಳಗೊಂಡ ಬಗೆಹರಿಸುವುದಕ್ಕೆ ಕಳೆದ ಸಪ್ಟಂಬರ್ 25ರ ರಾತ್ರಿ ಹೊತ್ತು ಆ ಸಮುದಾಯದ ಹಿರಿಯರಲ್ಲ ಒಂದೆಡೆ ಸೇರಿದ್ರು.
ದೇವಸ್ಥಾನದ ಅಭಿವೃದ್ಧಿಗಾಗಿ ಸಂಗ್ರವಾಗಿದ್ದ ಅಂದಾಜು ಸುಮಾರು 20 ಲಕ್ಷಕ್ಕೂ ಅಧಿಕ ಹಣದ ಲೆಕ್ಕವನ್ನು ಚಂದ್ರು ಎನ್ನುವ ಮುಖಂಡನ ಗುಂಪಿನ ಸದಸ್ಯರು ಇನ್ನೊಂದು ಗುಂಪಿನ ಚನ್ನಬಸು ಗುಂಪಿನ ಸದಸ್ಯರನ್ನ ಕೇಳಿದಾರೆ. ಆಗ ವಾಗ್ವಾದ ಶುರುವಾಗಿ ಜಗಳ ಜೋರಾಗುವ ಹಂತಕ್ಕೆ ಹೋಗಿದೆ. ಹಾಗಾಗಿ ಸ್ಥಳದಲ್ಲಿ ನಡೆದಿದ್ದ ಹಿರಿಯರು ಸೋಮವಾರ ದಿನ ಲೆಕ್ಕ ನೋಡೋಣ ಈಗ ತೆರಳಿ ಎಂದು ಎರಡು ಗುಂಪಿನವರನ್ನ ಸಮಾಧಾನ ಮಾಡಿ ಕಳಿಸಿದ್ದಾರೆ. ಆದರೆ ಹಿರಿಯರು ಜಗಳ ಬಗೆ ಹರಿಸಲು ಕೂಡಿದ ಸ್ಥಳದಿಂದ ಕೂಗುಳತೆ ದೂರಕ್ಕೆ ಚಂದ್ರುವಿನ ಗುಂಪಿನ ಸದಸ್ಯರು ಬಂದಾಗ ಅತ್ತ ಇನ್ನೊಂದು ಕಡೆ ಚನ್ನಬಸುವಿನ ಗುಂಪಿನವರು ಕೋಲು ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಕಲ್ಲು ತೂರಾಟ ನಡೆಸುವ ಹೊಡೆದಾಡಿಕೊಳ್ಳುವ ವಿಡಿಯೋಗಳು ಸದ್ಯಕ್ಕೆ ವೈರಲ್ ಆಗಿವೆ. ಗಲಾಟೆಯಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇದರಿಂದ ಒಂದಿಷ್ಟು ಜನರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ
ಇನ್ನು ಚೆನ್ನಬಸು ದೇವಸ್ಥಾನಕ್ಕೆ ಎಲ್ಲ ಭಕ್ತರು ಪಟ್ಟಿ ಹಾಕಿ ಕೂಡಿಸಿದ ಹಣವನ್ನು ನಾನೆ ಕೂಡಿಸಿದ್ದೇನೆ ಎಂಬಂತೆ ವಾಟ್ಸಾಪ್ ಸ್ಟೇಟಸ್ ನಲ್ಲಿ ಬಿಲ್ಡಪ್ ಕೊಟ್ಟಿದ್ದನಂತೆ, ಇದು ಕೂಡ ಚಂದ್ರು ಇಮ್ಮಡಿ ಗುಂಪಿನ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಲೆಕ್ಕ ಕೇಳಲು ಹೋದಾಗ ಜಗಳ ನಡೆದು ಅನಾಹುತ ಆಗಿದೆ. ಇನ್ನು ಎರಡು ಗುಂಪಿನ ಸದಸ್ಯರ ನಡುವೆ ಗಲಾಟೆ ತೀವ್ರಗೊಂಡಾಗ ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ ನೀಡಿ ಗಲಾಟೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಗಲಾಟೆಯಲ್ಲಿ ಎರಡು ಗುಂಪಿನ ಸುಮಾರು 11 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸುಮಾರು 3 ರಿಂದ 4 ಜನರಿಗೆ ತೀವ್ರ ಪ್ರಮಾಣದ ಗಾಯಗಳಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯೆಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಲಾಟೆ ವಿಚಾರವಾಗಿ ಸುಮಾರು 11 ಜನರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದ್ದು ಎರಡು ಕಡೆ ಗುಂಪಿನವರಿಂದ ತೇರದಾಳ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಥಳೀಯ ಸಿಸಿಟಿವಿ ಹಾಗೂ ಮೊಬೈಲ್ ದೃಶ್ಯಾವಳಿಗಳು ಸೇರಿದಂತೆ ಇತರೆ ಮೂಲಗಳಿಂದ ಇನ್ನೊಂದಿಷ್ಟು ಜನ ಆರೋಪಿಗಳನ್ನ ವಶಕ್ಕೆ ಪಡೆಯುವಲ್ಲಿ ಪೊಲೀಸ್ ಇಲಾಖೆ ತನಿಖೆಯನ್ನು ನಡೆಸುತ್ತಿದೆ.
ಈ ವೇಳೆ ಮಾತನಾಡಿದ ಎಸ್‌ಪಿ ಸಿದ್ಧಾರ್ಥ ಗೋಯಲ್ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಸುಮಾರು 15 ಲಕ್ಷ ಹಣವನ್ನು ಒಂದು ಸಮುದಾಯದವರು ಪಟ್ಟಿ ಹಾಕಿ ಸಂಗ್ರಹಿಸಿದ್ದರು, ಇತರೆ ಮೂಲಗಳಿಂದ ಕೂಡ 5 ಲಕ್ಷ ಹಣವನ್ನು ಸಂಗ್ರಹಿಸಲಾಗಿತ್ತು. ಹೀಗಾಗಿ ದೇವಸ್ಥಾನದ ಅಭಿವೃದ್ಧಿಗಾಗಿ ಬಳಸುತ್ತಿರುವ ಹಣದ ಲೆಕ್ಕಾಚಾರದ ಕುರಿತು ಎರಡು ಗುಂಪಿನವರ ನಡುವೆ ಜಗಳ ನಡೆದಿದ್ದು. ಹಿರಿಯರು ಜಗಳವನ್ನ ಬಗೆಹರಿಸಲು ಮುಂದಾಗಿದ್ದರು ಇದೇ ಸಂದರ್ಭದಲ್ಲಿ ಗಲಾಟೆ ನಡೆದಿದ್ದು ಸದ್ಯಕ್ಕೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದರು.
ಒಟ್ಟಾರೆ ದೇವಸ್ಥಾನದ ವಿಚಾರದಲ್ಲಿ ಭಕ್ತಿ ಶ್ರದ್ಧೆ ಮೆರೆಯ ಬೇಕಾದವರು ಅದೇ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು ಸದ್ಯಕ್ಕೆ ಎರಡು ಗುಂಪಿನವರ ಮೇಲೆ ಪ್ರಕರಣಗಳು ದಾಖಲಾಗಿವೆ. ಇನ್ನು ಪೊಲೀಸ್ರ ತನಕೆಯಿಂದಷ್ಟೇ ದೇವಸ್ಥಾನದ ಅಭಿವೃದ್ಧಿ ವಿಚಾರವಾಗಿ ಸಂಗ್ರಹದ ಹಣದ ಲೆಕ್ಕಾಚಾರದ ಸತ್ಯಾಸತ್ಯತೆಯ ವಿಚಾರ ಬೆಳಕಿಗೆ ಬರಬೇಕಾಗಿದ್ದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಜರುರಗಿಸಬೇಕಾಗಿದೆ.